ಉದ್ಯಾನನಗರಿಗೆ ಕಾಲಿಟ್ಟ ಹಣ್ಣುಗಳ ರಾಜ ಮಾವು

King of  fruits Mango  Came to Bangalore Market

01-04-2019

ಬಿರು ಬಿಸಿಲಿನ ಕಾವು ಹೆಚ್ಚುತ್ತಿರುವಾಗಲೇ ಹಣ್ಣುಗಳ ರಾಜ ಮಾವಿನ ಹಣ್ಣುಗಳು ರಾಜಧಾನಿಗೆ ಲಗ್ಗೆಯಿಟ್ಟಿವೆ.ಬಾದಾಮಿ, ಹಿಮಾಯತ್, ಮಲ್ಗ್ಪೊವಾ, ಮಲ್ಲಿಕಾ, ರಸಪೂರಿ, ಸಿಂಧೂರ, ರತ್ನಗಿರಿ, ತೋತಾಪುರಿ, ದಶೇರಿ,ಕಾಲಾಪಹಾಡ್,ಕುದಾದಾಸ್, ಬೈಗಾನ್‍ಪಲ್ಲಿ ಸೇರಿದಂತೆ 16ಕ್ಕೂ ಹೆಚ್ಚಿನ ತಳಿಗಳು ಮಾರುಕಟ್ಟೆಗೆ ಬಂದಿದ್ದು ಮಾವು ಪ್ರೀಯರ ಬಾಯಲ್ಲಿ ನೀರೂರಿಸ ತೊಡಗಿವೆ.

ಬಿಸಿಲಿನ ಬೇಗೆಗೆ ಮಾವು ತಿನ್ನಲು ಜನ ಹಿಂದೇಟು ಹಾಕುತ್ತಿದ್ದರೂ ಮಾವಿನ ಸುಗ್ಗಿ ಶುರುವಾಗುತ್ತಿದ್ದಂತೆ ತರಹೇವಾರಿ ಮಾವು ಬಿಕರಿಗೆ ಲಭ್ಯವಿದ್ದು, ಸ್ವಾದಿಷ್ಟ ಹಣ್ಣುಗಳಲ್ಲಿ ಕಣ್ಣಿಗೆ ಬೀಳುತ್ತಿವೆ. ಇನ್ನು ಈ ಬಾರಿ ಉಪ್ಪಿನಕಾಯಿಗೆ ಹೇಳಿ ಮಾಡಿಸಿದಂತಿರುವ ಮಾವಿನ ಕಾಯಿಗಳು ಮಾರುಕಟ್ಟೆಗೆ ಬಂದಿರುವುದು ವಿಶೇಷ.

ನಗರದ ಹಣ್ಣಿನ ಮಳಿಗೆಗಳು, ಸೂಪರ್ ಮಾರ್ಕೆಟ್‍ಗಳು, ಬಜಾರ್‍ಗಳಲ್ಲಿ ಹವಾ ನಿಯಂತ್ರಿತ ವಾತಾವರಣದಲ್ಲಿ ಮಾವಿನ ದಾಸ್ತಾನು ಮಾರಾಟಕ್ಕಿದೆ. ಇನ್ನೊಂದೆಡೆ ಹಾಪ್‍ಕಾಮ್ಸ್, ತಳ್ಳುಗಾಡಿಗಳು, ಬೀದಿಬದಿ ವ್ಯಾಪಾರ ಮಳಿಗೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಾವಿನ ಹಣ್ಣಿನ ರಾಶಿ ಕಾಣುತ್ತಿದೆ. ಇನ್ನೂ ಕೆಲ ತಿಂಗಳ ಕಾಲ ಮಾವಿನ ಪಾರುಪತ್ಯ ಮುಂದುವರಿದಿದೆ.

ತಮಿಳುನಾಡಿನ ಸೇಲಂ, ತಿರಕೋಯಿಲೂರು, ಕಾಟ್ಪಾಡಿ, ಧರ್ಮಪುರಿ ಮೂಲದ ವ್ಯಾಪಾರಿಗಳು ಕಳೆದ 15?-20 ವರ್ಷಗಳಿಂದ ಮಾವಿನ ಸುಗ್ಗಿ ಆರಂಭವಾಗುತ್ತಿದ್ದಂತೆ ಕುಟುಂಬ ಸಮೇತ ಬಂದು ಕೆಲ ತಿಂಗಳು ವ್ಯಾಪಾರ ಮಾಡುತ್ತಾರೆ. ಆಗಸ್ಟ್‍ವರೆಗೂ ವ್ಯಾಪಾರ ಮುಂದುವರಿಯಲಿದ್ದು, ಪ್ರತಿ ಮಳಿಗೆಯಲ್ಲಿ ನಿತ್ಯ ಕನಿಷ್ಠವೆಂದರೂ 200ರಿಂದ 250 ಕೆ.ಜಿ. ಮಾವು ಬಿಕರಿಯಾಗುತ್ತಿದ್ದು, 10 ರಿಂದ 12 ಸಾವಿರ ರೂ. ವ್ಯಾಪಾರವಾಗುತ್ತಿದೆ.

ನಗರದ ಜಯಮಹಲ್ ರಸ್ತೆಯ ಫನ್‍ವಲ್ರ್ಡ್ ಮುಂಭಾಗದ ಖಾಲಿ ಜಾಗದಲ್ಲಿ 100ಕ್ಕೂ ಹೆಚ್ಚು ಮಾವಿನಹಣ್ಣಿನ ಅಂಗಡಿಗಳು ತಲೆ ಎತ್ತುತ್ತಿವೆ. ಪ್ರಕೃತಿ ವೈಪರೀತ್ಯದ ಹಿನ್ನೆಲೆಯಲ್ಲಿ ಈ ಬಾರಿ ಮಾವಿನ ಆಗಮನ ತಿಂಗಳ ಮಟ್ಟಿಗೆ ತಡವಾಗಿದೆ. ಹೀಗಾಗಿ ಬೇಡಿಕೆ ಹೆಚ್ಚಾಗಿದ್ದು, ಬೆಲೆಯು ತುಸು ಹೆಚ್ಚಿದೆ. ಕಳೆದ ಬಾರಿಗೆ ಹೊಲಿಸಿದರೆ ಕೆ.ಜಿ.ಗೆ 20ರಿಂದ 30 ರೂ. ಹೆಚ್ಚಾಗಿದೆ. ಇಷ್ಟಾದರೂ ಖರೀದಿ ಭರಾಟೆ ಜೋರಾಗಿದೆ. ಮುಖ್ಯವಾಗಿ ಜ್ಯೂಸ್ ವ್ಯಾಪಾರಿಗಳು, ಹೋಟೆಲ್, ಶುಭ ಸಮಾರಂಭಗಳಿಗೆ ಮಾವು ಖರೀದಿಗೂ ಚುರುಕಾಗಿ ನಡೆದಿದೆ.

ಬಾದಾಮಿ, ಹಿಮಾಯತ್, ಮಲ್ಗ್ಪೊವಾ, ಮಲ್ಲಿಕಾ, ರಸಪೂರಿ, ಸಿಂಧೂರ, ರತ್ನಗಿರಿ, ತೋತಾಪುರಿ, ದಶೇರಿ, ಕಾಲಾಪಹಾಡ್ , ಕುದಾದಾಸ್, ಬೈಗಾನ್‍ಪಲ್ಲಿ ಸೇರಿದಂತೆ 16ಕ್ಕೂ ಹೆಚ್ಚಿನ ತಳಿಗಳು ಮಾರುಕಟ್ಟೆಗೆ ಆಗಮಿಸಿವೆ. ಇವುಗಳಲ್ಲಿ ಬಾದಾಮಿ ಹಾಗೂ ಹಿಮಾಯತ್ ತಳಿಗಳು ರುಚಿಭರಿತವಾಗಿದೆ.

ನೆರೆರಾಜ್ಯಗಳ ಹಣ್ಣು ಲಭ್ಯ: ರಾಜ್ಯದಲ್ಲಿ ಈ ಬಾರಿ ಮಾವಿನ ಫಸಲು ತಡವಾದ ಹಿನ್ನೆಲೆ ಹೊರ ರಾಜ್ಯಗಳಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಂಗಳೂರಿಗೆ ಪೂರೈಕೆಯಾಗಿದೆ. ಪ್ರಮುಖವಾಗಿ ಆಂಧ್ರಪ್ರದೇಶ, ತಮಿಳುನಾಡಿನ ವಿವಿಧ ಭಾಗಗಳಿಂದ ಹಣ್ಣುಗಳನ್ನು ಇಂದು ಇಲ್ಲಿ ಮೂರ್ನಾಲ್ಕು ದಿನ ಹುಲ್ಲಿನ ಪೆಟ್ಟಿಗೆಯಲ್ಲಿಟ್ಟು ಮಾಗಿಸಿ ಮಾರಾಟ ಮಾಡುತ್ತಾರೆ. ಸದ್ಯದಲ್ಲೇ ಚಿಂತಾಮಣಿ, ಶ್ರೀನಿವಾಸಪುರ ಭಾಗಗಳಿಂದ ಮಾವು ಬರಲಿದೆ.
 


ಸಂಬಂಧಿತ ಟ್ಯಾಗ್ಗಳು

#Summer #mango #Bangalore #Market


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ