ಕೆರೆಗಳ ಒತ್ತುವರಿಯಿಂದ ಕೆರೆಗಳು ಮಾಯವಾಗುತ್ತಿವೆ !

Kannada News

07-06-2017 491

ಬೆಂಗಳೂರು:-  ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಕೆರೆಗಳು ಮಾಯವಾಗುತ್ತಿವೆ, ಇವುಗಳನ್ನು ಸಂರಕ್ಷಿಸುವ ಸಲುವಾಗಿ ಎಲ್ಲಾ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ತರುವ ಪ್ರಕ್ರಿಯೆ ಆರಂಭವಾಗಿದೆ ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಸಚಿವ ಟಿ.ಬಿ. ಜಯಚಂದ್ರ ವಿಧಾನ ಪರಿಷತ್ ನಲ್ಲಿ ಇಂದು ಹೇಳಿದರು. ಸಣ್ಣ ನೀರಾವರಿ ಇಲಾಖೆ, ಕೆರೆ ಅಭಿವೃದ್ಧಿ ಪ್ರಾಧಿಕಾರಿ, ಜಿ.ಪಂ. ಸೇರಿದಂತೆ ವಿವಿಧ ಇಲಾಖೆಗಳ ಅಡಿಯಲ್ಲಿ ಕೆರೆಗಳಿವೆ. ಹೀಗಾಗಿ ಎಲ್ಲಾ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ತರುವ ಮೂಲಕ ಕೆರೆಗಳನ್ನು ಅಭಿವೃದ್ಧಿ ಮತ್ತು ಪುನಶ್ಚೇತನ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು. ಆಡಳಿತ ಪಕ್ಷದ ಸದಸ್ಯ ವಿ.ಎಸ್. ಉಗ್ರಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆರೆಯ ಅಭಿವೃದ್ಧಿ ಮತ್ತು ನಾಡಿನ ಶ್ರೇಯೋಭಿವೃದ್ಧಿ ಕಾರ್ಯಕ್ರಮದಡಿ ಮತಕ್ಷೇತ್ರಕ್ಕೆ ಒಂದು ಕೆರೆಯ ಹೂಳೆತ್ತುವುದೂ ಸೇರಿದಂತೆ, ಕೆರೆಗಳ ಸಮಗ್ರ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು. ಕೆರೆ ಅಭಿವೃದ್ಧಿ ಪ್ರಾಧಿಕಾರದ ಮೂಲಕ 100 ಕೋಟಿ ರೂ. ವೆಚ್ಚದಲ್ಲಿ ಕೆರೆ ಸಂಜೀವಿನಿ ಕಾರ್ಯಕ್ರಮವನ್ನು 2017-18ನೇ ಸಾಲಿನಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದು, ಇದಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಹೇಳಿದರು. ರಾಜ್ಯದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ 3,677 ಕೆರೆಗಳಿದ್ದು, ಇವುಗಳ ಪೈಕಿ 2,418 ಕೆರೆಗಳ ಸಮೀಕ್ಷೆ ಮಾಡಲಾಗಿದೆ. ಈ ಕೆರೆಗಳ ಪೈಕಿ 1,470 ಕೆರೆ ಒತ್ತುವರಿಯಾಗಿದ್ದು, ಒಟ್ಟಾರೆ 6,871 ಹೆಕ್ಟೇರ್ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದರು. ಒತ್ತುವರಿಯಾಗಿರುವ ಕೆರೆಗಳ ಪೈಕಿ 1,385 ಕೆರೆಗಳ 6,319 ಹೆಕ್ಟೇರ್ ಪ್ರದೇಶವನ್ನು ತೆರವು ಮಾಡಿ ಕೆರೆಗಳಿಗೆ ಬೇಲಿ ಹಾಕುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು. ಇದಕ್ಕೂ ಮುನ್ನ ಮಾತನಾಡಿದ ವಿ.ಎಸ್. ಉಗ್ರಪ್ಪ, ಪಾಳೇಗಾರರ ಕಾಲದಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 42 ಸಾವಿರಕ್ಕೂ ಅಧಿಕ ಕೆರೆ - ಕುಂಟೆಗಳನ್ನು ಕಟ್ಟಿಸಿದ್ದಾರೆ. ಆದರೆ ಈಗ ಬಹುತೇಕ ಕೆರೆಗಳು ಮಾಯವಾಗಿವೆ. ಕೆರೆಗಳ ಅಭಿವೃದ್ಧಿಗೆ ಸರ್ಕಾರ ಏನು ಕ್ರಮ ಕೈಗೊಂಡಿದೆ. ಪಾತಾಳ ಗಂಗೆ ಯೋಜನೆಯನ್ನು ಕೈಗೆತ್ತಿಕೊಳ್ಳಬೇಡಿ. ಅದನ್ನು ಕೈಗೆತ್ತಿಕೊಂಡರೆ ಮುಗಿದೇಹೋಯ್ತು ಎಂದು ಹೇಳಿದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ