ಶ್ರೀಲಂಕಾದಲ್ಲಿ ಉಗ್ರರ ಅಟ್ಟಹಾಸ

Terrorists Blast Peace in Sri Lanka

21-04-2019

ಕೊಲಂಬೋ: ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ಮೂರು ಚರ್ಚ್ ಹಾಗೂ ಮೂರು ರೆಸ್ಟೋರೆಂಟ್‍ಗಳಲ್ಲಿ ಸಂಭವಿಸಿದ ಸರಣಿ ಬಾಂಬ್ ದಾಳಿ ನಡೆಸಲಾಗಿದೆ. ಕ್ರೈಸ್ತ ಸಮುದಾಯಕ್ಕ ಪವಿತ್ರ ದಿನವಾದ ಈಸ್ಟರ್ ಸಂಡೇಯಣದಯ ಶ್ರೀಲಂಕಾದ ಮೂರು ಚರ್ಚ್ ಗಳಲ್ಲಿ ಬಾಂಬ್ ದಾಳಿ ನಡೆದಿದ್ದು, ವಿದೇಶಿ ನಾಗರಿಕರು ಸೇರಿ 207 ಜನ ಮಡಿದಿದ್ದಾರೆ. ಜೊತೆಗೆ, 400 ನಾಗರಿಕರು ಗಾಯಗೊಂಡಿದ್ದಾರೆ.

 

ಕೊಲೊಂಬೊದ ಸೇಂಟ್ ಅಂಥೋನಿ ಚರ್ಚ್, ಪಶ್ಚಿಮ ಕರಾವಳಿಯ ನೆಗೋಂಬೊದಲ್ಲಿರುವ ಸೇಂಟ್ ಸೆಬಾಸ್ಟಿಯನ್ಸ್ ಚರ್ಚ್ ಮತ್ತು ಪೂರ್ವದ ಬ್ಯಾಟಿಕೊಲೊದ ಚರ್ಚ್‍ಗಳಲ್ಲಿ ಸ್ಪೋಟ ನಡೆಸಲಾಗಿದೆ. ಜೊತೆಗೆ ಪಂಚತಾರಾ ಹೊಟೆಲ್‍ಗಳಾದ ಶಾಂಗ್ರಿಲಾ, ಸಿನ್ನಮೋನ್ ಗ್ರಾಂಡ್, ಕಿಂಗ್ಸ್ ಬರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ನಂತರ ದಾಹಿವಾಲಾದ ರಾಷ್ಟ್ರೀಯ ಪ್ರಾಣಿ ಸಂಗ್ರಹಾಲಯದ ಎದುರಿನ ಹೊಟೆಲ್ ನಲ್ಲಿ ಮತ್ತೊಂದು ಬಾಂಬ್ ಸ್ಟೋಟಿಸಿದೆ.

 

ಹತ್ತು ದಿನಗಳ ಹಿಂದೆಯೇ ಶ್ರೀಲಂಕಾದ ಪಾರಂಪರಿಕ ಚರ್ಚ್ ಗಳ ಮೇಲೆ ಬಾಂಬ್ ದಾಳಿ ನಡೆಯಲಿದೆ ಎಂದು ಶ್ರೀಲಂಕಾದ ಪೊಲೀಸ್ ಮುಖ್ಯಸ್ಥ ಎಚ್ಚರಿಕೆ ನೀಡಿದ್ದರು. ಈ ಕುರಿತು ಪೊಲೀಸ್ ಮುಖ್ಯಸ್ಥ ಪಿ. ಜಯಸುಂದರ, ಏಪ್ರಿಲ್ 11ರಂದು ಶ್ರೀಲಂಕಾದ ಉನ್ನತ ತನಿಖಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು ಎಂದು ಎ.ಎಫ್.ಪಿ ವರದಿ ಮಾಡಿದೆ.

 

ದ್ವೀಪ ರಾಷ್ಟ್ರದ ಪ್ರಮುಖ ಚರ್ಚುಗಳು ಮತ್ತು ಕೊಲಂಬೋದಲ್ಲಿನ ಭಾರತೀಯ ಹೈಕಮಿಷನರ್ ಕಚೇರಿಯನ್ನು ಗುರಿಯಾಗಿಟ್ಟು ಆತ್ಮಹತ್ಯೆ ದಾಳಿಯನ್ನು ನಡೆಸಲು ಎನ್‍ಟಿಜೆ (ನ್ಯಾಷನಲ್ ಥೌಹೀತ್ ಜಮಾಥ್ - ಎನ್‍ಜಿಜೆ ಶ್ರೀಲಂಕಾದಲ್ಲಿ ಅಸ್ತಿತ್ವದಲ್ಲಿರುವ ಮುಸ್ಲಿಂ ಮೂಲಭೂತವಾದಿ ಸಂಘಟನೆ) ಯೋಜನೆ ಹೊಂದಿದೆ ಎಂದು ಒಂದು ವಿದೇಶಿ ಗುಪ್ತಚರ ಸಂಸ್ಥೆ ವರದಿ ಮಾಡಿದೆ ಎಂದು ಜಯಸುಂದರ ಮುನ್ನೆಚ್ಚರಿಕೆ ನೀಡಿದ್ದರು ವರದಿ ಉಲ್ಲೇಖಿಸಿದೆ.

 

ಆತ್ಮಾಹುತಿ ಬಾಂಬರ್ ದಾಳಿಯ ಹಿಂದೆ ಉಗ್ರರ ಕೈವಾಡದ ಶಂಕೆ ವ್ಯಕ್ತವಾಗಿದ್ದು, ಏಳು ಶಂಕಿತ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಶ್ರೀಲಂಕಾ ರಕ್ಷಣಾ ಸಚಿವ ರುವಾನ್ ವಿಜೆವರ್ಧನೆ ಮಾಹಿತಿ ನೀಡಿದರು.

ಸ್ಥಳೀಯ ಸುದ್ದಿ ಸಂಸ್ಥೆಗಳ ಪ್ರಕಾರ ಮುಂಜಾನೆ ಬೆಳಗ್ಗೆ 8-45ರ ಹೊತ್ತಿನಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಈ ಆತ್ಮಾಹುತಿ ದಾಳಿಯನ್ನು ಶ್ರೀಲಂಕಾ ಪ್ರಧಾನಿ ಖಂಡಿಸಿದ್ದಾರೆ. ಐಕ್ಯತೆಯಿಂದ ಇರುವಂತೆ ಜನರಿಗೆ ಕರೆ ನೀಡಿರುವ ಅವರು, ವದಂತಿಗಳನ್ನು ಹರಡದಂತೆ ಮನವಿ ಮಾಡಿದ್ದಾರೆ. ಪರಿಸ್ಥಿತಿಯನ್ನು ನಿರ್ವಹಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ. ಪರಿಸ್ಥಿತಿ ಉಲ್ಬಣಿಸದಂತೆ ತಡೆಯುವ ಸಲುವಾಗಿ 21 ದಶಲಕ್ಷ ಜನಸಂಖ್ಯೆ ಹೊಂದಿರುವ ಶ್ರೀಲಂಕಾದಾದ್ಯಂತ ಕರ್ಫ್ಯೂ ವಿಧಿಸಲಾಗಿದೆ.

ಘಟನೆ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಶ್ರೀಲಂಕಾದ ಜನತೆಯೊಂದಿಗೆ ಭಾರತ ಇರುವುದಾಗಿ ಭರವಸೆ ನೀಡಿದ್ದಾರೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಶ್ರೀಲಂಕಾದಲ್ಲಿ ಭಾರತದ ಹೈ ಕಮೀಷನರ್ ಸ್ಥಳದಲ್ಲೇ ಇದ್ದಾರೆ. ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Sri Lanka ಶ್ರೀಲಂಕಾ Terrorism Colombo


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ