ಗುತ್ತಿಗೆ ಆಧಾರದ ಆಯುಷ್ ವೈದ್ಯರು ಆತಂಕಪಡುವ ಅಗತ್ಯವಿಲ್ಲ !

Kannada News

07-06-2017

ಬೆಂಗಳೂರು:- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಳೆದ 10 ವರ್ಷಗಳಿಗೂ ಅಧಿಕ ಸಮಯದಿಂದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಆಯುಷ್ ವೈದ್ಯರನ್ನು ನೇಮಕ ಮಾಡಿಕೊಳ್ಳುವ ಸಂಬಂಧ ವಿಶೇಷ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್ ಕುಮಾರ್ ವಿಧಾನ ಪರಿಷತ್ ನಲ್ಲಿ ಹೇಳಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಆಯುಷ್ ವೈದ್ಯರು ಆತಂಕಪಡುವ ಅಗತ್ಯವಿಲ್ಲ. ಕಷ್ಟ ಕಾಲದಲ್ಲಿ ಇಲಾಖೆಗೆ ಬಂದು ಸೇವೆ ನೀಡುತ್ತಿದ್ದಾರೆ. ಅವರನ್ನು ಬೀದಿಗೆ ಬರಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು. ನಿಯಮ 72 ರಡಿ ಬಿಜೆಪಿ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, 67 ಮಂದಿ ಆಯುಷ್ ವೈದ್ಯರು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕಾಗಿಯೇ ಅವರನ್ನು ಖಾಯಂ ಮಾಡುವ ಸಂಬಂಧ ವಿಶೇಷ ನೇಮಕಾತಿ ಪ್ರಕ್ರಿಯೆಗಳನ್ನು ರೂಪಿಸಲಾಗಿದೆ. ವಯೋಮಿತಿಯಲ್ಲಿ ಸಡಿಲಿಕೆ ನೀಡಿದ್ದು, ಒಂದು ವರ್ಷದ ಸೇವೆಗೆ 2 ಅಂಕಗಳಂತೆ ಗರಿಷ್ಠ 20 ಅಂಕಗಳನ್ನು ನೀಡಲು ನಿರ್ಧರಿಸಿದ್ದು, ನೇಮಕಾತಿಗಳಲ್ಲಿ ಇವುಗಳನ್ನು ಪರಿಗಣಿಸಲಾಗುವುದು ಎಂದು ಹೇಳಿದರು. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಆಯುಷ್ ವೈದ್ಯರ ಸೇವೆ ಒದಗಿಸಲಾಗುತ್ತಿದ್ದು, 661 ಆಯುಷ್ ಸರ್ಕಾರಿ ಚಿಕಿತ್ಸಾಲಯಗಳು ಹಾಗೂ 160 ಆಸ್ಪತ್ರೆಗಳಿವೆ. ಆಯುಷ್ ಇಲಾಖೆಯಲ್ಲಿ 866 ಹುದ್ದೆಗಳ ಪೈಕಿ 170 ಹುದ್ದೆಗಳು ಮಾತ್ರ ಖಾಲಿ ಇವೆ, ಖಾಲಿ ಇರುವ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಆಯುಷ್ ವೈದ್ಯರನ್ನು ಪರಿಗಣಿಸಲು ವಿಶೇಷ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ