ಪಕ್ಷಕ್ಕೆ ಬಂಡಾಯದ ಎಚ್ಚರಿಕೆ ನೀಡಿದ ಮಾಜಿ ಸಚಿವ ಕುಲಕರ್ಣಿ 

 Former Minister Kulkarni, who warned the rebellion of the party

29-03-2019

ಅದ್ಯಾಕೋ ರಾಜ್ಯದಲ್ಲಿ ಕಾಂಗ್ರೆಸ್ ಪಾಲಿಗೆ ತಲೆನೋವು ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಈಗಾಗಲೇ ಮೈತ್ರಿಯಲ್ಲಿ ಟಿಕೆಟ್ ಹಂಚಿಕೆ ಸವಾಲಿಗೆ ಉತ್ತರ ಕಂಡುಕೊಂಡ ಕಾಂಗ್ರೆಸ್ ಈಗ ಸ್ವಪಕ್ಷೀಯರ ಅಸಮಧಾನಗಳಿಂದ ಕಂಗಾಲಾಗಿದೆ. ತುಮಕೂರಿನಲ್ಲಿ ಮುದ್ದಹನುಮೇಗೌಡರ್ ಬಂಡಾಯವನ್ನು ತಣ್ಣಗಾಗಿಸುವ ಪ್ರಯತ್ನಗಳ ನಡೆಯುತ್ತಿರುವ ಬೆನ್ನಲ್ಲೇ ಧಾರವಾಡದಲ್ಲಿ  ಮಾಜಿ ಸಚಿವ ಕುಲಕರ್ಣಿ ಬಂಡಾಯ ಬಾವುಟ ಹಾರಿಸುವ ಮುನ್ಸೂಚನೆ ತೋರಿದ್ದಾರೆ. 

ಹೌದು ಮಾಜಿ ಸಚಿವ ವಿನಯ ಕುಲಕರ್ಣಿ ಲೋಕಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದು, ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಬಿಜೆಪಿಯ ಸಂಸದ ಪ್ರಹ್ಲಾದ್ ಜೋಷಿಯನ್ನು  ಸೋಲಿಸುವ ಉಮೇದಿಯಲ್ಲಿದ್ದಾರೆ. ಪಕ್ಷ ಟಿಕೆಟ್ ನೀಡಿದರೆ ಸರಿ ಇಲ್ಲದಿದ್ದರೆ ಸ್ವತಂತ್ರ ಸ್ಪರ್ಧೆ ಖಚಿತ ಎಂದು ಅವರು ಗುಡುಗಿದ್ದಾರೆ. 
ಸಿದ್ಧರಾಮಯ್ಯನವರ ಮಂತ್ರಿಮಂಡಲದಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವರಾಗಿದ್ದ  ವಿನಯ್ ಕುಲಕರ್ಣಿ, ಈ ಬಾರಿಲೋಕಸಭೆ ಮೆಟ್ಟಿಲೇರುವ ಕನಸಿನಲ್ಲಿದ್ದಾರೆ. ಇನ್ನು ಪಕ್ಷದಿಂದಲೂ ಇವರ ಹೆಸರೆ ಅಂತಿಮವಾಗಲಿದೆ ಎಂಬ ಮಾತು ಕೇಳಿಬರುತ್ತಿರುವಾಗಲೇ, ಅತ್ತ  ಮಾಜಿ ಸಂಸದ ಐ.ಜಿ.ಸನದಿ ಹೆಸರು ಕೇಳಿಬಂದಿರುವುದು ವಿನಯ್ ಕುಲಕರ್ಣಿ ಅಸಮಧಾನಕ್ಕೆ ಕಾರಣವಾಗಿದೆ. 
ಹೀಗಾಗಿ ಪಕ್ಷದ ವಿರುದ್ಧವೇ ತಿರುಗಿ ಬಿದ್ದಿರುವ ವಿನಯ್ ಕುಲಕರ್ಣಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಕೂಡ ಹರಿಹಾಯ್ದಿದ್ದಾರೆ. ಧಾರವಾಡ ಕ್ಷೇತ್ರದಲ್ಲಿ ಪ್ರಬಲ ಲಿಂಗಾಯತ ಮುಖಂಡ ಯಾರು ಎಂದು ಹೈಕಮಾಂಡ್ ಕೇಳಿದರೆ ಕೆಪಿಸಿಸಿ ಅಧ್ಯಕ್ಷರು ಸದಾನಂದ ಡಂಗನವರ್ ಹೆಸರನ್ನು ಕಳುಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಇನ್ನೊಂದೆಡೆ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಲಿ ಸಂಸದ ಪ್ರಹ್ಲಾದ್ ಜೋಷಿ ಜೊತೆ ಒಳಒಪ್ಪಂದ ಮಾಡಿಕೊಂಡು ದುರ್ಬಲ ಕ್ಯಾಂಡಿಡೇಟ್ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿದೆ. 
ಆದರೆ ವಿನಯ್ ಕುಲಕರ್ಣಿ ಮಾತ್ರ ಟಿಕೆಟ್ ಗಾಗಿ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಜ್ಜಾದಂತಿದ್ದು ಟಿಕೆಟ್ ನೀಡದಿದ್ದರೇ ವಿನಯ್ ಪಕ್ಷೇತರರಾಗಿ ಸ್ಪರ್ಧಿಸೋದು ಬಹುತೇಕ ಖಚಿತವಾಗಿದೆ. ಹೀಗಾಗಿ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿದ್ದು, ವಿನಯ್ ಕುಲಕರ್ಣಿಗೆ ಟಿಕೆಟ್ ನೀಡಿದರೂ ಕಷ್ಟ ನೀಡದಿದ್ದರೂ ಕಷ್ಟ ಎಂಬಂತ ಸ್ಥಿತಿ ನಿರ್ಮಾಣವಾಗಿದೆ. 
 


ಸಂಬಂಧಿತ ಟ್ಯಾಗ್ಗಳು

#Loksabha 2019 #Vinaya Kulkarni #Congress #Ticket


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ