ತಾಕತ್ತಿದ್ದರೇ, ಮೋದಿ ನನ್ನೊಂದಿಗೆ ಚರ್ಚೆಗೆ ಬರಲಿ - ಸಿದ್ಧರಾಮಯ್ಯ

 Siddaramaiah

30-03-2019

ಸದಾಕಾಲ ದೇವೆಗೌಡರು ಮತ್ತು ಅವರ ಕುಟುಂಬದ ವಿರುದ್ಧ ಕಿಡಿಕಾರುತ್ತಲೇ ಇದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಇವತ್ತು ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕೂತು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಇಷ್ಟೇ ಅಲ್ಲ, ಬಿಜೆಪಿ ಎಂಬುದು ಕ್ಯಾನ್ಸರ್ ರೋಗವಿದ್ದಂತೆ. ಇದಕ್ಕೆ ಪರಿಹಾರ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವುದು. ತಾಕತ್ತಿದ್ದರೇ, ಅಭಿವೃದ್ಧಿ ವಿಚಾರದಲ್ಲಿ ಮೋದಿ ನನ್ನೊಂದಿಗೆ ಚರ್ಚೆಗೆ ಬರಲಿ ಎಂದು ಸವಾಲೆಸೆದಿದ್ದಾರೆ. 

ಮೈಸೂರಿನಲ್ಲಿ ನಡೆದ ಚುನಾವಣೆಯ ಕಾಂಗ್ರೆಸ್-ಜೆಡಿಎಸ್ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವುದು  ನಮ್ಮ ಗುರಿ. ನರೇಂದ್ರ ಮೋದಿ ಮಹಾ ಸುಳ್ಳುಗಾರ/ 50 ವರ್ಷದ ಅವಧಿಯಲ್ಲಿ ಅತಿ ಹೆಚ್ಚು ಸುಳ್ಳು ಹೇಳಿದ ಪ್ರಧಾನಿ ಮೋದಿ ಎಂದು ಲೇವಡಿ ಮಾಡಿದರು. 

ದೇಶದಲ್ಲಿ ಮೋದಿ ಯಾವೆಲ್ಲ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂಬುದರ ವಿವರದೊಂದಿಗೆ ಅವರು ಬಹಿರಂಗ ಚರ್ಚೆಗೆ ಬರಲಿ, ನಾನು ಚರ್ಚೆಗೆ ಸಿದ್ಧವಿದ್ದೇನೆ. ಮೋದಿ ಸುಳ್ಳು ಹೇಳಿಕೊಂಡು ಮತಯಾಚನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಇದೇ ವೇಳೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ್ ವಿರುದ್ಧ ಕೂಡ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದು, ಎಲ್ಲ ವಿಚಾರದಲ್ಲೂ ಪ್ರತಾಪ್ ಸಿಂಹ್‍ನಿಗೆ ತಾನು ಎಂಬ ಅಹಂ ಹೆಚ್ಚಿದೆ. ಏನು ಕೇಳಿದ್ರೂ ನಾನು ಮಾಡಿದೆ ಅಂತಾನೆ, ಮೈಸೂರನ್ನು ಪ್ಯಾರೀಸ್ ಮಾಡ್ತಿನಿ ಅಂದವರು ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು. 

ಇದೇ ವೇಳೆ  ಕಾಂಗ್ರೆಸ್ ಕಾರ್ಯಕರ್ತರ ಮನವೊಲಿಕೆಯ ಪ್ರಯತ್ನ ಮಾಡಿದ ಸಿದ್ಧರಾಮಯ್ಯ, ಬಳ್ಳಾರಿ, ರಾಮನಗರ, ಮಂಡ್ಯದಲ್ಲಿ ಮೈತ್ರಿಯಿಂದ ಚುನಾವಣೆ ಎದುರಿಸಿ 2 ಲಕ್ಷ ಮತಗಳ ಅಂತರದಿಂದ ಗೆಲುವು ಪಡೆದಿದ್ದೇವೆ. ಈ ಬಾರಿ ಮೈಸೂರಿನಲ್ಲೂ ನೀವೆಲ್ಲರೂ ಒಂದಾಗಿ ದುಡಿದರೆ  2 ಲಕ್ಷ ಮತಗಳ ಅಂತರದಿಂದಲೇ  ಗೆಲ್ಲಬಹುದು. ಹಳೆಯದನ್ನೆಲ್ಲ ಮರೆತು ಒಂದಾಗಿ ಎಂದು ಕರೆಕೊಟ್ಟರು. 
ಸಾಕಷ್ಟು ಬಾರಿ ಮೈಸೂರಿನಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ಹೊಡೆದಾಟಗಳು ನಡೆದಿವೆ. ಆದರೆ ನಾಯಕರುಗಳು ಮಾಡಿಕೊಂಡ ಮೈತ್ರಿಯಿಂದ ಇವತ್ತು ಅದೇ ಕಾರ್ಯಕರ್ತರು ಒಂದೆ ಸೂರಿನಡಿ ಕುಳಿತು ಚುನಾವಣೆಗೆ ದುಡಿಯುವಂತಾಗಿದ್ದು ಮಾತ್ರ ವಿಪರ್ಯಾಸವೇ ಸರಿ. ಇನ್ನೊಂದೆಡೆ ಈ ಸಭೆಗೆ ಮಾಜಿ ಸಚಿವ ಜಿ.ಟಿ.ದೇವೆಗೌಡರ್ ಗೈರಾಗಿದ್ದು, ಮೈತ್ರಿ ಸಭೆಯೊಂದಿಗೆ ಅಂತರ ಕಾಯ್ದುಕೊಂಡಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Loksabha 2019 #Narendra Modi #Siddaramaiah #Challenge


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ