ರಣಂ ಚಿತ್ರೀಕರಣದ ಸ್ಪೋಟಕ್ಕೆ ಎರಡು ಜೀವ ಬಲಿ- ಚಿತ್ರರಂಗ ಎಚ್ಚೆತ್ತುಕೊಳ್ಳಲು ಇನ್ನೆಷ್ಟು ಬಲಿಬೇಕು? 

Two more lives to be shot in Ranam shooting - How much more should the cinema ever wake up?

30-03-2019

ಮಾಸ್ತಿಗುಡಿ ಚಿತ್ರದ ವೇಳೆ ನಡೆದ ಅಚಾತುರ್ಯದಿಂದ ಕನ್ನಡದ ಇಬ್ಬರು ಉದಯೋನ್ಮುಖ ಖಳನಟರನ್ನು ಕಳೆದುಕೊಂಡ ಘಟನೆ ಮರೆಯುವ ಮುನ್ನವೇ ಮತ್ತೊಂದು ಚಿತ್ರೀಕರಣದ ಅವಘಡ ನಡೆದಿದ್ದು, ಎರಡು ಅಮಾಯಕ ಜೀವಗಳು ಬಲಿಯಾಗಿವೆ. ಸಾಕಷ್ಟು ಕಹಿಘಟನೆಗಳು ನಡೆದ ಮೇಲೂ  ಚಿತ್ರತಂಡಗಳು ಮುಂಜಾಗ್ರತಾ ಕ್ರಮಕೈಗೊಳ್ಳದೆ ತಮ್ಮ ಬೇಜಾವಬ್ದಾರಿ ವರ್ತನೆ ಮುಂದುವರಿಸಿರೋದಿಕ್ಕೆ ಈ ಘಟನೆ ಸಾಕ್ಷಿಯಾಗಿದೆ. 

ನಿನ್ನೆ ಬೆಂಗಳೂರಿನ ಬಾಗಲೂರು ಬಳಿ  ಶೂಟಿಂಗ್ ನಡೆಸುತ್ತಿದ್ದ ರಣಂ ತಂಡ ಯಾವುದೇ ಮುಂಜಾಗ್ರತೆ ಕ್ರಮಕೈಗೊಳ್ಳದೆ ಕಾರು ಸ್ಪೋಟ ದೃಶ್ಯಾವಳಿ ಚಿತ್ರೀಕರಿಸುತ್ತಿತ್ತು. ಈ ವೇಳೆ ಸ್ಪೋಟ ದೃಶ್ಯಕ್ಕಾಗಿ ನಡೆಸಿದ ಸಿಲಿಂಡರ್ ಸ್ಪೋಟ ಶೂಟಿಂಗ್ ನೋಡಲು ನಿಂತಿದ್ದ ತಾಯಿ ಹಾಗೂ ಮಗುವನ್ನು ಬಲಿತೆಗೆದುಕೊಂಡಿದೆ. 
ಬಾಗಲೂರು ನಿವಾಸಿ ಸುಮೇರಾ ಬಾನು ಹಾಗೂ ಅವರ ಪುತ್ರಿ  5 ವರ್ಷದ ಅಹಿರಾ ಮೃತ ದುರ್ದೈವಿಗಳು.  ಮತ್ತೊಬ್ಬ ಮಗಳು  ಜೈನಾಬಿ ಹಾಗೂ ಸುಮೇರಾ ಬಾನು ಪತಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಬಾಗಲೂರು -ಸೂಲಿಬೆಲೆ ಮಾರ್ಗದಲ್ಲಿ ರಣಂ ಚಿತ್ರತಂಡ ರಸ್ತೆ ಬ್ಲಾಕ್ ಮಾಡಿ ಚಿತ್ರೀಕರಣ ನಡೆಸುತ್ತಿತ್ತು ಎನ್ನಲಾಗಿದೆ. ಈ ವೇಳೆ ಸೂಲಿಬೆಲೆಗೆ ಕಾರಿನಲ್ಲಿ  ಪ್ರಯಾಣಿಸುತ್ತಿದ್ದ ಸುಮೇರಾ ಬಾನು ಹಾಗೂ ಕುಟುಂಬ ಮುಂದಕ್ಕೆ ಹೋಗಲಾಗದೆ ಶೂಟಿಂಗ್ ಸ್ಥಳದ ಬಳಿ ಕಾರು ನಿಲ್ಲಿಸಿ ಶೂಟಿಂಗ್ ದೃಶ್ಯ ನೋಡುತ್ತಿತ್ತು ಎನ್ನಲಾಗಿದೆ. ಈ ವೇಳೆ ಕಾರು ಸ್ಟೋಟದ ದೃಶ್ಯ ಚಿತ್ರೀಕರಿಸಲು ಮುಂದಾದ ಚಿತ್ರತಂಡ ಯಾವುದೇ ಮುಂಜಾಗ್ರತೆ ಕೈಗೊಳ್ಳದೆ ಕಾರೊಂದರಲ್ಲಿ ಸಿಲಿಂಡರ್ ಸ್ಪೋಟಿಸಿದೆ. ಈ ವೇಳೆ ಚದುರಿದ ಕಾರಿನ ಪಾರ್ಟ್‍ಗಳು ಕೊಂಚ ದೂರದಲ್ಲಿ ನಿಂತಿದ್ದ ಸುಮೇರಾ ಬಾನು ಹಾಗೂ ಆಕೆಯ ಪುತ್ರಿಗೆ ಮಡಿದಿದ್ದು, ಇಬ್ಬರ ದೇಹಗಳು ಛಿದ್ರ-ಛಿದ್ರವಾಗಿ ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸುಮೇರಾ ಪತಿ ಹಾಗೂ ಇನ್ನೊರ್ವ ಪುತ್ರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆಯುತ್ತಿದ್ದಂತೆ ಚಿತ್ರತಂಡ ಸ್ಥಳದಿಂದ ಕಾಲ್ಕಿತ್ತಿದ್ದು, ಸ್ಥಳೀಯರು ಮೃತರ ಹಾಗೂ ಗಾಯಾಳುಗಳ ಸಹಾಯಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಮೂಲಗಳ ಮಾಹಿತಿ ಪ್ರಕಾರ ಚಿತ್ರತಂಡ ಶೂಟಿಂಗ್‍ಗೆ ಯಾವುದೇ ಅನುಮತಿ ಪಡೆದಿರಲಿಲ್ಲ ಎನ್ನಲಾಗಿದೆ.  ಬಾಗಲೂರು ಕೈಗಾರಿಕಾ ಪ್ರದೇಶದಂತ ಜನಸಂಚಾರವಿರುವ ಹಾಗೂ ಸೂಕ್ಷ್ಮ ಪ್ರದೇಶದಲ್ಲಿ ಚಿತ್ರೀಕರಣ ನಡೆಸಿದ್ದರೂಅನುಮತಿ ಪಡೆಯದಿರುವುದು ಚಿತ್ರತಂಡ ಬೇಜವ್ದಾರಿ ಎತ್ತಿತೋರಿಸುತ್ತಿದೆ. 
ಇನ್ನು ಈ ಘಟನೆಯಲ್ಲಿ ಚಿತ್ರತಂಡ ಹಲವು ಕಲಾವಿದರಿಗೂ ಗಾಯಗಳಾಗಿದೆ ಎನ್ನಲಾಗಿದೆ. ಸಧ್ಯ ರಣಂ ಚಿತ್ರತಂಡದ ವಿರುದ್ಧ ಬಾಗಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಚಿತ್ರದ ನಾಯಕ ಚೇತನ್ ಹಾಗೂ ನಿರ್ದೇಶ ವಿ.ಸಮುದ್ರನನ್ನು ವಶಕ್ಕೆ ಪಡೆದಿದ್ದಾರೆ. ಇತ್ತೀಚಿಗೆ ಚಿತ್ರೀಕರಣದ ಸಂದರ್ಭದಲ್ಲಿ ಈ ರೀತಿಯ ಘಟನೆಗಳು ಹೆಚ್ಚುತ್ತಲೇ ಇದ್ದು, ನೂರಾರು ಕಲಾವಿದರನ್ನು ಬಳಸಿ ಕೋಟ್ಯಾಂತರ ರೂಪಾಯಿ ಬಳಸಿ ಚಿತ್ರ ನಿರ್ಮಿಸುವ ಚಿತ್ರತಂಡಗಳು ಸಾವಿರಾರು ರೂಪಾಯಿ ಖರ್ಚು ಮಾಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಹಿಂಜರಿಯುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ. 
ಮಾಸ್ತಿಗುಡಿ ಚಿತ್ರದ ವೇಳೆಯೂ ಸೂಕ್ತ ಮುಂಜಾಗ್ರತಾ ಕ್ರಮಕೈಗೊಳ್ಳದ ಕಾರಣದಿಂದ ಇಬ್ಬರು ಖಳನಟರು ಪ್ರಾಣ ಕಳೆದುಕೊಂಡಿದ್ದರೂ ಚಿತ್ರರಂಗವೂಎಚ್ಚೆತ್ತುಕೊಂಡಿಲ್ಲ. ಇನ್ನು ಪೊಲೀಸರೂಕೂಡ ಶೂಟಿಂಗ್ ಸ್ಥಳಗಳಲ್ಲಿ ಪರಿಶೀಲನೆ ನಡೆಸಿ ಅಗತ್ಯ ಸೂಚನೆ ನೀಡುವ ಪರಿಪಾಟವನ್ನು ಬೆಳೆಸಿಕೊಂಡಿಲ್ಲ. ಹೀಗಾಗಿ ಯಾರದ್ದೋ ತಪ್ಪಿಗೆ ಅಮಾಯಕರು ಪ್ರಾಣಕಳೆದುಕೊಳ್ಳುತ್ತಲೇ ಇದ್ದಾರೆ. 
 ನಟ ಚಿರಂಜೀವಿ ಸರ್ಜಾ ಹಾಗೂ ಚೇತನ ಅಭಿನಯದ ರಣಂ ಚಿತ್ರದಲ್ಲಿ  ತಮಿಳು ನಟ ಶರತ್ ಕುಮಾರ್ ಪುತ್ರಿ  ವಿಜಯಲಕ್ಷ್ಮೀ ನಾಯಕಿಯಾಗಿ ನಟಿಸುತ್ತಿದ್ದು,  ಆ್ಯಕ್ಷನ್ ನಿರ್ದೇಶಕ ವಿಜಯನ್ ಮಾರ್ಗದರ್ಶನದಲ್ಲಿ ಈ ಸ್ಪೋಟ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿತ್ತು. 


ಸಂಬಂಧಿತ ಟ್ಯಾಗ್ಗಳು

#Sandalwood #Arjhun Sarjha #Ranam #Chetan


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ