ಸರ್ಕಾರ ವಿಸರ್ಜಿಸಿ, ಮಧ್ಯಂತರ ಚುನಾವಣೆ ನಡೆಸಿ: ಬಿಎಸ್ವೈ

28-05-2019
ಬೆಂಗಳೂರು: ನಾವು 28 ಲೋಕಸಭೆ ಕ್ಷೇತ್ರಗಳ ಪೈಕಿ 25ರಲ್ಲಿ ಗೆದ್ದಿದ್ದೇವೆ. ಇದು ಐತಿಹಾಸಿಕ ಗೆಲುವು ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದರು. ರಾಜ್ಯ ಸರ್ಕಾರದ ಅಸ್ತಿತ್ವದ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರವನ್ನು ವಿಸರ್ಜಿಸಬೇಕು ಮತ್ತು ಮಧ್ಯಂತರ ಚುನಾವಣೆ ನಡೆಯಬೇಕು. ಬಿಜೆಪಿಯ ಯಾವೊಬ್ಬ ಶಾಸಕರು ಕಾಂಗ್ರೆಸ್ ಅಥವಾ ಜೆಡಿಎಸ್ ಜೊತೆ ಸಂಪರ್ಕದಲ್ಲಿ ಇಲ್ಲ ಎಂದರು.
ಲೋಕಸಭೆ ಚುನಾವಣೆ ನಂತರ ಸರ್ಕಾರ ರಚಿಸುವುದಾಗಿ ಹೇಳುತ್ತಿದ್ದ ಬಿಎಸ್ವೈ ಇದ್ದಕ್ಕಿದ್ದಂತೆ ಮಧ್ಯಂತರ ಚುನಾವಣೆ ನಡೆಸಿ ಎಂದಿರುವುದು ಇದೀಗ ಕುತೂಹಲ ಕೆರಳಿಸಿದೆ. ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ, ಸರ್ಕಾರವನ್ನು ಉರುಳಿಸಿ, ಬಿಜೆಪಿ ಸರ್ಕಾರ ರಚಿಸಲು ಬಿಎಸ್ವೈ ಸೇರಿದಂತೆ ಅನೇಕ ನಾಯಕರು ಹರಸಾಹಸ ಪಟ್ಟಿದ್ದರು. ಆದರೆ, ಸರ್ಕಾರವನ್ನು ಕೆಡವಲು ಇದುವರೆಗೆ ಸಾಧ್ಯವಾಗಿಲ್ಲ.
ಲೋಕಸಭೆ ಚುನಾವಣೆ ನಂತರ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ, ಡಾ. ಸುಧಾಕರ್ ಹಿರಿಯ ನಾಯಕ ಎಸ್ ಎಂ ಕೃಷ್ಣ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಬಿಜೆಪಿಯ ನಾಯಕರೂ ಭೇಟಿ ನೀಡಿದ್ದರು. ಸರ್ಕಾರವನ್ನು ಉಳಿಸಿಕೊಳ್ಳಲು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಕುಟುಂಬಸ್ಥರು ಮತ್ತು ಆಪ್ತರ ರಾಜೀನಾಮೆ ಪಡೆಯಲು ಸಿಎಂ ಎಚ್ ಡಿ ಕುಮಾರಸ್ವಾಮಿ ಚಿಂತನೆ ನಡೆಸಿದ್ದರು. ರಾಜೀನಾಮೆ ನಂತರ ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡಲು ಆಲೋಚಿಸಿದ್ದರು.
ಹೊಸ ಬೆಳವಣಿಗೆಯಲ್ಲಿ ಆರ್ಎಸ್ಎಸ್ ನಾಯಕ ಸಂತೋಷ್ ಅವರ ಹೆಸರು ಮುಖ್ಯಮಂತ್ರಿ ಹುದ್ದೆಗೆ ಕೇಳಿಬರತೊಡಗಿತ್ತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಎಸ್ವೈ ಅವರಿಗೆ ಕೆಲಕಾಲ ಅಧಿಕಾರ ನೀಡಿ, ನಂತರ ರಾಜ್ಯಪಾಲರನ್ನಾಗಿ ನೇಮಿಸಲಾಗುತ್ತದೆ ಎಂಬ ವದಂತಿಗಳಿಗೆ ಕೂಡ ರೆಕ್ಕೆಪುಕ್ಕ ಬಂದಿದ್ದವು. ಆದರೆ, ಇದೀಗ ಮಧ್ಯಂತರ ಚುನಾವಣೆ ವಿಷಯವನ್ನು ಸ್ವತಃ ಬಿಎಸ್ವೈ ಪ್ರಸ್ತಾಪಿಸಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.
ಒಂದು ಕಮೆಂಟನ್ನು ಹಾಕಿ