ಐಟಿ ದಾಳಿಗೆ ಕಾಂಗ್ರೆಸ್ ಖಂಡನೆ

 Congress condemns IT attack

28-03-2019

ರಾಜ್ಯದ ವಿವಿಧೆಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ಮನೆಗಳ ಮೇಲೆ ನಡೆದ ಐಟಿ ದಾಳಿಯನ್ನು ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.

ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ಇಂದು ಬೆಳಗ್ಗೆಯಿಂದ ಆದಾಯ ತೆರಿಗೆ ಅಧಿಕಾರಿಗಳು ನಡೆಸಿರುವ ದಾಳಿಯನ್ನು ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದು ಇದು ಚುನಾವಣೆ ಸಂದರ್ಭದ ಬಿಜೆಪಿಯವರ ಗಿಮಿಕ್ ಎಂದು ಹೇಳಿದ್ದಾರೆ.

ಸದಾಶಿವನಗರದಲ್ಲಿ ಡಿಸಿಎಂ ಪರಮೇಶ್ವರ್ ಮಾತನಾಡಿ, ಇದು ರಾಜಕೀಯ ಪ್ರೇರಿತ ದಾಳಿ. ಬಿಜೆಪಿಯ ಎಷ್ಟು ನಾಯಕರ ಮೇಲೆ ಇದೇ ರೀತಿ ದಾಳಿ ನಡೆಯುತ್ತಿದೆ ?. ಮಮತಾ ಬ್ಯಾನರ್ಜಿ ರೀತಿ ನಾವು ಮುಂದಿನ ಕ್ರಮ ತೆಗೆದುಕೊಳ್ಳಬೇಕಾಗುತ್ತೆ ಎಂದಿದ್ದಾರೆ.

ಪ್ರತಿಪಕ್ಷವನ್ನು ಕೊಲ್ಲುವ ಕೆಲಸ

ಮಲ್ಲೇಶ್ವರಂ ಶಾಸಕರ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳನ್ನ ಕೊಲ್ಲುವ ಕೆಲಸ ನಡೆಯುತ್ತಿದೆ. ಮೋದಿ ವಿರುದ್ಧ ಮಾತಾಡಿದ್ರೆ ಮಾಧ್ಯಮದವರ ಮೇಲೂ ದಾಳಿ ಮಾಡ್ತಾರೆ. ನಾವು ಸುಮ್ಮನಿರೊಲ್ಲ. ಪ್ರತಿಭಟನೆ ಮಾಡ್ತೇವೆ. ಮೋದಿ ವಿರುದ್ಧ ಮಾತನಾಡಿದವರ ಹೆದರಿಸುವ ಕೆಲಸ ನಡೆಯುತ್ತಿದೆ. ಸಚಿವರ ಮೇಲೆ ದಾಳಿ ಮಾಡಿ ಈಗ ಇಲ್ಲಸಲ್ಲದ ಮಾಹಿತಿ ಸೋರಿಕೆ ಮಾಡ್ತಾರೆ ಎಂದಿದ್ದಾರೆ.

ರಾಜಕೀಯ ಪ್ರೇರಿತ ದಾಳಿ

ಶಾಸಕ ಶಿವಲಿಂಗೇಗೌಡ ಮಾತನಾಡಿ, ಐಟಿ ದಾಳಿ ಜೆಡಿಎಸ್ ನಾಯಕರ ಮೇಲೆ ಮಾತ್ರ ಮಾಡಿದ್ದಾರೆ. ಇದು ರಾಜಕೀಯ ಪ್ರೇರಿತ. ಬಿಜೆಪಿ ನಾಯಕರ ಮೇಲೆ , ಕಾಂಗ್ರೆಸ್ ನಾಯಕರ ಮೇಲೆ ದಾಳಿ ಆಗಿದ್ರೆ. ಇದು ಸಾಮಾನ್ಯವಾಗ್ತಿತ್ತು. ಚುನಾವಣೆ ಸಮಯದಲ್ಲೇ ದಾಳಿ ಆಗಬೇಕಾ? ನೂರಕ್ಕೆ ನೂರು ಇದು ರಾಜಕೀಯ ಪ್ರೇರಿತ ಎಂದಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಗೃಹ ಸಚಿವ ಎಂ ಬಿ ಪಾಟೀಲ್ ಮಾತನಾಡಿ, ಐಟಿ ಇಲಾಖೆಗೆ ದಾಳಿ ಮಾಡಲು ಸ್ವತಂತ್ರವಿದೆ. ನಿಷ್ಪಕ್ಷಪಾತವಾಗಿ ಎಲ್ಲರ ಮೇಲೂ ದಾಳಿ ನಡೆಸಬೇಕಿತ್ತು. ಐಟಿ ರೇಡ್ ಗೆ ಸಮಯವಿದೆ, ಈಗ ಪ್ರಚಾರದ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರದ ಸಚಿವರ ಮೇಲೆ, ಶಾಸಕರ ಮೇಲೆ, ಅವರ ಕುಟುಂಬದ ಮೇಲೆ ದಾಳಿ ಮಾಡಿರೋದು ರಾಜಕೀಯ ಪ್ರೇರಿತ. ಪ್ರಧಾನಿ ಮೋದಿಯವರು ಐಟಿಯನ್ನ ದುರಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿದರು.

ಯಾವುದೋ ಮೂಲಗಳಿಂದ ಸಿ.ಎಂ ಮತ್ತು ಡಿ.ಕೆ.ಶಿ ಗೆ ಮಾಹಿತಿ ಸಿಕ್ಕಿರುತ್ತೆ. ಸಿಎಂಗೆ ಇಂಟಲಿಜೆನ್ಸ್ ಅಥವಾ ಬಿಜೆಪಿ ಸ್ನೇಹಿತರು ಕೊಟ್ಟಿರಬಹುದು. ಐಟಿ ಇಲಾಖೆ ಎದುರು ಪ್ರತಿಭಟನೆ ತೀರ್ಮಾನ ಹಿನ್ನೆಲೆ, ಪಕ್ಷದ ನಿರ್ಣಯಕ್ಕೆ ನಾವೆಲ್ಲ ಬದ್ಧ ಎಂದಿದ್ದಾರೆ.

ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗಿದೆ

ಇನ್ನು ಪ್ರಕಾಶ್ ರಾಠೋಡ್ ಮಾತನಾಡಿ, ರಾಜ್ಯದಲ್ಲಿ ಐಟಿ ಅಧಿಕಾರಿಗಳ ದಾಳಿ ಖಂಡಿಸುತ್ತೇನೆ. ನಮ್ಮ ನಾಯಕರು, ಅಧಿಕಾರಿಗಳನ್ನ ಟಾರ್ಗೆಟ್ ಮಾಡಿದ್ದಾರೆ. ಅವರನ್ನ ಗುರಿಯಾಗಿಸಿಕೊಂಡು ದಾಳಿ ನಡೆಸ್ತಿದ್ದಾರೆ. ಯಾವ ಬಿಜೆಪಿ ನಾಯಕರ ಮೇಲೂ ದಾಳಿ ಮಾಡ್ತಿಲ್ಲವೇಕೆ ?. ಯಡಿಯೂರಪ್ಪ 1800 ಕೋಟಿ ಕಪ್ಪ ಕೊಟ್ಟಿದ್ದಾರೆ. ನಾವು ದಾಖಲೆ ಸಮೇತ ಬಿಡುಗಡೆ ಮಾಡಿದ್ದೆವು. ನೀವು ಯಾಕೆ ಕ್ರಮಕೈಗೊಳ್ತಿಲ್ಲ. ಐಟಿ ಕೇಂದ್ರದ ಕೈಗೊಂಬೆಯಾಗಿದೆ. ಚುನಾವಣೆಯಲ್ಲಿ ನಿಮ್ಮ ಧೈರ್ಯ ತೋರಿಸಿ ಎಂದು ಸವಾಲು ಹಾಕಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#Karnataka #Congress #It Raid # condemns


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ