ಇದು 8% ಸರ್ಕಾರ

It is 8% government

14-04-2019

ಪ್ರಧಾನಿ ಮೋದಿಯವರು ಬಹಳ ದಿನಗಳ ಹಿಂದೆಯೇ ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರವನ್ನು 10% ಕಮಿಷನ್ ಸರ್ಕಾರ ವೆಂದು ಕರೆದಿದ್ದರು. ಇತ್ತೀಚೆಗೆ ಆ ಕಮಿಷನ್ ದರವನ್ನು ಹೆಚ್ಚಿಸಿ ಇದು 20 % ಕಮಿಷನ್ ಸರ್ಕಾರವೆಂದು ಆರೋಪಿಸಲಾಯಿತು. ನಮ್ಮದು 10 ಕಮಿಷನ್ ಸರ್ಕಾರವಾದರೆ ನಿಮ್ಮದು 100 ಕಮಿಷನ್ ಸರ್ಕಾರವೆಂದೆಲ್ಲ ಕಾಂಗ್ರೆಸ್ಸಿಗರು ಪ್ರತಿದಾಳಿ ಮಾಡಿದರು, ಆದರೆ ಕಮಿಷನ್ ಇಲ್ಲ ಎಂದು ಮಾತ್ರ ಯಾವ ಮಂತ್ರಿಯೂ ಸಾಬೀತು ಮಾಡಲಿಕ್ಕೆ ಹೋಗಿಲ್ಲ. ಈಗಂತೂ ಡಾ ಪರಮೇಶ್ವರ ಅವರು ಅದನ್ನು ಸಾಬೀತು ಮಾಡುವ ಹೊಣೆಯನ್ನು ಬಿಜೆಪಿಗೇ ಬಿಟ್ಟಿದ್ದಾರೆ. ಆದರೆ ನಿಜವಾಗಲೂ ಸರ್ಕಾರಿ ಗುತ್ತಿಗೆ ಕೆಲಸಗಳಲ್ಲಿ ಮಂತ್ರಿಗಳಿಗೆ ಎಷ್ಟು ಪರ್ಸೆಂಟ್ ಕಮಿಷನ್ ಹೋಗೊತ್ತಿದೆ ಎಂದು ಸೂಪರ್ ಸುದ್ದಿ ತನಿಖೆ ಮಾಡಿದಾಗ ಹೊರ ಬಂದ ಮಾಹಿತಿ ಕುತೂಹಲಕಾರಿಯಾಗಿತ್ತು. 

2008 ರಲ್ಲಿ ಬಿಜೆಪಿ ಸರ್ಕಾರ ಬರುವುದಕ್ಕಿಂತ ಮೊದಲು ಅದು 2 ರಿಂದ 3 ಪರ್ಸೆಂಟ್ ಆಗಿತ್ತು. ಬಿಜೆಪಿ ಸರ್ಕಾರ ಬರುವ ಹೊತ್ತಿಗೆ ಅದು 5 ಪರ್ಸೆಂಟ್ ಗಡಿ ತಲುಪಿತ್ತು. ಬಿಜೆಪಿ ಸರ್ಕಾರ ಬಂದಾಗ ಅದು 5 ಪರ್ಸೆಂಟ್ ನಲ್ಲಿ ನಿಂತಿತು. ಆನಂತರ ಈಗ ಈ ಸರ್ಕಾರದಲ್ಲಿ ಅದು 5 ರಿಂದ 10 ಪರ್ಸೆಂಟಿನ ವ್ಯಾಪ್ತಿಯಲ್ಲಿದೆ. ಕೆಲವೊಂದು ಕೆಲಸಗಳಿಗೆ ಅಥವ ಇಲಾಖೆಗಳಲ್ಲಿ ಇನ್ನೂ ಅದು 5 ಪರ್ಸೆಂಟ್ ನಲ್ಲೇ ಇದ್ದರೂ ಇನ್ನು ಕೆಲವು ಇಲಾಖೆಗಳಲ್ಲಿ ಶೇಖಡ 10 ರಷ್ಟಿದೆ ಆದರೆ ಹೆಚ್ಚು ಹಣ ಇರುವ ಇಲಾಖೆಗಳಲ್ಲಿ  ನಿಯಮಿತವಾಗಿ 8 ಪರ್ಸೆಂಟ್  ಚಾಲ್ತಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಕೆಲವೊಮ್ಮೆ ಒಂದು ಪಕ್ಷದ ಸುಪರ್ದಿಯಲ್ಲಿ ಇರುವ ಇಲಾಖೆಗೆ ಇನ್ನೊಂದು ಪಕ್ಷದ ಮಂತ್ರಿ ಮೂಗು ತೂರಿಸಿದಾಗ ಒಂದಷ್ಟು ಹೆಚ್ಚೇ ವ್ಯಯಿಸಬೇಕಾಗುತ್ತದೆ ಎನ್ನುತ್ತಾರೆ ಕಂಟ್ರಾಕ್ಟರ್ ಗಳು. ಈ ಕಮಿಷನ್ ಗಳ ದರ ಸರಾಸರಿ 8 ಪರ್ಸೆಂಟ್ ಇರೋದ್ರಿಂದ ಈ ಸರ್ಕಾರವನ್ನು 10ಪರ್ಸೆಂಟ್ ಅಲ್ಲ 20 ಪರ್ಸೆಂಟ್ ಅಲ್ಲ ಆದರೆ ನ್ಯಾಯಯುತವಾಗಿ '8% ಸರ್ಕಾರ ಎಂದು ವಿಶ್ವಾಸದಿಂದ ಕರೆಯಬಹುದೇ?' ಎಂದು ಅಡ್ಡ ಗೋಡೆಯಮೇಲೆ ಕುಳಿತ ಅನೇಕರು ಕೇಳುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಕಾಂಗ್ರೆಸ್ ಜೆಡಿಎಸ್ Narendra Modi Dr. Parameshwara


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ