ಖೋಟಾ ನೋಟು ಚಲಾಯಿಸುತ್ತಿದ್ದ ಸಹನಟಿ ಪೊಲೀಸರ ಬಲೆಗೆ !

Kannada News

08-06-2017

ಬೆಂಗಳೂರು:- ಎರಡು ಸಾವಿರ ಮುಖಬೆಲೆಯ ಖೋಟಾ ನೋಟು ಚಲಾವಣೆಗೆ ಯತ್ನಿಸುತ್ತಿದ್ದ, ಸಹನಟಿ ಜಯಮ್ಮನನ್ನು ಡಾಬಸ್ ಪೇಟೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ನಕಲಿ 2 ಸಾವಿರ ನೋಟನ್ನು ಚಲಾಯಿಸುತ್ತಿದ್ದ ಜಯಮ್ಮಳನ್ನು ಸಾರ್ವಜನಿಕರೇ ಖೋಟಾನೋಟು ಸಮೇತ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಹನಟಿ ಜಯಮ್ಮ (45) ಹಾಗೂ ಆಟೋ ಚಾಲಕ ಗೋವಿಂದರಾಜುನನ್ನು ವಶಕ್ಕೆ ತೆಗೆದುಕೊಂಡಿರುವ ಡಾಬಸ್‍ ಪೇಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನಿರ್ಮಾಪಕರು, ಕೆಲವು ನಟ- ನಟಿಯರೇ ಖೋಟಾನೋಟು ಚಲಾವಣೆ ನಡೆಸುತ್ತಿರುವ ಮಾಹಿತಿ ಜಯಮ್ಮನ ವಿಚಾರಣೆಯಲ್ಲಿ ಕಂಡುಬಂದಿದ್ದು, ಪೊಲೀಸರು ಜಯಮ್ಮನ ಮೊಬೈಲ್‍ನಲ್ಲಿದ್ದ ದೂರವಾಣಿ ಕರೆಗಳನ್ನು ಆಧರಿಸಿ ಶೋಧ ನಡೆಸಿದ್ದಾರೆ. ಸುದೀಪ್, ಉಪೇಂದ್ರ, ಸಾಧುಕೋಕಿಲ ಸೇರಿದಂತೆ ಹಲವರ ಚಿತ್ರಗಳಲ್ಲಿ ಜಯಮ್ಮ ಕಾಣಿಸಿಕೊಂಡಿದ್ದಾರೆ. ಡಾಬಸ್‍ಪೇಟೆ  ಬಳಿ ಖೋಟಾನೋಟು ಚಲಾಯಿಸುತ್ತಿದ್ದಾಗ ಅನುಮಾನ ಬಂದ ಅಂಗಡಿಯವರು ಪ್ರಶ್ನಿಸಿದಾಗ ಜಯಮ್ಮ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು, ಆಗ ಸ್ಥಳೀಯರು ಬೆನ್ನತ್ತಿ ಹಿಡಿದಾಗ 2 ಸಾವಿರ ರೂ. ಮುಖಬೆಲೆಯ 24 ಖೋಟಾನೋಟುಗಳು ಸಿಕ್ಕಿವೆ. ತಕ್ಷಣ ಡಾಬಸ್‍ ಪೇಟೆ ಪೊಲೀಸರಿಗೆ ಮಾಹಿತಿ ನೀಡಿ, ಸ್ಥಳಕ್ಕೆ  ಕರೆಸಿ ಆಕೆಯನ್ನು ಒಪ್ಪಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ