ಸೈಬರ್ ಅಪರಾಧಗಳಿಗೆ ಶಿಕ್ಷೆ ನೀಡಲು ಸಾಧ್ಯವಾಗುತ್ತಿಲ್ಲ !  

Kannada News

08-06-2017 210

ಬೆಂಗಳೂರು:- ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸೈಬರ್ ಅಪರಾಧದಡಿ ದಾಖಲಾಗಿರುವ ದೂರಿನಡಿ ಈವರೆಗೂ ಶಿಕ್ಷೆ ನೀಡಲು ಸಾಧ್ಯವಾಗಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು. ಸೈಬರ್ ಅಪರಾಧದಡಿ ತನಿಖೆ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಅಂತಾರಾಜ್ಯ ಮತ್ತು ವಿದೇಶಗಳಲ್ಲಿ ಇದರ ಮೂಲವನ್ನು ಪತ್ತೆ ಮಾಡಬೇಕು. ಹಾಗಾಗಿ ಬಹುಬೇಗನೆ ಮೂಲವನ್ನು ಪತ್ತೆ ಮಾಡಿ ಶಿಕ್ಷೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಬಿಜೆಪಿಯ ವಿ. ಸೋಮಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಪರಮೇಶ್ವರ್ ಅವರು ಕೇಂದ್ರ ಸರ್ಕಾರವು ರಾಜ್ಯದೊಂದಿಗೆ ಕಾನೂನುಗಳ ವಿಚಾರದಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ವಿಪ್ರೋ ಸಂಸ್ಥೆಗೆ ಬಂದ ಬೆದರಿಕೆ ಪ್ರಕರಣವನ್ನು ಪ್ರಸ್ತಾಪಿಸಿದ ಗೃಹ ಸಚಿವರು ಇನ್ನೂ ಕೂಡ ಅದರ ಮೂಲವನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದರು. 2015 ರಲ್ಲಿ 1447, 2016 ರಲ್ಲಿ 1226, 2017 ರಲ್ಲಿ ಮೇ 31ರವರೆಗೆ 679 ಸೈಬರ್ ಅಪರಾಧಗಳು ನಡೆದಿವೆ. ಪ್ರತಿ ಅಪರಾಧಿಗಳು ತಮ್ಮ ಮೊಬೈಲ್ ಸಿಮ್ ಅನ್ನು ಆಗಾಗ್ಗೆ ಬದಲಾಯಿಸುತ್ತಿರುವುದರಿಂದ ಇಂತರ ಅಪರಾಧಿಗಳನ್ನು ಪತ್ತೆ ಮಾಡುವುದು ಕಷ್ಟಸಾಧ್ಯವಾಗುತ್ತಿದೆ ಎಂದು ಹೇಳಿದರು. ಸೈಬರ್ ಕ್ರೈಮ್ ಮತ್ತು ಆನ್ ಲೈನ್ ವಂಚನೆಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರವು ಸಾರ್ವಜನಿಕರಿಗೆ ಫೇಸ್ ಬುಕ್, ವಾಟ್ಸಾಪ್ ಮೂಲಕ ಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದರು. ಬೆಂಗಳೂರಿನಲ್ಲಿ ಸಿಐಡಿ ಘಟಕ, ಪೊಲೀಸ್ ಆಯುಕ್ತರ ಕಚೇರಿ, ಕೇಂದ್ರ ವಲಯ ಕಚೇರಿ, ಮೈಸೂರು, ದಾವಣಗೆರೆ, ಧಾರವಾಡ, ಕಲಬುರಗಿ, ಮಂಗಳೂರು, ನಗರಗಳಲ್ಲಿ ಸೈಬರ್ ಅಪರಾಧ ಠಾಣೆಗಳನ್ನು ಸ್ಥಾಪಿಸಲಾಗಿದೆ. ಇಂತಹ ಅಪರಾಧಗಳಿಗೆ ತಾಂತ್ರಿಕ ಪರಿಣಿತಿ ಪಡೆದವರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ