ಮಂಡ್ಯದಲ್ಲಿ ಹರಿಯುತ್ತಿದೆ ಹಣದ ಹೊಳೆ !

Money flows in Mandya!

14-04-2019

ಮಂಡ್ಯದಲ್ಲಿ ಕಾವೇರಿ ನೀರು ಎಷ್ಟು ಹರಿಯುತ್ತದೋ ಗೊತ್ತಿಲ್ಲ ಆದರೆ ಈ ಬಾರಿಯ ಚುನಾವಣೆಯಲ್ಲಿ ಹಣದ ಹೊಳೆಯಂತೂ ದಂಡೆ ಒಡೆದು ಹರಿಯುತ್ತಿರುವುದಂತೂ ನಿಜ. ಈ ಹಣ ಬರಿ ನಿಖಿಲ್ ಕುಮಾರ ಸ್ವಾಮಿಯವರ ಪರ ಹರಿಯುತ್ತಿದೆ ಎಂದೂ ಹೇಳಲಾಗುತ್ತಿದೆ. ಹೇಗಾದರೂ ಮಾಡಿ ಶತಾಯ ಗತಾಯ ಮಗನನ್ನು ಗೆಲ್ಲಿಸಿಕೊಳ್ಳಬೇಕೆಂಬ ಮಹದಾಸೆ ಮತ್ತು ಹಠದೊಂದಿಗೆ ಕುಮಾರಸ್ವಾಮಿಯವರು ತಾವೇ ಮಗನ ಪರ ಅಖಾಡಕ್ಕೆ ಇಳಿದು ಬಿಟ್ಟಿದ್ದಾರೆ. ಎಷ್ಟೇ ಜನ ಬೆಂಬಲವಿದ್ದರೂ ಸುಮಲತಾ ಅವರ ಕೈಯಲ್ಲಿ ದುಡ್ಡಿಲ್ಲ. ಎಷ್ಟೇ ಕೋಟಿ ಆಸ್ತಿ ಇದೆ ಎಂದರೂ ಆದಾಯವಿಲ್ಲ ಮತ್ತು ಅವರ ಜೊತೆ ಇರುವ ಯಾರೂ ಹಣ ಖರ್ಚು ಮಾಡುವಂತವರಲ್ಲ. ಈಗಾಗಲೇ 'ನಾನೇ ಸಾಲದಲ್ಲಿದ್ದೀನಿ' ಎಂದು ಹೇಳಿಕೊಂಡು ನುಣುಚಿಕೊಂಡಿರುವ ಯಶ್ ಮತ್ತು ಹಣವನ್ನು ಬಹಳ ವಿವೇಚನೆಯಿಂದ ಖರ್ಚು ಮಾಡುವ ದರ್ಶನ್ ರಿಂದ ಹಣ ಪಡೆಯುವುದು ಸುಮಲತಾಗೆ ಸುಲಭದ ಮಾತಲ್ಲ. ಬಂದು ಪ್ರಚಾರ ಮಾಡುತ್ತೇವೆ ಎಂದು ಯಾವುದೇ ನಟ ಹೇಳಿದರೂ ಕೊನೆಗೆ ಚುನಾವಣೆಯಲ್ಲಿ ನಡೆಯುವುದು ಹಣದ ಪ್ರಾಬಲ್ಯ ಆ ನಿಟ್ಟಿನಲ್ಲಿ ಸಿನಮಾ ರಂಗ ಸುಮಲತಾರ ಉಪಯೋಗಕ್ಕೆ ಬಂದಿಲ್ಲ. ಇಂಥಾ ಪರಿಸ್ಥಿತಿಯಲ್ಲಿ ಸುಮಲತಾ ನಿಜವಾಗಲೂ ಏಕಾಂಗಿಯಾಗಿಬಿಟ್ಟಿದ್ದಾರೆ. ಬಹಳಷ್ಟು ಸಾಲವನ್ನೂ ತಲೆ ಮೇಲೆ ಹೊತ್ತು ಕೊಂಡಿದ್ದಾರೆ. ಜನ ಬರುತ್ತಾರೆ ವಿನಃ ದುಡ್ಡು ಬರುತ್ತಿಲ್ಲ. ಬಹಳಷ್ಟು ಭರವಸೆ ಕೊಟ್ಟವರೂ ಕೂಡ ಹಿಂದೇಟು ಹಾಕುತ್ತಿದ್ದಾರೆ. ಸಿಕ್ಕಷ್ಟು ಹಣ ಎಲ್ಲೆಲ್ಲಿಗೂ ಸಾಕಾಗುತ್ತಿಲ್ಲ. ಕಾಂಗ್ರೆಸ್ ನವರು ಕೆಲವರು ಭಿನ್ನಮತೀಯರು ಮಾಡಿದ ವಾಗ್ದಾನ ಈಗ ಹುಸಿಯಾಗಿ ಅವರು ಪಕ್ಷದ ಕ್ರಮಕ್ಕೆ ಹೆದರಿ ಹಿಂದೇಟು  ಹಾಕಿದ್ದಾರೆ. ಇಂಥಾ ಸಂದರ್ಭದಲ್ಲಿ ಕುಮಾರಸ್ವಾಮಿಯವರು ತಮ್ಮ ನಿಜವಾದ ತಾಖತ್ತನ್ನು ಚುನಾವಣೆಗೆ ಒಂದೆರಡು ದಿನಗಳಿರುವಾಗ ಪ್ರದರ್ಶಿಸಿ ತಮ್ಮ ಮಗನ ಕಡೆ ಮತದಾರರನ್ನು ಒಲಿಸಿಕೊಂಡರೆ ಆಶ್ಚರ್ಯವಿಲ್ಲ ವೆಂದು ರಾಜಕೀಯ ಪಡಸಾಲೆಯಲ್ಲಿ ಅನುಭವ ಪಡೆದವರು ಹೇಳುತ್ತಿದ್ದಾರೆ. 

ಮಂಡ್ಯದಲ್ಲಿ ಖರ್ಚಾಗುತ್ತಿರುವ ಹಣದಲ್ಲಿ ಸ್ವಂತ ಹಣ, ದೇಣಿಗೆ ಪಡೆದ ಹಣ, ಲಂಚದ ಹಣ ಮತ್ತು ಸಾಲದ ಹಣವೂ ಇದೆ. ಈ ಮಟ್ಟಕ್ಕೆ ಹಣ ಖರ್ಚಾಗಿರುವುದು ಇದೇ ಮೊದಲ ಬಾರಿ ಎಂದೂ ಹೇಳಲಾಗುತ್ತಿದೆ. ಸೋತ ಯಾವ ಅಭ್ಯರ್ಥಿಯ ಕಡೆಯವರೂ ಸಾಲದ ಕೂಪದಲ್ಲಿ ಮುಳುಗುವುದಂತೂ ನಿಜ ಎಂದೂ ಹೇಳಲಾಗುತ್ತಿದೆ. ಆದರೆ ಇದೆಲ್ಲದರ ಮಧ್ಯೆ ಮಂಡ್ಯದ ಸಾಮಾನ್ಯ ಮತದಾರ ಜಾಣತನದಿಂದ ಒಂದಷ್ಟು ಹಣ ಮಾಡಿಕೊಂಡರೆ ಅದೊಂದೇ ಈ ಚುನಾವಣೆಯಿಂದ ಆತನಿಗಾಗುವ ಲಾಭ. 


ಸಂಬಂಧಿತ ಟ್ಯಾಗ್ಗಳು

ಮಂಡ್ಯ ಕುಮಾರ ಸ್ವಾಮಿ Cauvery Money


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ