ರೆಂಬೆಕೊಂಬೆ-ಎಲೆ ಹೂವುಗಳಿಲ್ಲದ ಶೃಂಗಾರದ ಹೊಂಗೆಮರ ಪಂಚತಂತ್ರ

 Panchatantra seems to bring headaches to cinematographers

30-03-2019

ಯೋಗರಾಜ ಭಟ್ಟರು ತಮ್ಮ ಸಾಹಿತ್ಯದ ಮೂಲಕ ಎಂಥವರನ್ನಾದರೂ ಮೋಡಿ ಮಾಡುತ್ತಾರೆ ಎಂಬುದೆಲ್ಲ ಈ ಹಳೆ ವಿಚಾರ ಎಂಬಂತಾಗಿದೆ. ಅದ್ಯಾಕೆ ಅಂದ್ರಾ ನಿನ್ನೆ ತೆರೆಗೆ ಬಂದಿರುವ ಭಟ್ಟರ ಬಹುನೀರಿಕ್ಷಿತ ಚಿತ್ರ ಪಂಚತಂತ್ರ ಅಂತಹದೊಂದು ಭ್ರಮನಿರಸನ ಮಾಡಿಸಿದೆ. 

 ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ ಎಂಬ ಶೃಂಗಾರದ ಹಾಡೊಂದನ್ನು ತೆರೆಗೆ ಬಿಟ್ಟು ಚಿತ್ರ ಅತ್ಯದ್ಭುತವಾಗಿದೆ. ಬೇಸಿಗೆಯಲ್ಲಿ ಪ್ರೇಮಿಗಳಿಗೊಂದು ಕೊಡುಗೆ ಎಂದೆಲ್ಲ ಹೇಳಿದ್ದ ಭಟ್ಟರು ಒಂದು ಅಚ್ಚುಕಟ್ಟಾದ ಕತೆ, ಡೈಲಾಗ್, ಲೋಕೆಶನ್, ಒಳ್ಳೆಯ ನಟ ಹೀಗೆ ಯಾವುದೊಂದನ್ನು ಒದಗಿಸುವಲ್ಲಿ ವಿಫಲವಾಗಿರೋದು ಮಾತ್ರ ಸತ್ಯ. 

ಒಂದು ಗ್ಯಾರೇಜ್ ಮತ್ತು ಶಾಪಿಂಗ್ ಕಾಂಪ್ಲೆಕ್ಸ್ ಭೂವಿವಾದದ ಎಳೆಯೊಂದನ್ನು ಆಧರಿಸಿ ಕತೆ ಹೇಳ ಹೊರಟಿರುವ ಭಟ್ಟರ ಪಂಚತಂತ್ರದಲ್ಲಿ  ಯಾವುದು ಸ್ಪಷ್ಟವಾಗಿಲ್ಲ. ಸುಮ್ನೆ ಉದುರುವ ಡೈಲಾಗ್‍ಗಳು, ಕನಿಷ್ಟ ಆಕರ್ಷಣೆಗೂ ಯೋಗ್ಯವಲ್ಲದ ನಾಯಕ, ಬಾಲಿವುಡ್, ಹಾಲಿವುಡ್ ಚಿತ್ರಗಳಂತೆ ಕಾಣ ಸಿಗುವ ಹಸಿಬಿಸಿ ದೃಶ್ಯಗಳು ನೋಡುಗರಿಗೆ ಬೋರ್ ಹುಟ್ಟಿಸುತ್ತದೆ. 
ಎಲ್ಲಿಂದಲೋ ಆರಂಭವಾಗಿ ಎಲ್ಲೋ ಅಂತ್ಯವಾಗುವ ಕತೆ ಅತ್ಯಂತ ಜಾಳು-ಜಾಳಾಗಿದ್ದು, ಸ್ಕ್ರಿನ್ ಪ್ಲೇ ದೇವರಿಗೆ ಪ್ರೀತಿ. ಒಂದಕ್ಕೊಂದು ಸಂಬಂಧವಿಲ್ಲದ ಪಾತ್ರಗಳು, ಅರ್ಥವಿಲ್ಲದ ಸೀನ್‍ಗಳನ್ನು ಜೋಡಿಸಿ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡಿದ್ದಾರೆ ಯೋಗರಾಜ್ ಭಟ್. 
ಮೊದಲಾರ್ದದ ಚಿತ್ರದಲ್ಲಿ ಒಂದಿಷ್ಟು ಹಸಿ-ಬಿಸಿ ದೃಶ್ಯ, ಒಂದು ಮನಸೆಳೆಯುವ ಪೋಲಿಯಾದ ಹಾಡು  ಬಿಟ್ಟರೇ ಬೇರೆನೂ ಇಲ್ಲ. ಇನ್ನು ದ್ವಿತೀಯಾರ್ದದಲ್ಲಿ ಗ್ಯಾರೇಜ್‍ನಿಂದ ಆರಂಭವಾದ ಸಿನಿಮಾ ಧೀಡಿರ ಕಾರ್ ರೇಸ್ ಅಂಗಳಕ್ಕೆ ಶಿಫ್ಟ್ ಆಗುತ್ತದೆ. ಮೈನವಿರೇಳಿಸುವ ಕಾರ್ ರೇಸ್‍ವೊಂದನ್ನು ಬಿಟ್ಟರೆ ದ್ವಿತೀಯಾರ್ದದಲ್ಲಿ ಬೇರೆನೂ ಇಲ್ಲ.  ಚಿತ್ರದ ಕೊನೆಯಲ್ಲಿ ಚಮಚದಷ್ಟು ಸೆಂಟಿಮೆಂಟ್ ಇಟ್ಟು ಪ್ರೇಕ್ಷಕರನ್ನು ಸಮಾಧಾನ ಮಾಡಿದಂತಿದೆ ಚಿತ್ರ. 
ಪಂಚತಂತ್ರ ಎಂಬ ಟೈಟಲ್‍ಗೂ ಭಟ್‍ರ ಈ ಕಲಸುಮೇಲೋಗರದ ಕತೆಗೂ ಏನು ಸಂಬಂಧ ಅನ್ನೋದನ್ನು ನೀವು ಹುಡುಕುತ್ತಾ ಇದ್ದರೇ, ನಾವು-ನೀವೆಲ್ಲ ಚಿಕ್ಕೋರಿದ್ದಾಗ ಕೇಳಿದ ಆಮೆ ಮತ್ತು ಮೊಲದ ಓಟದ ಸ್ಪರ್ಧೆಯ ಕತೆಯನ್ನು 25 ರ ಹರೆಯದ ಹುಡುಗರಿಗೂ , 60 ವೃದ್ಧರಿಗೂ ಲಿಂಕ್ ಮಾಡಿ ಕಾರ್ ರೇಸ್ ತುರುಕಿ ಸಿನಿಮಾ ಮಾಡಿದ್ದಾರೆ ಭಟ್ಟರು. 
ಚಿತ್ರದಲ್ಲಿ ವಿ.ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಶೃಂಗಾರದ ಹೊಂಗೆಮರ ಹೂಬಿಟ್ಟಿದೆ ಎಂಬ ಹಾಡು, ನಾಯಕಿ ಸೋನಲ್ ಮಂಥೆರೋ ಮುದ್ದಾದ ಅಭಿನಯ, ರಂಗಾಯಣ ರಘು ಅವರ ನಾಯಕನನ್ನು ಮೀರಿಸುವ ನಟನೆ ಬಿಟ್ಟರೇ ಉಳಿದೆಲ್ಲವನ್ನು ಕಷ್ಟಪಟ್ಟು ಸಹಿಸಿಕೊಳ್ಳಬೇಕು. ನಾಯಕ ವಿಹಾನ್ ಗೌಡ್‍ನಂತೂ ಪಿಚ್ಚರ ತುಂಬ ಸಹಿಸಿಕೊಳ್ಳುವುದೇ ಕಷ್ಟವಿದೆ. ಉಳಿದಂತೆ ಸಿನಿಮಾಟೋಗ್ರಾಫರ್ ಸುಜ್ಞಾನ ಅವರ ಕಲೆಗಾರಿಕೆಯಿಂದ ಕಾರ್ ರೇಸ್ ದೃಶ್ಯವೊಂದು ಸುಂದರವಾಗಿ ಮೂಡಿಬಂದಿದೆ. 
ಒಟ್ಟಿನಲ್ಲಿ ಭಟ್ಟರ ಪಂಚತಂತ್ರ ಚಿತ್ರ ನೋಡಿ ಮನಸ್ಸು ರಿಲ್ಯಾಕ್ಸ್ ಮಾಡಿಕೊಳ್ಳೋಣ ಅಂತ ಹೋದವರಿಗೆ ಇನ್ನೊಂದಿಷ್ಟು ದಿನ ಕನ್ನಡಾ ಸಿನಿಮಾ ನೋಡೋದೆ ಬೇಡ ಅನ್ನೋ ವೈರಾಗ್ಯ ಬಂದರೆ ಅಚ್ಚರಿಯಿಲ್ಲ.  ಯೋಗರಾಜ್ ಭಟ್ಟರ್‍ಂತಹ ಸದಭಿರುಚಿಯ ನಿರ್ದೇಶಕರು ಇಷ್ಟು ಬೋರಿಂಗ್ ಹಾಗೂ ಪ್ರೇಕ್ಷಕರು ಅಸಹನೆಗೊಳಗಾಗುವಂತೆ ಸಿನಿಮಾ ಮಾಡಿದ್ದು ಮಾತ್ರ ಕನ್ನಡದ ದುರ್ದೈವವೇ ಸರಿ. ಇನ್ನಾದರೂ ಭಟ್ಟರು ಎಚ್ಚೆತ್ತುಕೊಂಡು ಒಳ್ಳೆಯ ಚಿತ್ರಗಳನ್ನು ನೀಡುವಂತಾಗಲಿ. 


ಸಂಬಂಧಿತ ಟ್ಯಾಗ್ಗಳು

#Panchatantra #Yograj Bhat #Movie #Rangayan Raghu


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ