ಪಂಚಾಯತ್ ರಾಜ್ ಇಲಾಖೆಯ ಅಂದಾಜು ಸಮಿತಿಯ  6ನೇ ವರದಿ !

Kannada News

07-06-2017 181

ಬೆಂಗಳೂರು:-  ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಹಣದ ದುರುಪಯೋಗದ ಬಗ್ಗೆ ತನಿಖೆ ನಡೆಸಿರುವ  ಶ್ರೀಧರ್ ಮತ್ತು ವೀರಭದ್ರಪ್ಪ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಿ, ತಪ್ಪು ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಂದಾಜು ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ವಿಧಾನಸಭೆಯಲ್ಲಿಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಂದಾಜುಗಳ ಸಮಿತಿಯ ಅಧ್ಯಕ್ಷ ಮಾಲಿಕಯ್ಯ ಗುತ್ತೇದಾರ್ ಸಮಿತಿಯ 6ನೇ ವರದಿಯನ್ನು ಮಂಡಿಸಿದರು. ಈ ವರದಿಯಲ್ಲಿ ಗ್ರಾಮೀಣ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಹಳ್ಳಿಗಳಿಗೂ ಕುಡಿಯುವ ನೀರು ಒದಗಿಸಲು  ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವಂತೆಯೂ ಶಿಫಾರಸ್ಸು ಮಾಡಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು, ಸ್ಥಗಿತಗೊಂಡ ಮತ್ತು ವಿಳಂಬಗೊಂಡ ಯೋಜನೆಗಳನ್ನು ಪೂರ್ಣಗೊಳಿಸಲು ಅಲ್ಪಾವದಿ ಟೆಂಡರ್ ಕರೆಯಬೇಕು ಎಂದು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಂಪನ್ಮೂಲ ಕ್ರೂಢೀಕರಿಸಲು ಅನುಕೂಲವಾಗುವಂತೆ ಪ್ರತ್ಯೇಕವಾದ ಲೆಕ್ಕಶೀರ್ಷಿಕೆಯನ್ನೂ ನೀಡುವಂತೆ ಸಮಿತಿ ಶಿಫಾರಸ್ಸು ಮಾಡಿದ್ದು, 10 ವರ್ಷಗಳಿಂದಲೂ ಸಂಪೂರ್ಣಗೊಳ್ಳದ ಕಾಮಗಾರಿಗಳು, ಗುಣಮಟ್ಟದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಮೂರನೇ ವ್ಯಕ್ತಿಯಿಂದ ಸರ್ವೆ ನಡೆಸಿ ಕಾಮಗಾರಿಗಳನ್ನು ಮುಂದುವರಿಸುವುದಕ್ಕೆ ತೀರ್ಮಾನ ತೆಗದುಕೊಳ್ಳುವಂತೆಯೂ ಸಮಿತಿ ಶಿಫಾರಸ್ಸು ಮಾಡಿದೆ. ಇದರ ಜತೆಗೆ ರಾಷ್ಡ್ರೀಯ ಗ್ರಾಮೀಣ ಕುಡಿಯು ನೀರು ಯೋಜನೆಯಲ್ಲಿ ಕಲಬುರಗಿ ಜಿಲ್ಲೆಯ ಜೇವರ್ಗಿ, ಅಳಂದ, ಚಿಂಚೋಳಿ ಮತ್ತು ಚಿತ್ತಾಪುರ ತಾಲ್ಲೂಕುಗಳಲ್ಲಿ ಆದ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಲು ಸಮಿತಿ ಶಿಫಾರಸ್ಸು ಮಾಡಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲು ನದಿಗಳಿಂದ ಕೆರೆಯಲ್ಲಿ ಕನಿಷ್ಠ 3 ತಿಂಗಳಿಗಾಗುವಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಸಮಿತಿ ಶಿಫಾರಸ್ಸು ಮಾಡಿರುವುದಾಗಿ ತಿಳಿದು ಬಂದಿದೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ