ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮುಗ್ಗರಿಸಿದ ಬಿಜೆಪಿ

Karnataka Local Election Result -2019

03-06-2019

ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಭಾರಿಸಿದ್ದ ಬಿಜೆಪಿ ಪಕ್ಷ, ಸ್ಥಳೀಯ ಸಂಸ್ಥೆ ಚುನಾವಣೆ ಯಲ್ಲಿ ಮುಗ್ಗರಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸ್ವಕ್ಷೇತ್ರದಲ್ಲಿಯೇ ಬಿಜೆಪಿ ಹೀನಾಯ ಸೋಲು ಅನುಭವಿಸಿದ್ದು, ಕಾಂಗ್ರೆಸ್ ಮೈತ್ರಿ ಅಧಿಕಾರದ ಗದ್ದುಗೆ ಹಿಡಿದಿದೆ. ಶಿಕಾರಿಪುರ ಪುರಸಭೆಯ 23 ಸ್ಥಾನಗಳಲ್ಲಿ ಕಾಂಗ್ರೆಸ್ 12, ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ಬಿಜೆಪಿ 8 ಸ್ಥಾನಗಳಿಗೆ ತೃಪ್ತಿಪಟ್ಟಿಕೊಳ್ಳಬೇಕಾಗಿದೆ. ಮೂರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಶಿರಾಳಕೊಪ್ಪ ಕೂಡ ಕಾಂಗ್ರೆಸ್ ಮೈತ್ರಿ ಪಾಲಾಗಿದೆ. ಒಟ್ಟು 12 ಸ್ಥಾನಗಳಲ್ಲಿ ಕಾಂಗ್ರೆಸ್ 07, ಬಿಜೆಪಿ 02, ಜೆಡಿಎಸ್ 03 ಸ್ಥಾನ ಪಡೆದುಕೊಂಡಿದೆ.

ಸೊರಬದಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಬಿಜೆಪಿ ಬೇಧಿಸಿದೆ. ಒಟ್ಟು 11 ಸ್ಥಾನಗಳಲ್ಲಿ ಬಿಜೆಪಿ 06, ಕಾಂಗ್ರೆಸ್04, ಜೆಡಿಎಸ್ 01, ಪಕ್ಷೇತರ 01 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಸಾಗರ ನಗರಸಭೆ ಈ ಬಾರಿ ಬಿಜೆಪಿ ಪಾಲಾಗಿದೆ. ಒಟ್ಟು 31 ಸ್ಥಾನಗಳಲ್ಲಿ ಬಿಜೆಪಿ 16, ಕಾಂಗ್ರೆಸ್ 09, ಜೆಡಿಎಸ್ 01 ಹಾಗೂ ಸ್ವತಂತ್ರ ಅಭ್ಯರ್ಥಿ 1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.

ಹೊಸನಗರ ಪಟ್ಟಣ ಪಂಚಾಯಿತಿ ಚುನಾವಣೆ ಯಲ್ಲಿ ಈ ಬಾರಿ ಕಾಂಗ್ರೆಸ್ ಮೈತ್ರಿ ಮೇಲುಗೈ ಸಾಧಿಸಿದೆ. ಒಟ್ಟು 11 ಸ್ಥಾನಗಳಲ್ಲಿ ಕಾಂಗ್ರೆಸ್ 4, ಬಿಜೆಪಿ 4, ಜೆಡಿಎಸ್ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಅತಂತ್ರವಾದ ದೇವನಹಳ್ಳಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪುರಸಭೆ ಚುನಾವಣಾ ಫಲಿತಾಂಶ ಇಂದು ಬಂದಿದ್ದು, 23 ವಾರ್ಡ್​ಗಳಲ್ಲಿ ಕಾಂಗ್ರೆಸ್ 10, ಜೆಡಿಎಸ್ 7, ಪಕ್ಷೇತರ 3, ಬಿಎಸ್ಪಿ 1 ಮತ್ತು ಬಿಜೆಪಿಯ ‌2 ಅಭ್ಯರ್ಥಿಗಳು ಗೆದ್ದಿದ್ದಾರೆ. ಇಲ್ಲಿ ಜೆಡಿಎಸ್​ಗೆ ಭಾರಿ ಮುಖಭಂಗ ಉಂಟಾಗಿದೆ.

ಯಾರಿಗೂ ಮ್ಯಾಜಿಕ್‌ ನಂಬರ್ ಬರದೇ ಇರುವುದರಿಂದ ಅತಂತ್ರ ಸ್ಥಿತಿ ತಲುಪಿರುವ ದೇವನಹಳ್ಳಿ ಪುರಸಭೆಯಲ್ಲಿ ಅಧಿಕಾರಕ್ಕೇರಲು ಕಾಂಗ್ರೆಸ್ ಬಾರಿ‌ ಕಸರತ್ತು ನಡೆಸುತ್ತಿದ್ದು, ಪಕ್ಷೇತರ ಅಭ್ಯರ್ಥಿಗಳಿಗೆ ಭಾರಿ‌‌ ಡಿಮ್ಯಾಂಡ್ ಬಂದಿದೆ. ಇನ್ನು ಪುರಸಭೆಯಲ್ಲಿ ಅಧಿಕಾರ ಗದ್ದುಗೆ ಹಿಡಿಯಲು ಬೇಕಾದ ಮ್ಯಾಜಿಕ್ ನಂಬರ್ 13 ಪಡೆಯಲು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ. ಯಾರಿಗೂ ಬಹುಮತ ಬಾರದ ಕಾರಣ ಅಧಿಕಾರ ಹಿಡಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕಸರತ್ತು ನಡೆಸುತ್ತಿವೆ.

ನೆಲಮಂಗಲ ಪುರಸಭೆಯ 23 ವಾರ್ಡ್​ಗಳ ಮತ ಎಣಿಕೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿದ್ದು. ಪುರಸಭೆಯ ಅಧಿಕಾರ ಹಿಡಿಯಲು ಜೆಡಿಎಸ್ ಪಕ್ಷ ಯಶಸ್ವಿಯಾಗಿದೆ

ಪುರಸಭೆಯ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, 23 ವಾರ್ಡ್​ಗಳ ಪೈಕಿ ಜೆಡಿಎಸ್ 13 ವಾರ್ಡ್​ಗಳಲ್ಲಿ ಗೆಲವು ಪಡೆಯುವ ಮೂಲಕ ಪುರಸಭೆಯಲ್ಲಿ ಅಧಿಕಾರವನ್ನು ಹಿಡಿದಿದೆ. ಮತ ಎಣಿಕೆಯ ಪ್ರಾರಂಭದಲ್ಲಿ ಪೈಪೋಟಿ ನೀಡಿದ್ದ ಕಾಂಗ್ರೆಸ್, 7 ವಾರ್ಡ್ ಗಳ ಗೆಲುವಿಗೆ ಸೀಮಿತವಾಯ್ತು. ಇನ್ನೂ ಬಿಜೆಪಿ ಎರಡು ವಾರ್ಡ್ ಗಳಲ್ಲಿ ಜಯಗಳಿಸಿದೆ. ಪಕ್ಷೇತರ ಅಭ್ಯರ್ಥಿ ಒಂದು ಸ್ಥಾನ ಪಡೆದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Congress JDS BJP Election


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ