ಮಕ್ಕಳಿಗೆ ಕಥೆ ಹೇಳೋಕೆ ಮರೀಬೇಡಿ..!

Kannada News

08-06-2017

ಮೊದಲೆಲ್ಲ ಮನೆ ತುಂಬಾ ಜನ. ಅಜ್ಜ ಅಜ್ಜಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹೀಗೆ… ತುಂಬಿದ ಸಂಸಾರ… ಚಿಕ್ಕ ಮಕ್ಕಳಿಗೆ ಅಪ್ಪ ಅಮ್ಮನಿಗಿಂತ ಅಜ್ಜ-ಅಜ್ಜಿಯರ ಮೇಲೇ ಪ್ರೀತಿ ಜಾಸ್ತಿ. ಅದಕ್ಕೆ ಮುಖ್ಯ ಕಾರಣ ಅಜ್ಜ-ಅಜ್ಜಿ ಹೇಳೋ ಕಥೆ.

ಹೌದು.. ಬಾಲ್ಯವೆಂದರೆ ಆಟ, ಪಾಠದ ಜೊತೆಗೆ ಅಜ್ಜಿ ಹೇಳ್ತಿದ್ದ ಕಥೆ ನೆನಪಿಗೆ ಬರುತ್ತೆ. ಕಾಗಕ್ಕ-ಗುಬ್ಬಕ್ಕನ ಕಥೆ, ಪುಣ್ಯಕೋಟಿ ಕಥೆ, ರಾಜಕುಮಾರನ ಕಥೆ, ರಾಕ್ಷಸರ ಕಥೆ ಹೀಗೆ ಹತ್ತಾರು ಕಥೆಗಳು ಇನ್ನೂ ನೆನಪಿನಲ್ಲಿರುತ್ತವೆ. ಹೀಗೆ ಕಥೆ ಹೇಳೋದು ಬರೀ ಮಕ್ಕಳನ್ನು ನಿದ್ದೆ ಮಾಡಿಸೋಕೆ ಮಾತ್ರವಲ್ಲ ಇದರಿಂದ ಇನ್ನೂ ಅನೇಕ ಆರೋಗ್ಯಕರ ಪ್ರಯೋಜನಗಳಿವೆ ಅನ್ನೋದು ಇತ್ತೀಚಿನ ಸಂಶೋಧನೆಯಿಂದ ಬೆಳಕಿಗೆ ಬಂದಿದೆ.

ಕಥೆಗಳನ್ನು ಮಕ್ಕಳ ಎದುರಿನಲ್ಲಿ ಓದುವುದರಿಂದ ಅಥವಾ ಕಥೆ ಹೇಳೋದ್ರಿಂದ ಮಕ್ಕಳಲ್ಲಿ ಸಾಕಷ್ಟು ಆರೋಗ್ಯಕರ ಬೆಳವಣಿಗೆಗಳು ಆಗುತ್ತವಂತೆ. ಮುಖ್ಯವಾಗಿ ಮೆದುಳಿನ ಬೆಳವಣಿಗೆ. ಮಕ್ಕಳಲ್ಲಿ ಮೆದುಳಿನ ಅಭಿವೃದ್ಧಿ ಹಾಗೂ ಬೆಳವಣಿಗೆ ಚೆನ್ನಾಗಿ ಆದಲ್ಲಿ ಮಾತ್ರ ಅವರಲ್ಲಿ ಅನೇಕ ಚಟುವಟಿಕೆಗಳು, ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ರೀತಿ, ಗ್ರಹಿಕಾ ಶಕ್ತಿ, ನೆನಪಿನ ಶಕ್ತಿ ಹೀಗೆ ಬೇರೆ ಬೇರೆ ಗುಣಗಳು ಬೆಳೆಯುತ್ತಾ ಹೋಗುತ್ತವೆ. ಅಲ್ಲದೇ ಕಥೆ ಹೇಳುವಾಗ ಮಗು ಅನೇಕ ಪ್ರಶ್ನೆಗಳನ್ನೂ ಕೇಳುತ್ತೆ. ಇದರಿಂದ ಮಕ್ಕಳ ಬುದ್ಧಿ ಚುರುಕಾಗುತ್ತೆ ಅಂತಾ ಹೇಳಲಾಗುತ್ತಿದೆ.

ಕಥೆ ಹೇಳೋದ್ರಿಂದ ಇನ್ನೂ ಸಾಕಷ್ಟು ಪ್ರಯೋಜನಗಳಿವೆ. ಕಥೆಯನ್ನು ಕೇಳುವ ಮಕ್ಕಳಲ್ಲಿ ಭಾಷಾ ಜ್ಞಾನ ಚೆನ್ನಾಗಿರುತ್ತದೆ. ಕಥೆಯಲ್ಲಿ ಬರುವ ಸಾಹಿತ್ಯ, ಮಾತುಗಳು, ಅದನ್ನು ಭಾಷೆಯ ಮೂಲಕ ವ್ಯಕ್ತಪಡಿಸುವುದನ್ನು ಎಳೆಯ ಮೆದುಳು ಚೆನ್ನಾಗಿ ಗ್ರಹಿಸುತ್ತದೆ.

ಮಕ್ಕಳು ಹೆಚ್ಚು ಹೆಚ್ಚು ಕಥೆ ಕೇಳುವುದರಿಂದ ಉತ್ತಮ ಸಂವಹನ ಕೌಶಲ್ಯ ಬೆಳೆಸಿಕೊಳ್ಳುತ್ತಾರೆ. ಎಲ್ಲಿ ಏನು ಮಾತನಾಡಬೇಕೆಂದು ತಿಳಿದುಕೊಳ್ಳುತ್ತಾರೆ. ಅದೇ ರೀತಿ ವರ್ತಿಸುತ್ತಾರೆ. ದಿನವೂ ಮಕ್ಕಳಿಗೆ ಕಥೆ ಹೇಳುವುದರಿಂದ ಪೋಷಕರು ಹಾಗೂ ಮಕ್ಕಳ ನಡುವೆ ಉತ್ತಮ ಬಾಂಧವ್ಯ ಬೆಳೆಯುತ್ತದೆ. ತಂದೆ ತಾಯಿಗೆ ಮಕ್ಕಳು ಇನ್ನಷ್ಟು ಹತ್ತಿರವಾಗುತ್ತಾರೆ.

ಆದರೆ ಇಂದಿನ ಬ್ಯುಸಿ ಲೈಫ್ ನಲ್ಲಿ ತಂದೆ-ತಾಯಿಗೆ ಕೆಲಸದ ಒತ್ತಡ. ಪೋಷಕರು ಆಫೀಸ್ ನಲ್ಲಾದರೆ ಮುದ್ದು ಮಗು ಡೇ ಕೇರ್ ನಲ್ಲಿ. ಪೋಷಕರಿಗೆ ನೂರಾರು ಕಮಿಟ್ ಮೆಂಟ್, ದುಡ್ಡು ಮಾಡೋ ತವಕವಾದರೆ ಮಗು ಇಲ್ಲಿ ಪ್ರೀತಿ ಇಲ್ಲದೇ, ಪೋಷಣೆ ಇಲ್ಲದೇ ಕೊರಗುತ್ತದೆ. ಇದರ ಮಧ್ಯೆ ಕಥೆ ಹೇಳೋಕೆ ಎಲ್ಲಿ ಸ್ವಾಮಿ ಸಮಯ ಅಂದಿರಾ..? ಆದರೆ ನೆನಪಿಡಿ, ನೀವು ಸಮಯ ಮಾಡಿಕೊಳ್ಳಲೇ ಬೇಕು. ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ. ಚಿಕ್ಕವರಿರುವಾಗಲೇ ಅವರಿಗೆ ಒಳ್ಳೆಯ ಸಂಸ್ಕಾರ ನೀಡಿ, ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಒತ್ತು ನೀಡಬೇಕು. ರಾತ್ರಿ ಮಲಗುವಾಗಲಾದರೂ ಚಿಕ್ಕ ಪುಟ್ಟ ಕಥೆಗಳನ್ನು ಓದಿ ಹೇಳಿದರೆ ಪುಟ್ಟ ಮಕ್ಕಳಲ್ಲಿ ಅದೆಷ್ಟೋ ಕೌಶಲ್ಯಗಳು ಅಭಿವೃದ್ಧಿಯಾಗುತ್ತವೆ. ನೀವು ಕೊಡುವ ಕೆಲವೇ ನಿಮಿಷಗಳಲ್ಲಿ ಇಷ್ಟೊಂದು ಪ್ರಯೋಜನವಿದೆ ಎಂದಾದಲ್ಲಿ ದಿನಕ್ಕೊಂದು ಕಥೆ ಹೇಳೋದು ಹೆಚ್ಚಲ್ಲ ತಾನೇ?


ಸಂಬಂಧಿತ ಟ್ಯಾಗ್ಗಳು

ಕಥೆ ಕೌಶಲ್ಯ ಕೌಶಲ್ಯ ಕೌಶಲ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ