ಮಂಡ್ಯದಲ್ಲಿ ಸಮಸ್ಯೆ ಸುಮಲತಾ ಅಲ್ಲ

Problem in Mandya is not Sumalatha

04-04-2019

ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಸ್ವಾಮಿಗೆ ದಿವಂಗತ ಅಂಬರೀಷ್ ಅವರ ಪತ್ನಿ ಸುಮಲತಾ ತಮ್ಮ ಸ್ಟಾರ್ ಪವರ್ ಮೂಲಕ ಸವಾಲೊಡ್ಡಿರುವುದು ಒಂದು ಕಡೆಯಾದರೆ ಇನ್ನೊಂದೆಡೆ ನಿಖಿಲ್ ಕುಮಾರಸ್ವಾಮಿ ಅವರ ಆತಂಕಕ್ಕೆ ನಿಜವಾಗಿ ಕಾರಣವಾಗಿರುವ ವ್ಯಕ್ತಿ ಮೈತ್ರಿ ಪಕ್ಷಗಳ ಪೈಕಿ ಒಂದಾದ ಕಾಂಗ್ರೆಸ್ ಅಲ್ಲೇ ಇರುವುದು ಮೈತ್ರಿಕೂಟದ ಎಲ್ಲರಿಗೂ ತಲೆ ನೋವಾಗಿ ಬಿಟ್ಟಿದೆ.

                ಆರಂಭದಿಂದಲೂ ದೇವೇಗೌಡರೊಂದಿಗೆ ಹಗೆ ಸಾಧಿಸುತ್ತಲೇ ಬಂದು,ಮೈತ್ರಿಕೂಟ ರಚನೆ ಆದ ಮೇಲೆ ಒತ್ತಡಕ್ಕೆ ಮಣಿದು ಸಮನ್ವಯ ಸಮಿತಿ ಅಧ್ಯಕ್ಷರರಾಗಿ ಜವಾಬ್ದಾರಿ ವಹಿಸಿಕೊಂಡ ಸಿದ್ದರಾಮಯ್ಯ ಅವರು ಕಳೆದ ಚುನಾವಣೆಯಲ್ಲಿ ಜೆಡಿಎಸ್ ಕಾರಣದಿಂದಾಗಿ ಸೋತ ನೋವನ್ನು ಇನ್ನೂ ಮರೆತಂತೆ ಕಾಣುತಿಲ್ಲ.ಈಗಲೂ ಅವಕಾಶ ಸಿಕ್ಕಾಗಲೆಲ್ಲ ಹಗೆ ಸಾಧಿಸಲು ಕಾಯುತ್ತಿರುವಂತೆ ಕಂಡುಬರುತ್ತಿರುವ ಸಿದ್ದರಾಮಯ್ಯನವರು ಮಂಡ್ಯ ಲೋಕಸಭೆಯ  ಚುನಾವಣೆಯ ಹಿನ್ನೆಲೆಯಲ್ಲಿ, ಅಲ್ಲಿರುವ ಜೆಡಿಎಸ್ ವಿರೋಧಿ ನಾಯಕರನ್ನು ಈ ಮೈತ್ರಿಕೂಟದ ಅಭ್ಯರ್ಥಿಯ ವಿರುದ್ಧ ಎತ್ತಿಕಟ್ಟಿ,ಆ ಮೂಲಕ ತಮ್ಮ ಕಾರ್ಯ ಸಾಧನೆಯನ್ನು ಮಾಡುತ್ತಿರುವಂತೆ  ಕಂಡು ಬರುತ್ತಿದೆ,ಎಂದು ಮಂಡ್ಯ  ಜಿಲ್ಲೆಯ ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ.

           ತಮ್ಮ ಆಪ್ತರಾದ  ಚಲುವರಾಯಸ್ವಾಮಿಯನ್ನು ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಕೆಲಸ ಮಾಡಲು ಸ್ವತಃ ಸಿದ್ದರಾಮಯ್ಯ ಅವರೇ ಜವಾಬ್ದಾರಿ ಕೊಟ್ಟುಬಿಟ್ಟಿರುವುದಾಗಿ  ಆರೋಪಗಳು ಕೇಳಿಬರುತ್ತಿವೆ.ಆದರೆ ಈ ಹಗೆತನ ಹಾಸನದಲ್ಲಿ ಕಂಡು ಬರುತ್ತಿಲ್ಲ,ಕಾರಣ ಇಷ್ಟೆ ದೇವೇಗೌಡ ಮತ್ತು ಸಿದ್ದರಾಮಯ್ಯ ನಡುವೆ ರಾಜಕೀಯ ಗುದ್ದಾಟ ನಡೆಯುತ್ತಿದ್ದರೂ ದೇವೇಗೌಡ ಕುಟುಂಬದ ಕುಡಿ ಆದ ರೇವಣ್ಣ ಅವರು ಆಗಲೂ ಸಿದ್ದರಾಮಯ್ಯ ಅವರ ಜೊತೆ ಒಳ್ಳೆಯ ಸಂಬಂಧವನ್ನೇ ಇಟ್ಟುಕೊಂಡು ಬಂದಿರುವರು,ಆ ಕಾರಣದಿಂದ ಈಗ ಕಾಂಗ್ರೆಸ್ ಅವರ ಬೆಂಬಲ ಸುಲಭವಾಗಿ ದೊರೆತಿರುವುದು ಮಾತ್ರವಲ್ಲದೆ ಸಿದ್ದರಾಮಯ್ಯ ಅವರೇ ಮುಂದೆ ನಿಂತು ರೇವಣ್ಣರ ಮಗ ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸಲು ಸಿದ್ಧರಾಗಿರುವಂತೆ ಕಂಡು ಬಂದಿದೆ.ಆದರೆ ಮಂಡ್ಯದ ವಿಚಾರ ಬೇರೆಯೇ ಇದ್ದು ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ವಿರುದ್ಧ ಈಗಲೂ ಪ್ರೀತಿಯನ್ನು ಬೆಳೆಸಿಕೊಳ್ಳದ ಸಿದ್ದರಾಮಯ್ಯ ಹೇಗಾದರೂ ಮಾಡಿ ತಮಗಾದ ನೋವನ್ನು ದೇವೇಗೌಡರ ಕುಟುಂಬಕ್ಕೂ ನೀಡಲು ಸನ್ನದ್ಧರಾಗಿದ್ದಾರೆ ಎಂದು ಹೇಳಲಾಗುತ್ತಿದ್ದೆ.

           ಇತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರನ್ನು ಕರೆಯಿಸಿ ನೇರವಾಗಿ,ನಿಷ್ಟುರವಾಗಿ ತಮ್ಮ ಅಭಿಪ್ರಾಯವನ್ನು ತಿಳಿಸಿ, ಯಾವುದಾದರೂ ಕಾರಣದಿಂದ ಮಂಡ್ಯದಲ್ಲಿ ಈ ರೀತಿಯ ಭಿನ್ನಮತ ಮುಂದುವರೆದರೆ ಅದರಿಂದ ಪಕ್ಷಕ್ಕೆ ನಷ್ಟ ಉಂಟಾಗುತ್ತದೆ, ಅಷ್ಟೆ ಅಲ್ಲದೆ ಆ ಮೂಲಕ  ಸಿದ್ದರಾಮಯ್ಯ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆದರಿಕೆ ನೀಡಿದ ಮೇಲೂ ಸಿದ್ದರಾಮಯ್ಯ ಅವರು ಬಗ್ಗಿದ ಹಾಗೆ ಕಾಣುತ್ತಿಲ್ಲ.ನನಗೂ ಚಲುವರಾಯಸ್ವಾಮಿ ನಡವಳಿಕೆಗೂ ಸಂಬಂಧವಿಲ್ಲ ಅವರದು ಏನೋ ವೈಯಕ್ತಿಕವಾದಂತ  ಬೇಸರ ಇರಬಹುದು ಎಂದೇ ಸಮಜಾಯಿಸಿ ನೀಡಿಕೊಂಡೇ ಬರುತ್ತಿದ್ದಾರೆ. 

           ಆದರೆ ಇದು ಹೀಗೇ  ಮುಂದುವರಿದರೆ ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ಜೆಡಿಎಸ್  ಪಕ್ಷವು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡುವುದಂತೂ ಖಂಡಿತ ಎಂದು ಊಹಿಸಲಾಗುತ್ತಿದೆ.ಸಿದ್ದರಾಮಯ್ಯ ಮನಸ್ಸು ಮಾಡಿದರೆ ಆ ಸ್ಥಿತಿಯನ್ನು ಬದಲಾಯಿಸಿ ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸುವ ಕಡೆ ಹೆಜ್ಜೆ ಹಾಕಬಹುದು, ಹಾಗೇ  ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲೂ ಪಕ್ಷಕ್ಕೆ ಯಶಸ್ಸು ತಂದುಕೊಡಬಹುದು  ಎಂದು ಹೇಳಲಾಗುತ್ತಿದೆ. 

             ಸುಮಲತಾ ಅವರ ಆರ್ಭಟ ಎಷ್ಟೇ ಇದ್ದರೂಕೂಡ,ಅದು ಸಿನಿಮಾ ಮುಗಿದಮೇಲೆ ಜನ  ಮರೆತು ಹೋಗುವಂತೆ, ಪ್ರಚಾರ ಮುಗಿದ ಮೇಲೆ ಜನ ಸ್ಟಾರ್ಗಳನ್ನು ಮರೆತು ಬೇರೆ ಅವರಿಗೆ ವೋಟ್ ಹಾಕಲು ಸಿದ್ಧರಿರುವ ಸಮಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಬಿರುಕು ಜನರನ್ನು ಮತ್ತೆ ಸುಮಲತಾ ಅವರ ಕಡೆಗೆ ದೂಡಿದರೂ ಆಶ್ಚರ್ಯವಿಲ್ಲವೆಂದು ಹೇಳಲಾಗುತ್ತಿದೆ, ಆದ್ದರಿಂದ ಸುಮಲತಾ ಬಗೆಗಿನ ಚಿಂತೆಗಿಂತ ಸಿದ್ದರಾಮಯ್ಯ ಅವರ ನಡವಳಿಕೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡರೆ ಸೂಕ್ತ ಎಂದು ಪ್ರಾಜ್ಞರು ಹೇಳುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#Mandya# #Sumalatha# #Lokasabha# #Nikhil Kumaraswamy#


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ