ಪ್ರತಾಪ್ ಸಿಂಹ ಮೇಲೆ ಕಿರುಕುಳದ ಆರೋಪ!

Accusation of harassment against Pratap Simha

17-04-2019

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಎಂಪಿ ಮತ್ತು ಕಳೆದ ಬಾರಿ ಮೋದಿ ಬಗ್ಗೆ ಪುಸ್ತಕಗಳನ್ನು ಬರೆದೇ ಟಿಕೆಟ್ ಗಿಟ್ಟಿಸಿಕೊಂಡ ಪ್ರತಾಪ್ ಸಿಂಹ ಈಗ ತಾವು ಬೆಳೆದು ಬಂದ ಪತ್ರಿಕೋದ್ಯಮ ಕ್ಷೇತ್ರದವರೇ ಆದ ಶ್ರುತಿ ಎಂಬ ತರುಣಿ ಬೀಸಿದ ಆರೋಪಗಳ ಬಲೆಯಲ್ಲಿ ತಾವು ನಡೆಸಿದರೆನ್ನಲಾದ ವಿಕೃತಿಗಳ ಸಾಕ್ಷಗಳೊಂದಿಗೆ ಸಿಕ್ಕಿಬಿದ್ದಿದ್ದಾರೆ ಎಂದು ಸುದ್ದಿಯಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಸುದ್ದಿಯ ಪ್ರಕಾರ ಶ್ರುತಿ ಎಂಬ ಪತ್ರಿಕೋದ್ಯಮದ ವಿದ್ಯಾರ್ಥಿನಿ ಪ್ರತಾಪ್ ಸಿಂಹ ಅವರಿಂದ ಪ್ರಭಾವಿತರಾಗಿ ಅವರನ್ನು ಭೇಟಿಯಾದರಂತೆ. ಆದರೆ ಶ್ರುತಿ ಹೇಳುವಂತೆ ಪ್ರತಾಪ್ ಸಿಂಹ ಅವರು ತಮ್ಮ ಬರವಣಿಗೆ ಮತ್ತು ವಿಚಾರಗಳ ಆಧಾರದಲ್ಲಿ ಈ ತರುಣಿಯೊಂದಿಗೆ ಮಾತಾಡುವುದನ್ನು ಬಿಟ್ಟು ತಮ್ಮ ಕಾಮತೃಷೆಯನ್ನು ತೀರಿಸಿಕೊಳ್ಳಲು  ಆಕೆಯನ್ನು ಬಳಸಿಕೊಂಡರು ಎಂದು ಆರೋಪಿಸಲಾಗಿದೆ. ಅದಲ್ಲದೆ ಈ ಹುಡುಗಿ ಮಾತ್ರವಲ್ಲದೆ ಬೇರೆ ಹುಡುಗಿಯರನ್ನೂ ಬಳಸಿಕೊಳ್ಳುತ್ತಿದ್ದರೆಂದು ಮಾಹಿತಿ ಹಬ್ಬಿದೆ. ವಾಟ್ಸಪ್ಪ್ ನಲ್ಲಿ ಹರಿದಾಡುತ್ತಿರುವ ಸ್ಕ್ರೀನ್ ಶಾಟ್ಗಳನ್ನು ನೋಡಿದರೆ ಆ ಸಂಭಾಷಣೆಗಳಲ್ಲಿ ಮನೋವಿಕೃತಿ ಎದ್ದು ಕಾಣುತ್ತದೆ ಎನ್ನಲಾಗಿದೆ. ಮಹಿಳಾ ಆಯೋಗಕ್ಕೆ ಕೊಟ್ಟಿರುವ ದೂರಿನಲ್ಲಿ ಆ ಯುವತಿ ತನ್ನ ಮೇಲೆ ಪ್ರತಾಪ್ ಸಿಂಹ ಅವರಿಂದ ಸತತವಾಗಿ ಮಾನಸಿಕ ಮತ್ತು ದೈಹಿಕ ಹಿಂಸೆ ನಡೆದಿದೆಯೆಂದು ಹೇಳಿಕೊಂಡಿದ್ದಾರೆ. ಪ್ರತಾಪ್ ಸಿಂಹ ಅವರೊಂದಿಗೆ ನಡೆದಿದೆ ಎನ್ನಲಾದ ಧ್ವನಿ ಮುದ್ರಣವನ್ನು ಅವರು ಪ್ರಕಟಿಸುವುದರೊಂದಿಗೆ ಈ ವಿಚಾರದ ಬಗ್ಗೆ ಎಲ್ಲಿಯೂ ಮಾತನಾಡಲು ಸಿದ್ಧ ಎಂದೂ ಹೇಳಿದ್ದಾರೆ.

ಮಹಿಳಾ ಆಯೋಗಕ್ಕೆ ದೂರು ನೀಡುವುದರೊಂದಿಗೆ ತಮಗೆ ಯಾವುದೇ ರೀತಿ ತೊಂದರೆ ಅಥವಾ ಹಾನಿಯಾದರೂ ಅದಕ್ಕೆ ಪ್ರತಾಪ್ ಅವರೇ ಕಾರಣ ಎಂದೂ ದಾಖಲಿಸಿದ್ದಾರೆ. ಮಾಧ್ಯಮಗಳಿಗೆ ಬರೆದಿದ್ದಾರೆನ್ನುವ ಪತ್ರದಲ್ಲಿ ಸಂತ್ರಸ್ತೆ ಎಂದು ತನ್ನ ಬಗ್ಗೆ ಹೇಳಿಕೊಂಡ ಆ ಯುವತಿ ಪೊಲೀಸರಿಗೂ ದೂರು ನೀಡುವುದಾಗಿ ಹೇಳಿದ್ದಾರೆ. ಈ ದೂರಿನಲ್ಲಿರುವ ಅಂಶಗಳು ಎಷ್ಟು ಸತ್ಯ ಮತ್ತು ಪ್ರತಾಪ್ ಅವರು ಈ ಬಗ್ಗೆ ಏನು ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಕಾದು ನೋಡಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

#Pratap Simha #Mysuru #Loksabha Election #Kodagu


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ