ಕುತೂಹಲ ಮೂಡಿಸಿದ ಸುಮಲತಾ ಧರ್ಮಸ್ಥಳ ಭೇಟಿ 

 Sumalatha Dharmasthala visits the curiosity

01-04-2019

ಅತ್ತ ಮಂಡ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದ್ದರೇ, ಇತ್ತ ಅಭ್ಯರ್ಥಿಗಳ ಟೆಂಪಲ್ ರನ್ ಕೂಡ ಜೋರಾಗಿಯೇ ಸಾಗಿದೆ.  ಇಷ್ಟು ದಿನಗಳ ಕಾಲ ಎಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ದೇವಸ್ಥಾನ ಪ್ರವಾಸ ನಡೆಸುತ್ತಿದ್ದರು. ಇದೀಗ ಸುಮಲತಾ ಅಂಬರೀಶ್ ಕೂಡ ದೇವಾಲಯ ದರ್ಶನ ಆರಂಭಿಸಿದ್ದಾರೆ. 


ಮಂಡ್ಯ ರಾಜ್ಯದ ಹೈವೋಲ್ಟೆಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ಇದು ಚುನಾವಣೆ ಮಾತ್ರವಾಗದೆ ಸಿಎಂ ಮತ್ತು ಸುಮಲತಾ ನಡುವಿನ ಕದನದ ಕಣವಾಗಿ ಮಾರ್ಪಟ್ಟಿಂತಿದೆ.ಸುಮಲತಾರನ್ನು ಸೋಲಿಸಲೇಬೇಕೆಂದು ಪಣತೊಟ್ಟಿರುವ ಸಿಎಂ ಕುಮಾರಸ್ವಾಮಿ ಅದಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. 


ಈ ಮಧ್ಯೆ ನಿಖಿಲ್ ಕುಮಾರಸ್ವಾಮಿ ನಾಮಪತ್ರ ದೋಷಗಳಿಂದ ಕೂಡಿದ್ದರೂ ಅಂಗೀಕರಿಸಲಾಗಿದೆ ಎಂದು ನಿನ್ನೆ ಸುಮಲತಾ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದರು. ಇದಕ್ಕೆ ನಿಖಿಲ್ ದಾಖಲೆ ಒದಗಿಸುವಂತೆ ವಾಗ್ದಾಳಿ ಕೂಡ ನಡೆಸಿದ್ದರು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸುಮಲತಾ ಇಂದು ಧೀಡಿರ್ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅವರಿಗೆ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹಾಗೂ ನಟ ದೊಡ್ಡಣ್ಣ ಸಾಥ್ ನೀಡಿದ್ದಾರೆ. 


ಧರ್ಮಸ್ಥಳದ ಮಂಜುನಾಥಸ್ವಾಮಿ ದರ್ಶನ ಪಡೆಯಲಿರುವ ನಟಿ ಸುಮಲತಾ ಬಳಿಕ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶಿರ್ವಾದ ಪಡೆಯಲಿದ್ದಾರೆ.  ನಾಮಪತ್ರ ಗೊಂದಲ,ವೈಯಕ್ತಿಕ ಸವಾಲುಗಳು ಹಾಗೂ ಷಡ್ಯಂತ್ರಗಳ ನಡುವೆ ಸುಮಲತಾ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು, ಕುತೂಹಲ ಮೂಡಿಸಿದೆ.


 ಮೂಲಗಳ ಪ್ರಕಾರ ಸುಮಲತಾ ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ನಿಖಿಲ್ ನಾಮಪತ್ರದ ವಿಚಾರದ ಗೊಂದಲಗಳು ಹಾಗೂ ಸರ್ಕಾರಿ ಅಧಿಕಾರಿಗಳು, ಕಚೇರಿ ನಿಖಿಲ್‍ಗೆ ಪೂರಕವಾಗಿ ವರ್ತಿಸಿದ ರೀತಿಯಿಂದ ಬೇಸತ್ತಿದ್ದಾರೆ. ಅಲ್ಲದೆ ಮಾನಸಿಕವಾಗಿ ನೊಂದಿದ್ದಾರೆ. ಹೀಗಾಗಿ ಮನಸ್ಸಿನ ಸಮಾಧಾನಕ್ಕಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. 


ರಾಜಕೀಯದ ದೃಷ್ಟಿಯಿಂದ ಧರ್ಮಸ್ಥಳ ಮಂಜುನಾಥಸ್ವಾಮಿ ಅತ್ಯಂತ ಪವರ್ ಫುಲ್ ಎಂಬುದು ರಾಜಕೀಯ ನಾಯಕರ ನಂಬಿಕೆ. ಹೀಗಾಗಿ ಈ ಹಿಂದೆಯೂ ಹಲವು ಸಂದರ್ಭದಲ್ಲಿ ಮಾಜಿ ಸಿಎಂ ಬಿಎಸ್‍ವೈ, ಹಾಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ತಮ್ಮ ಆಣೆ ಪ್ರಮಾಣದ ರಾಜಕೀಯಕ್ಕೆ ಧರ್ಮಸ್ಥಳವನ್ನು ಬಳಸಿಕೊಂಡಿದ್ದಾರೆ. 
 


ಸಂಬಂಧಿತ ಟ್ಯಾಗ್ಗಳು

#Loksabha 2019 #Sumalatha #Darmasthal #Mandya


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ