ಒಕ್ಕಲಿಗರ ಮತ ಯಾವ ಒಕ್ಕಲಿಗನಿಗೆ ?

Who will the Vokkaligas vote for in Bengaluru North?

16-04-2019

ಕಳೆದ ಬಾರಿ ಎಂದರೆ  2014ರ  ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮುಖಂಡ ಹಾಗು ಮಾಜಿ  ಮುಖ್ಯಮಂತ್ರಿ ಸದಾನಂದ ಗೌಡರು ಬಹಳಷ್ಟು ಆರಾಮಾಗೆ ಬೆಂಗಳೂರು ಉತ್ತರ  ಕ್ಷೇತ್ರವನ್ನು ಗೆದ್ದುಕೊಂಡರು ಎಂದು ಹೇಳಬಹುದು.ಆದರೆ ಈ ಬಾರಿ ಚುನಾವಣೆಯಲ್ಲಿ ದೇವೇಗೌಡರು ಪ್ರತಿಸ್ಪರ್ಧಿ ಆಗುತ್ತೇನೆಂದು ಹೇಳಿ ಕೊನೆಗೆ ಹಿನ್ನೆಡೆದರೂ ಕೂಡ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ  ಸದಾನಂದ ಗೌಡರಿಗೆ ಗೆಲುವು ಅನಾಯಾಸವಾಗಿ ದೊರಕುವುದಿಲ್ಲವೆಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ ಸದಾನಂದ ಗೌಡರಿಗೆ  ಪ್ರತಿಸ್ಪರ್ಧಿಯಾಗಿ ಬಂದಿರುವಂತ  ಕಾಂಗ್ರೆಸ್ನ ಕೃಷ್ಣಬೈರೇಗೌಡರು .ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಪ್ರಾಬಲ್ಯವಿದೆಯೆಂದು ಹೇಳಲಾಗಿದ್ದರೂ, ಕಳೆದ ಬಾರಿಯ ಚುನಾವಣೆಯಲ್ಲಿ ಮೋದಿಯ  ಜಪ ಮಾಡುತ್ತಾ ಬಿಜೆಪಿಯವರು ಚುನಾವಣೆಯಲ್ಲಿ ಯಾರೇ ಆ ಪಕ್ಷದಿಂದ ನಿಂತರೂ ಬಿಜೆಪಿಗೆ ಲೊಟ್ಟ ಮತ  ಅದು ಮೋದಿಗೆ ನೀಡಿದ  ಮತ ಎಂದು ಹೇಳಿದಾಗ, ದಕ್ಷಿಣ ಕನ್ನಡದವರಾದ ಸದಾನಂದ ಗೌಡರು ಬರಿ ಮೋದಿ ನಾಮ ಜಪವನ್ನೇ ಮಾಡಿಕೊಂಡು  ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು  ಎಂದು ಹೇಳಲಾಗುವುದಿಲ್ಲ.ಹಾಗಿದಿದ್ದರೆ ಅವರು ಬಿಜೆಪಿ ಗೆಲ್ಲಲಾಗದ  ಯಾವುದಾದರೂ ಒಂದು  ಕ್ಷೇತ್ರವನ್ನು ಆರಿಸಿ, ಅಲ್ಲಿ ಸ್ಪರ್ಧಿಸಿ, ಅಲ್ಲಿ ತಾವೂ ಗೆದ್ದು, ಬಿಜೆಪಿ ಪಕ್ಷವನ್ನು ಗೆಲ್ಲಿಸಿಕೊಂಡು ಬರುತ್ತಿದ್ದರು. ಆದರೆ ಅವರು ಬೆಂಗಳೂರು ಉತ್ತರ ಕ್ಷೇತ್ರವನ್ನು ಆರಿಸಿಕೊಂಡಿದ್ದು ಅಲ್ಲಿನ ಒಕ್ಕಲಿಗ ಸಮುದಾಯದ ಪ್ರಾಬಲ್ಯದ ಕಾರಣದಿಂದಲೇ.

 

           ಆದರೆ ಈ ಬಾರಿ ಆ ಒಕ್ಕಲಿಗ ಸಮುದಾಯ ಸದಾನಂದ ಗೌಡರ ಪರವಾಗಿ ಎಷ್ಟಿರುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಬೆಂಗಳೂರು ಉತ್ತರ ಕ್ಷೇತ್ರದಿಂದ ದೇವೇಗೌಡರು ಸ್ಪರ್ಧಿಸದೇ ಇರುವುದಕ್ಕೆ ಕಾರಣ ಅಲ್ಲಿನ ಒಕ್ಕಲಿಗ ಸಮುದಾಯ ಅವರ ಪರವಾಗಿ ನಿಲ್ಲುವುದಿಲ್ಲ ಎಂದಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸದಾನಂದ ಗೌಡರು ತಮ್ಮ ಒಕ್ಕಲಿಗ ಮೂಲದೊಂದಿಗೆ ಬಿಜೆಪಿ ಮಂತ್ರವನ್ನು ಜಪಿಸಿಕೊಂಡು ಕ್ಷೇತ್ರವನ್ನು ಗೆದ್ದರು. ಆಗ ಒಕ್ಕಲಿಗ ಜಾತಿ ಬಲ ಮತ್ತು ಮೋದಿ ಶಕ್ತಿ  ಎರಡು ಕೆಲಸ ಮಾಡಿತ್ತು. ಬಹುತೇಕ  ಜಾತಿಯ ಜಾತಿಯ ಮತಗಳನ್ನೇ ಅವಲಂಬಿಸಿರಬೇಕಾದ ಪರಿಸ್ಥಿತಿಯಲ್ಲಿ, ಬೆಂಗಳೂರು ಉತ್ತರದ  ಒಕ್ಕಲಿಗರು ಯಾವ ಒಕ್ಕಲಿಗನಿಗೆ ಮತ ಹಾಕುತ್ತಾರೆ ಎಂಬುದನ್ನು ನೋಡಬೇಕಾಗುತ್ತದೆ . ಆದರೆ ಇಲ್ಲಿರುವ ಇನ್ನೊಂದು ಮರ್ಮವೆಂದರೆ ಹಾಲಿ ಎಂಪಿ ಮತ್ತು ಸ್ಪರ್ಧಿಸಬೇಕಿದ್ದ ದೇವೇಗೌಡರು ಇಬ್ಬರು ಒಕ್ಕಲಾಗಿದ್ದರೂ ಅವರಿಬ್ಬರೂ ಹೊರಗಿನವರು, ಒಕ್ಕಲಿಗ ಮುಖಂಡ ಎಂದು ಗುರುತಿಸಿಕೊಂಡ ದೇವೇಗೌಡರೂ ಕೂಡ ಹಾಸನದ ಒಕ್ಕಲಿಗರೇ ಹೊರತು  ಬೆಂಗಳೂರಿನವರಲ್ಲ. ದಕ್ಷಿಣ ಕನ್ನಡದ ಅರೆ ಭಾಷೆ ಗೌಡರು ಅಥವಾ ತುಳು ಗೌಡರು ಆಗಿರುವ ಸದಾನಂದ ಗೌಡರು  ಬೆಂಗಳೂರು ಗೌಡರಲ್ಲ.ಇನ್ನೊಂದು ವಿಶೇಷವೇನೆಂದರೆ  ಸದಾನಂದ ಗೌಡರ ಸಮುದಾಯ ಒಕ್ಕಲಿಗ ಮುಖ್ಯವಾಹಿನಿಯಿಂದ ತುಂಬಾ ಬೇರೆಯೇ ಇದೆ. ಬಹಳಷ್ಟು ವರ್ಷಗಳ ಕಾಲ ಸದಾನಂದ ಗೌಡರ ಸಮುದಾಯದವರಾದ  ಅರೆ ಭಾಷೆ  ಗೌಡರು  ಒಕ್ಕಲಿಗ ಸಮುದಾಯದ  ಮುಖ್ಯವಾಹಿನಿಯೇ ಆಗಿರಲಿಲ್ಲ .ಮತ್ತು ಅವರನ್ನು ಒಕ್ಕಲಿಗ ಜಾತಿಯವರೆಂದು ಪರಿಗಣಿಸುತ್ತಿರಲೂ ಇರಲಿಲ್ಲ.ಮತ್ತು ದಕ್ಷಿಣ ಕರ್ನಾಟಕದ ಉಳಿದ ಭಾಗಗಳ ಒಕ್ಕಲಿಗರಿಗೆ  ಮದುವೆ ಸಂಬಂಧ  ಅಥವಾ ಹೆಣ್ಣು ಕೊಟ್ಟು ತರುವ ಸಂಬಂಧಗಳು ಇರಲಿಲ್ಲ . ಭಾಷೆ , ಆಚಾರ , ಸಂಸ್ಕೃತಿಗಳು ವಿಭಿನ್ನವಾಗಿದ್ದ ಅರೆ ಭಾಷೆ ಗೌಡರು ಬೇರೆಯೇ ಆಗಿ ಉಳಿದಿದ್ದರು.  ಆ ಕಾರಣದಿಂದ ಸುಮಾರು  ಮೂವತ್ತು ವರ್ಷಗಳ ಹಿಂದಿನ  ತನಕ ಅರೆ ಭಾಷೆ ಗೌಡರು   ಒಕ್ಕಲಿಗ ಮುಖ್ಯವಾಹಿನಿಗೆ ಸೇರುವ ಪ್ರಯತ್ನವನ್ನ  ನಡೆಸಿ ಬಹಳಷ್ಟು  ಸಾಫಲ್ಯವನ್ನು ಕಂಡಿದ್ದಾರೆ. ಅದಕ್ಕೆ ಕಾರಣ ಬಂಟ ಸಮುದಾಯದೊಂದಿಗೆ ಸೇರಿ  ಅವರು  ಬಾಲಗಂಗಾಧರನಾಥ  ಸ್ವಾಮಿಗಳನ್ನು ಅನುಸರಿಸಲು ಆರಂಭಿಸಿ   ಹಾಗೆಯೇ ಆದಿಚುಂಚನಗಿರಿ ಮಠಕ್ಕೂ ನಡೆದುಕೊಳ್ಳಲು ಪ್ರಾರಂಭಿಸಿದರು. ಆ ನಂತರ ಮದುವೆ ಸಂಭಂಧಗಳು ಏರ್ಪಟ್ಟು ಒಂದಷ್ಟು ನೇರವಾದಂತ ಭಾಂದವ್ಯ ಈ ಎರಡು ಸಮುದಾಯಗಳ ನಡುವೆ  ಕುದುರಿತು.ಆದರೂ ಇನ್ನೂ ಕೂಡ ಸಂಪೂರ್ಣವಾಗಿ  ಅರೆ ಭಾಷೆ ಗೌಡರು  ಒಕ್ಕಲಿಗ ಮುಖ್ಯವಾಹಿನಿಯಲ್ಲಿ ಗುರುತಿಸಲ್ಪಡಲು ಸಾಧ್ಯವಾಗಿಲ್ಲ. ಆ  ಮೂಲದಿಂದ ಬಂದಿರತಕ್ಕಂತ ಸದಾನಂದ ಗೌಡರು  ಕಳೆದ ಬಾರಿ "ಗೌಡ" ಎನ್ನುವಂತ ನಾಮಾಂಕಿತವನ್ನ ಬಳಸಿಕೊಂಡು,ಒಕ್ಕಲಿಗ ಮೂಲವನ್ನ ಉಲ್ಲೇಕಖಿಸಿಕೊಂಡು, ಮೋದಿ ಜಪವನ್ನ ಮಾಡಿಕೊಂಡು ಗೆದ್ದರು. 

 

            ಆದರೆ ಈ ಬಾರಿ ಅವರ ಪ್ರತಿಸ್ಪರ್ಧಿಯಾಗಿರುವಂತ ಕೃಷ್ಣಬೈರೇಗೌಡರು ಒಕ್ಕಲಿಗರು ಮಾತ್ರವಲ್ಲದೆ  ಬೆಂಗುಳೂರು ಗ್ರಾಮಾಂತರ ಪ್ರದೇಶಕ್ಕೆ ಸೇರಿದವರು. ಕೋಲಾರ ಜಿಲ್ಲೆ ಮೂಲದವರು ಆದ ಇವರು  ಕೆಂಪೇಗೌಡರ ವಂಶಸ್ಥರೆಂದು ಗುರುತಿಸಿಕೊಂಡಿರುವ  ಒಕ್ಕಲಿಗ ಪಂಗಡಕ್ಕೆ ಸೇರಿರುವಂಥವರು. ಬೆಂಗಳೂರು ಉತ್ತರ ಕ್ಷೇತ್ರದಲ್ಲಿರುವಂತ ಬಹುತೇಕ ಒಕ್ಕಲಿಗರು ಈ ಒಕ್ಕಲಿಗ ಪಂಗಡಕ್ಕೆ ಸೇರಿದವರಾಗಿದ್ದಾರೆ. ಆದ್ದರಿಂದ ಸ್ವಾಭಾವಿಕವಾಗಿ  ಕೃಷ್ಣಬೈರೇಗೌಡರು   ಬೆಂಗಳೂರು ಉತ್ತರ ಕ್ಷೇತ್ರದಿಂದ ಆ ಭಾಗದ  ಒಕ್ಕಲಿಗರ ಪ್ರತಿನಿಧಿಯಾಗಿ ಕಂಡು ಬಂದರೆ   ಆಶ್ಚರ್ಯವಿಲ್ಲ. ಆದರೆ ಸಜ್ಜನ ರಾಜಕಾರಿಣಿ ಎಂದು ಗುರುತಿಸಿಕೊಂಡು ಬಂದಿರುವ ಸದಾನಂದ ಗೌಡರು ಯಾವ ಮಟ್ಟಕ್ಕೆ ಸಾಧನೆಯನ್ನು ಮಾಡಿದ್ದಾರೆ ಎಂಬುದನ್ನು ಅವರನ್ನೇ ಕೇಳಿ ಮತ ಹಾಕಬೇಕು. ಆದರೆ ಮಂತ್ರಿಯಾಗಿ ಒಂದಷ್ಟು ತಮ್ಮ ಕ್ಷೇತ್ರದಲ್ಲಿ ಕೆಲಸವನ್ನ ಮಾಡಿ.ಕುಟುಂಬದ ರಾಜಕೀಯ ಇತಿಹಾಸದೊಂದಿಗೆ ತಮ್ಮ ವಿದ್ಯಾಭ್ಯಾಸ,ಬುದ್ದಿವಂತಿಕೆ ಮತ್ತು ರಾಜಕೀಯ  ಚಾಣಾಕ್ಷತನದೊಂದಿಗೆ ಗುರುತಿಸಲ್ಪಟ್ಟಿರುವ  ಕೃಷ್ಣಬೈರೇಗೌಡರು  ಯಾವ ರೀತಿ ಒಕ್ಕಲಿಗ ಮತಗಳನ್ನು ತಮ್ಮೆಡೆಗೆ ಸೆಳೆಯುತ್ತಾರೆ ಎಂಬುದನ್ನು ನೋಡಬೇಕು. 

 

        ಆದರೂ ಈ ಸಂಧರ್ಭದಲ್ಲಿ ಬೆಂಗಳೂರು  ಉತ್ತರ ಕ್ಷೇತ್ರದ ಒಕ್ಕಲಿಗರು ದೂರದೂರಿನಿಂದ ಬಂದ, ತಮಗೆ ನೇರವಾಗಿ ಸಂಭಂಧವಿಲ್ಲದ ಸದಾನಂದ ಗೌಡರಿಗೆ ಮತ ಹಾಕುತ್ತಾರೋ? ಇಲ್ಲ ತಮ್ಮವರೇ ಆದ ಕೃಷ್ಣಬೈರೇಗೌಡರು  ಮತ ಹಾಕಿ ಗೆಲ್ಲಿಸುತ್ತಾರೋ? ಎನ್ನುವುದನ್ನು ನೋಡಿದಾಗ ಬಹಳಷ್ಟು ಮಂದಿ ಚುನಾವಣೆಯ ನಂತರವೇ ಬೆಂಗಳೂರು ಉತ್ತರದ  ಒಕ್ಕಲಿಗರು ಯಾರ ಪರ  ಇದ್ದಾರೆ  ಎಂದು ನಿರ್ಧರಿಸಬಹುದು ಎಂದು ಹೇಳುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#Krishna Byregowda #Sadananda Gowda #Bengaluru North #Lok Sabha


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ