ನಾನು ಏನು ತಿನ್ನಬೇಕು, ಯಾವ ಆಹಾರ ಸೇವಿಸಬೇಕು ಎಂಬುದು ನನ್ನ ಹಕ್ಕಾಗಿದೆ !

Kannada News

07-06-2017 233

ನಾನು ಏನು ತಿನ್ನಬೇಕು, ಯಾವ ಆಹಾರ ಸೇವಿಸಬೇಕು ಎಂಬುದು ನನ್ನ ಹಕ್ಕಾಗಿದೆ !

ಬೆಂಗಳೂರು:- ಕೇಂದ್ರದ ಬಿಜೆಪಿ ಸರ್ಕಾರ ಹೊರಡಿಸಿರುವ ಗೋಹತ್ಯೆ ನಿಷೇಧದ ಅಧಿಸೂಚನೆ ಸಂವಿಧಾನ ಬಾಹಿರವಾಗಿದ್ದು, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳ ಅಧಿಕಾರದ ಮೇಲೆ ಆಕ್ರಮಣ ಮಾಡಲು ಮುಂದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಆರೋಪಿಸಿದ್ದಾರೆ. ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪದಗ್ರಹಣ ಸಂದರ್ಭದಲ್ಲಿ ಮಾತನಾಡಿದ ಅವರು  ಗೋಹತ್ಯೆ ನಿಷೇಧ ಎಂಬುದು ರಾಜ್ಯ ಸರ್ಕಾರದ ವಿಷಯವಾಗಿದ್ದು, ಇದು ರಾಜ್ಯಗಳ ಪಟ್ಟಿಯಲ್ಲಿ ಇದೆ. ಕೇಂದ್ರ ಸರ್ಕಾರಕ್ಕೆ ಈ ವಿಷಯದಲ್ಲಿ ಮೂಗು ತೂರಿಸಲು ಯಾವುದೇ ಅಧಿಕಾರ ಇಲ್ಲ. ನಾನು ಏನು ತಿನ್ನಬೇಕು, ಯಾವ ಆಹಾರ ಸೇವಿಸಬೇಕು ಎಂಬುದು ನನ್ನ ಹಕ್ಕಾಗಿದೆ. ಸಂವಿಧಾನದಲ್ಲಿ ಇದನ್ನು ಬಹಳ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಹೇಳಿದರು. ಬಿಜೆಪಿ ಕೋಮುವಾದಿ ಪಕ್ಷವಾಗಿದ್ದು, ಹಿಡನ್ ಅಜೆಂಡಾ ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಬಹಿರಂಗವಾಗಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳಲಾಗುತ್ತಿದೆ. ಆದರೆ ಒಳಗೊಳಗೇ ಧರ್ಮ, ಜಾತ್ಯ ಹೆಸರಿನಲ್ಲಿ ರಾಜಕಾರಣ ಮಾಡಲಾಗುತ್ತಿದೆ. ಕ್ರಿಶ್ಚಿಯನ್ನರು, ಮುಸ್ಲಿಮರು ಮತ್ತು ದಲಿತರನ್ನು ಹೊರಗಿಟ್ಟು ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ನಿಜವಾದ ಜಾತ್ಯತೀತ ಪಕ್ಷ. ಎಲ್ಲಾ ಧರ್ಮದವರನ್ನೂ, ಜಾತಿಯವರನ್ನು ಒಟ್ಟಾಗಿ ಕೊಂಡೊಯ್ಯಲು ಕಾಂಗ್ರೆಸ್ಸಿನಿಂದ ಮಾತ್ರ ಸಾಧ್ಯ ಇದು ಕಾಂಗ್ರೆಸ್ ನ ಸಿದ್ಧಾಂತವೂ ಆಗಿದೆ ಎಂದು ಹೇಳಿದರು. ಬಿಜೆಪಿ ಯವರು ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಹಿಂದುತ್ವ, ರಾಮಮಂದಿರ ನಿರ್ಮಾಣ, ಗೋಹತ್ಯೆ ನಿಷೇಧ, 370ನೇ ವಿಧಿ ಮುಂತಾದ ಭಾವನಾತ್ಮಕ ವಿಷಯಗಳನ್ನು ಕೆದಕಿ ರಾಜಕಾರಣ ಮಾಡುತ್ತಿದ್ದಾರೆ. ಒಂದು ಸುಳ್ಳನ್ನು ಪದೇ ಪದೇ ಹೇಳಿ ಸತ್ಯವಾಗಿಸುವ ಗ್ಲೋಬಲ್ ಸಿದ್ಧಾಂತವನ್ನು ಅನುಸರಿಸುತ್ತಿದ್ದಾರೆ. ಇದರ ವಿರುದ್ಧ ಯುವ ಕಾಂಗ್ರೆಸ್ಸಿಗರು ಸಮಾಜದಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ