ವಧುವಿಲ್ಲದೇ ವಿವಾಹವಾದ ವರ..!

This Gujarat man had a lavish wedding, but no bride!

13-05-2019

ಇದೊಂದು ವಿಚಿತ್ರ ಮದುವೆ ಕತೆ! ಗುಜರಾತ್‍ನ 27ರ ಹರೆಯದ ವರ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಆದರೆ, ವಧುವೇ ಇಲ್ಲದೇ ಮದುವೆ ನಡೆದಿದೆ. ಹೌದು, ವರನ ಕುಟುಂಬದವರು ಅಜಯ್ ಬರೋತ್‍ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಲು ನಿರ್ಧರಿಸಿದ್ದರು. ಆದರೆ, ಅವನಿಗೆ ತಕ್ಕ ವಧು ಸಿಗಲೇ ಇಲ್ಲ. ಆದರೆ, ತಮ್ಮ ಕನಸು ಈಡೇರಲೇಬೇಕು ಎಂದು ಹಠಕ್ಕೆ ಬಿದ್ದ ವರ ಮತ್ತು ಕುಟುಂಬಸ್ಥರು ವಿವಾಹದ ಎಲ್ಲ ಆಚರಣೆಗಳನ್ನೂ ನೆರವೇರಿಸಿದ್ದಾರೆ. ಆದರೆ ಮದುವೆಗೆ ಅತ್ಯಗತ್ಯವಾಗಿ ಬೇಕಾಗಿದ್ದ ವಧುವೇ ಇಲ್ಲದೇ ಈ ಮಂಗಳ ಕಾರ್ಯ ನೆರವೇರಿದೆ.

ಈ ವಿಚಿತ್ರ ಮದುವೆ ನಡೆದಿರುವುದು ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್‍ಲ್ಲಿ. ಮದುವೆಯ ಮುನ್ನಾ ದಿನ ವರನಿಗೆ ಮೆಹಂದಿ ಶಾಸ್ತ್ರವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಗಿದೆ. ಜೊತೆಗೆ ಉತ್ತರಭಾರತದಲ್ಲಿ ಇರುವ ಸಂಪ್ರದಾಯದಂತೆ ಸಂಗೀತ ಉತ್ಸವವನ್ನೂ ಅದೇ ದಿನ ಆಯೋಜಿಸಿ ಮನೋರಂಜನೆಯನ್ನು ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ವರನ ಆಪ್ತರು, ಕುಟುಂಬಸ್ಥರು ಭಾಗವಹಿಸಿದ್ದಾರೆ.

ಮರುದಿನ ಅಜಯ್ ವರನ ವೇಷ ಧರಿಸಿ ಮದುವೆಯ ಎಲ್ಲ ವಿದ್ಯುಕ್ತ ಆಚರಣೆಗಳಲ್ಲೂ ಭಾಗಿಯಾಗಿದ್ದಾರೆ. ಬಂಗಾರದ ಬಣ್ಣದ ಶೆರ್ವಾನಿ, ತಿಳಿಗುಲಾಬಿ ಬಣ್ಣದ ಗುಜರಾತಿ ಶೈಲಿಯ ಪೇಟ ಧರಿಸಿದ ವರ ಕುದುರೆ ಸವಾರಿಯನ್ನೂ ಮಾಡಿದ್ದಾರೆ. ಈ ಸವಾರಿ ವೇಳೆ 200ಕ್ಕೂ ಹೆಚ್ಚು ಜನ ಭಾಗವಹಿಸಿದ್ದಾರೆ. ಈ ವೇಳೆ ಗುಜರಾತಿ ಶೈಲಿಯ ಸಂಗೀತವನ್ನು ನುಡಿಸಲಾಗಿದೆ.

ಇನ್ನು ಮದುವೆ ಅಂದ ಮೇಲೆ ಊಟೋಪಚಾರ ವ್ಯವಸ್ಥೆ ಇರಲೇಬೇಕಲ್ಲವೇ? ಈ ವಧುವೇ ಇಲ್ಲದ ಮದುವೆಯಲ್ಲಿ ಬರೋಬ್ಬರಿ 800 ಜನಕ್ಕೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಹೌದು. ಇಷ್ಟೆಲ್ಲ ಇದ್ದೂ ಮದುವೆಗೆ ವಧು ಯಾಕೆ ಇಲ್ಲ ಅನ್ನೋ ಪ್ರಶ್ನೆ ಕಾಡೋದು ಸಹಜ. ವಧುವಿಲ್ಲದ ಮದುವೆಯ ಕತೆ ನಿಜಕ್ಕೂ ಕರುಣಾಜನಕ. ತಮ್ಮ ಪುತ್ರ ಯಾಕೆ ವಧುವಿಲ್ಲದೇ ಮದುವೆಯಾದ ಅನ್ನೋ ಸಂಗತಿಯನ್ನ ವರನ ತಂದೆ ವಿಷ್ಣು ಬರೋತ್ ಹೇಳೋದು ಹೀಗೆ: “ನನ್ನ ಮಗನಿಗೆ ಚಿಕ್ಕ ವಯಸ್ಸಿನಲ್ಲೇ ಕಾಯಿಲೆ ಬಾಧಿಸಿತ್ತು. ಚಿಕ್ಕ ವಯಸ್ಸಿನಲ್ಲೇ ತನ್ನ ತಾಯಿಯನ್ನು ಕೂಡ ಕಳೆದುಕೊಂಡು ಬಿಟ್ಟಿದ್ದ. ಅವನಿಗೆ ಎಲ್ಲರಂತೆ ತನಗೂ ಮದುವೆಯ ಆಚರಣೆಗಳಲ್ಲಿ ಭಾಗಿಯಾಗಬೇಕೆಂಬ ಬಯಕೆ ಇತ್ತು. ಆದರೆ, ಈ ಸಮಸ್ಯೆಗೆ ನಮಗೆ ಪರಿಹಾರ ಸಿಕ್ಕಿರಲಿಲ್ಲ. ನಂತರ ನನ್ನ ಕುಟುಂಬದ ಎಲ್ಲರ ಜೊತೆ ಚರ್ಚಿಸಿ, ಹೀಗೆ ಮಾಡುವ ನಿರ್ಧಾರಕ್ಕೆ ಬಂದೆವು. ಈ ಮೂಲಕ ಅಜಯ್ ಕನಸನ್ನು ನನಸು ಮಾಡಿದ್ದೇವೆ” ಎಂಬ ಸಂತಸ ತಂದೆಯದು.


ಸಂಬಂಧಿತ ಟ್ಯಾಗ್ಗಳು

Gujarat Bride Wedding Tradition


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ