ರೈತರ ಮೇಲೆ ಗೋಲಿಬಾರ್ ಮಾಡಿ, ನಂತರ ಸಾಲ ಮನ್ನಾ ಮಾಡುತ್ತೀರಾ?

Kannada News

08-06-2017 336

ಬೆಂಗಳೂರು:- ರಾಜ್ಯದಲ್ಲಿ ಎದುರಾಗಿರುವ ಭೀಕರ ಬರಗಾಲವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೆ.ಎಸ್. ಈಶ್ವರಪ್ಪ ಅವರು ವಿಧಾನಪರಿಷತ್ ನಲ್ಲಿ  ಆರೋಪಿಸಿದರು. ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ರೈತರ ಬೆಳೆ ನಷ್ಟಕ್ಕೆ ಬೆಳೆ ಪರಿಹಾರವೂ ದೊರೆತಿಲ್ಲ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಣ ರೈತರ ಬ್ಯಾಂಕ್  ಖಾತೆಗೆ ತಲುಪಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಸದನ ಆರಂಭವಾಗುತ್ತಿದ್ದಂತೆ, ನಿಯಮ 59ರಡಿ ನಿಲುವಳಿ ಸೂಚನೆಯಡಿ ಬರದ ಬಗ್ಗೆ ಪೂರ್ವಭಾವಿ ಚರ್ಚೆ ಆರಂಭಿಸಿದ ಈಶ್ವರಪ್ಪ ಅವರು ರಾಜ್ಯದಲ್ಲಿ ಅಡಿಕೆ, ತೆಂಗು ನಾಶವಾಗಿ ರೈತರ ಹೊಲದಲ್ಲಿ ಗೂಟದಂತೆ ನಿಂತಿವೆ ಎಂದರು. ಬಹುತೇಕ ಜಿಲ್ಲೆಗಳಲ್ಲಿ ರೈತರ ಬೆಳೆ ನಷ್ಟಕ್ಕೆ ಬೆಳೆ ವಿಮೆ ನೀಡಲು ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಎಲ್ಲಾ ಜಿಲ್ಲೆಗಳಲ್ಲೂ ಅಧಿಕಾರಿಗಳು, ರೈತರ ನೆರವಿಗೆ ಬಂದಿಲ್ಲ ಎಂದು ಆಪಾದಿಸಿದರು. ಅಂತರ್ಜಲ ಕುಸಿಯುತ್ತಿದ್ದು, ಬೋರ್ ವೆಲ್ ಕೊರೆಯಿಸಿದ ಗುತ್ತಿಗೆದಾರರಿಗೆ ಗುತ್ತಿಗೆ ಹಣವನ್ನೇ ನೀಡಿಲ್ಲ. ಅಧಿಕಾರಿಗಳಿಗೆ ಯಾವುದೇ ಭಯ ಇದ್ದಂತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರುಗಳು ಸ್ಥಳ ಪರಿಶೀಲನೆ ನಡೆಸಿಲ್ಲ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಜಿಲ್ಲೆಗಳಲ್ಲಿ ಬರದ ಪರಿಸ್ಥಿತಿಯನ್ನು ಕೇವಲ 2 ನಿಮಿಷಗಳಲ್ಲಿ ಮುಗಿಸಿ ವಾಪಸ್ಸಾಗಿದ್ದಾರೆ ಎಂದು ಆರೋಪಿಸುತ್ತಿದ್ದಂತೆ, ಸ್ವತಹ ಮುಖ್ಯಮಂತ್ರಿಗಳು ಆಕ್ಷೇಪ ವ್ಯಕ್ತಪಡಿಸಿದರು. ಈಶ್ವರಪ್ಪ ಅವರೇ ಯಾರಾದರೂ ಎರಡು ನಿಮಿಷಗಳಲ್ಲಿ ಬರದ ಬಗ್ಗೆ ಪರಿಶೀಲನೆ ನಡೆಸಲು ಸಾಧ್ಯವೆ? ಅಧಿಕಾರಿಗಳೊಂದಿಗೆ ಬರದ ವಿವರ ಪಡೆಯಲು ಹೋಗಿ ಕುಳಿತುಕೊಳ್ಳುವುದಕ್ಕೆ ಎರಡು ನಿಮಿಷಗಳಾದರೂ ಬೇಕು ಎಂದರು,  ಕೋಪದಿಂದಲೇ ಮಾತು ಮುಂದುವರೆಸಿದ ಈಶ್ವರಪ್ಪ,  ಉತ್ತರ ಪ್ರದೇಶ, ಮಹಾರಾಷ್ಟ್ರ ಸರ್ಕಾರಗಳು ಈಗಾಗಲೇ ರೈತರ ಸಾಲವನ್ನು ಮನ್ನಾ ಮಾಡಿವೆ. ಮಧ್ಯಪ್ರದೇಶ ಸರ್ಕಾರ ರೈತರ ಮೇಲೆ ಗೋಲಿಬಾರ್ ನಡೆಸಿದ ಬಳಿಕ ರೈತರ ಸಾಲ ಮನ್ನಾ ಮಾಡುವ ನಿರ್ಧಾರವನ್ನು ಪ್ರಕಟಿಸಿದೆ. ನೀವೂ ಕೂಡ ರೈತರ ಮೇಲೆ ಗೋಲಿಬಾರ್ ಮಾಡಿ, ನಂತರ ಸಾಲ ಮನ್ನಾ ಮಾಡುತ್ತೀರಾ ಎಂದು ಏರಿದ ದನಿಯಲ್ಲಿ ಹೇಳಿದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ