ಡಾ. ಪಾರ್ವತಮ್ಮ ರಾಜ್ ಕುಮಾರ್ ಹೆಸರಿನಲ್ಲಿ ಪ್ರಶಸ್ತಿ !

Kannada News

08-06-2017

ಬೆಂಗಳೂರು:-  ಡಾ. ಪಾರ್ವತಮ್ಮ ರಾಜ್ ಕುಮಾರ್ ಹೆಸರಿನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಪ್ರತಿ ವರ್ಷ ಮಹಿಳಾ ಸಾಧಕಿಯೊಬ್ಬರಿಗೆ 1 ಲಕ್ಷ ರೂ. ಮೊತ್ತದ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಎಸ್.ವಿ ರಾಜೇಂದ್ರಸಿಂಗ್ ಬಾಬು ತಿಳಿಸಿದ್ದಾರೆ. ಅಕಾಡೆಮಿ ವತಿಯಿಂದ ನಗರದ ಗಾಂಧಿಭವನದಲ್ಲಿಂದು ಏರ್ಪಡಿಸಿದ್ದ ಡಾ. ಪಾರ್ವತಮ್ಮ ರಾಜ್ ಕುಮಾರ್ ಒಂದು ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಚಲನಚಿತ್ರದಲ್ಲಿ ಸಮಸ್ಯೆ ಯುಂಟಾದಾಗಲೆಲ್ಲ ಪಾರ್ವತಮ್ಮ ರಾಜ್ ಕುಮಾರ್ ಹೋರಾಟ ಮಾಡಲು ಮುಂದಾಗುತ್ತಿದ್ದರು. ಆದರೆ, ಈಗ ಅವರ ಅನುಪಸ್ಥಿತಿ ಕಾಡುತ್ತಿದೆ. ಪಾರ್ವತಮ್ಮ ಕನ್ನಡ ನಾಡಿನ ದೊಡ್ಡ ಶಕ್ತಿಯಾಗಿದ್ದರು. ಅವರ ಹೆಸರಿನಲ್ಲಿ ಮಹಿಳಾ ಸಾಧಕಿಯೊಬ್ಬರಿಗೆ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಸಾಮಾಜಿಕ ಸಂರಕ್ಷಣೆಯ ಒಳಗಡೆ ನಿರ್ಲಕ್ಷಿತವಾಗಿರುವ ಮಹಿಳಾ ವಲಯದಲ್ಲಿ 80ಕ್ಕೂ ಅಧಿಕ ಸಿನಿಮಾ ನಿರ್ಮಾಣ ಮಾಡುವುದು ಅಷ್ಟು ಸುಲಭದ ಸಾಧನೆಯಲ್ಲ. ಅದರಲ್ಲೂ ಸದಭಿರುಚಿಯ ಸಿನಿಮಾ ನೀಡುವುದು ಸವಾಲಿನ ಕೆಲಸ. ಹಳ್ಳಿ ಮೂಲದಿಂದ ಬಂದು ನಗರಕೇಂದ್ರಿತ ಚಿತ್ರೋದ್ಯಮದಲ್ಲಿ ತಮ್ಮ ವ್ಯಕ್ತಿತ್ವವನ್ನು ಸಾಬೀತುಪಡಿಸಿದ ಪಾರ್ವತಮ್ಮ ಅವರಲ್ಲಿ ಕಾಠಿಣ್ಯ ಮತ್ತು ಕರುಣೆ ಎರಡು ಇತ್ತು. ಕಚೇರಿಯಲ್ಲಿ ಕಾಠಿಣ್ಯದ ಪಾರ್ವತಮ್ಮ ಇದ್ದರೆ, ಮನೆಯಲ್ಲಿ ಕಾರುಣ್ಯದ ಪಾರ್ವತಮ್ಮ ಇರುತ್ತಿದ್ದರು ಎಂದು ಸ್ಮರಿಸಿಕೊಂಡರು.  ಮತ್ತು  ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಜಿ.ಎಸ್ ಟಿ ಯಲ್ಲಿ ಕನ್ನಡ ಚಿತ್ರೋದ್ಯಮಕ್ಕೆ ಶೇ. 28ರಷ್ಟು ತೆರಿಗೆ ವಿಧಿಸಲಾಗಿದೆ. ಇದು ಕನ್ನಡ ಮತ್ತು ಪ್ರಾದೇಶಿಕ ಚಿತ್ರಗಳಿಗೆ ಭಾರಿ ಹೊಡೆತ ನೀಡಲಿದೆ. ಇದರ ವಿರುದ್ಧ ರಾಜ್ ಕುಮಾರ್ ಮತ್ತು ಪಾರ್ವತಮ್ಮ ಅವರ ಫೋಟೋ ಇಟ್ಟುಕೊಂಡು ಪ್ರತಿಭಟಿಸಬೇಕಾಗಿದೆ ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ