ಕೊನೆಗೂ ಜಾಧವ್ ಹಾದಿ ಸುಗಮ-ರಾಜೀನಾಮೆ ಅಂಗೀಕರಿಸಿದ ಸ್ಪೀಕರ್

Speaker Accepted Jhadhavs Resignation

01-04-2019

ರಾಷ್ಟ್ರೀಯ ಕಾಂಗ್ರೆಸ್‍ನ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೆದುರು ಸ್ಪರ್ಧಿಸಿರುವ ಉಮೇಶ್ ಜಾಧವ್ ಅವರು ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅಂಗೀಕರಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದ ಉಮೇಶ್ ಜಾಧವ್ ಅವರು ಗುಲ್ಬರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನವೇ ಬಿಜೆಪಿಗೆ ಸೇರ್ಪಡೆಯಾದ ಅವರ ಕ್ರಮದ ಹಿನ್ನೆಲೆಯಲ್ಲಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು.ಆರು ವರ್ಷಗಳ ಕಾಲ ಯಾವ ಚುನಾವಣೆಯಲ್ಲೂ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಕೋರಿ ಕಾಂಗ್ರೆಸ್ ಪಕ್ಷ ವಿಧಾನಸಭಾಧ್ಯಕ್ಷರ ಮೊರೆ ಹೋಗಿತ್ತು.

ಈ ಹಿನ್ನೆಲೆಯಲ್ಲಿ ಉಮೇಶ್ ಜಾಧವ್ ಅವರ ರಾಜೀನಾಮೆಯನ್ನು ಅಂಗೀಕರಿಸುವ ಮುನ್ನ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದರು.

ವಿಚಾರಣೆಯ ಸಂದರ್ಭದಲ್ಲಿ ಪತ್ರಕರ್ತರು,ಸಾರ್ವಜನಿಕರು ಹಾಜರಿರಲು ಅವಕಾಶ ಮಾಡಿಕೊಟ್ಟಿದ್ದ ಸಭಾಧ್ಯಕ್ಷ ರಮೇಶ್ ಕುಮಾರ್,ಯಾವ ಕಾರಣಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೀರಿ?ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದರು.

ಈ ಮಧ್ಯೆ ವಿಚಾರಣೆಯ ಸಂದರ್ಭದಲ್ಲಿ ಹಾಜರಿದ್ದವರು,ಯಾವ ಕಾರಣಕ್ಕೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಡಿ.ನಿಮ್ಮನ್ನು ನಂಬಿ ಮತ ಹಾಕಿದ್ದೇವೆ.ಈಗ ನಮ್ಮ ನಂಬಿಕೆಯನ್ನು ಹುಸಿಗೊಳಿಸಿ ನೀವು ರಾಜೀನಾಮೆ ಕೊಡುವುದು ಸರಿಯಲ್ಲ ಎಂದು ವಾದಿಸಿದ್ದರು.

ಹೀಗೆ ಪ್ರತಿರೋಧಗಳ ಮಧ್ಯೆ ವಿಚಾರಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ತೀರ್ಪನ್ನು ಕಾಯ್ದಿರಿಸಿ ಆದೇಶ ಹೊರಡಿಸಿದ್ದರು.

ಆದರೆ ಇದೀಗ ಉಮೇಶ್ ಜಾಧವ್ ಅವರು ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ರಮೇಶ್ ಕುಮಾರ್ ಹೇಳಿದ್ದು,ಆ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರೆದುರು ಸ್ಪರ್ಧಿಸಿರುವ ಉಮೇಶ್ ಜಾಧವ್ ನೆಮ್ಮದಿಯಾಗಿ ಉಸಿರಾಡುವಂತಾಗಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅದು ಅಂಗೀಕಾರವಾಗುವ ಮುನ್ನವೇ ಬಿಜೆಪಿಗೆ ಸೇರ್ಪಡೆಯಾದ ಉಮೇಶ್ ಜಾಧವ್ ಅವರ ಧೋರಣೆ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಅಪಾಯಕ್ಕೆ ಗುರಿಯಾಗಲಿದೆ ಎಂಬ ಮಾತು ಕೇಳಿ ಬಂದಿತ್ತು.

ಆದರೆ ಇದೀಗ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಉಮೇಶ್ ಜಾಧವ್ ಅವರು ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಅಂಗೀಕರಿಸುವುದರೊಂದಿಗೆ ಗುಲ್ಬರ್ಗ ಲೋಕಸಭಾ ಕ್ಷೇತ್ರದ ಕಣಕ್ಕೆ ರಂಗು ಬಂದಂತಾಗಿದೆ.


ಸಂಬಂಧಿತ ಟ್ಯಾಗ್ಗಳು

#Loksabha 2019 #Resignation #Umesh Jhadav #Speaker


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ