ಕಮಲ ತೊರೆದು ಕೈಹಿಡಿದ ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ 

 Hassan BJP District President has left the lotus

28-03-2019

ಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದಲೂ ರಾಜ್ಯದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಅದರಲ್ಲೂ ವಿಶೇಷವಾಗಿ ಮಾಜಿ ಪ್ರಧಾನಿ ದೇವೆಗೌಡರ್ ತವರು ಹಾಸನದಲ್ಲಿ ಲೋಕಸಭಾ ಚುನಾವಣೆ ರಾಜಕೀಯದ ದೃಷ್ಟಿಯಿಂದ ಸಾಕಷ್ಟು ಬದಲಾವಣೆಗಳಿಗೆ ಕಾರಣವಾಗಿದೆ. ಹೌದು ಕಾಂಗ್ರೆಸ್‍ನ ಸಿದ್ಧರಾಮಯ್ಯ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಎ.ಮಂಜು ಕೈತೊರೆದು ಕಮಲ ಮುಡಿದಿದ್ದರೇ, ಈ ಬಿಜೆಪಿಯ ಜಿಲ್ಲಾಧ್ಯಕ್ಷ ಯೋಗಾ ರಮೇಶ್ ಕಾಂಗ್ರೆಸ್ ಪಾಳಯದ ಜೊತೆ ಕೈ ಮಿಲಾಯಿಸಿದ್ದಾರೆ. 

ಹೌದು ಹಾಸನದ ರಾಜಕೀಯದ ರಂಗು ಒಂದೇ ತಿಂಗಳಿನಲ್ಲಿ ಹಿಂದೆಂದೂ ಕಾಣದಷ್ಟು ಬದಲಾಗಿದೆ. ಮೈತ್ರಿಪಕ್ಷದ ಅಭ್ಯರ್ಥಿಯಾಗಿ  ಪ್ರಜ್ವಲ್ ರೇವಣ್ಣ ಹಾಸನದಲ್ಲಿ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿಯೊಂದಿಗೆ ಆರಂಭವಾದ ಈ ರಾಜಕೀಯ ಪಲ್ಲಟಗಳು ಈಗ ಒಂದು ಸ್ಪಷ್ಟ ರೂಪಕ್ಕೆ ಬಂದಂತಿದೆ. ಪ್ರಜ್ವಲ್ ರೇವಣ್ಣ ಲೋಕಸಭಾ ಚುನಾವಣೆಗೆ ಕಣಕ್ಕಿಳಿಯುತ್ತಿದ್ದಂತೆ ಅಸಮಧಾನಗೊಂಡ ಕಾಂಗ್ರೆಸ್‍ನ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಎ.ಮಂಜು ಇದನ್ನು ತೀವ್ರವಾಗಿ ವಿರೋಧಿಸಿದರು. ಅಷ್ಟೇ ಅಲ್ಲ ಪಕ್ಷ ತೊರೆಯುವ ಬೆದರಿಕೆಯನ್ನು ಒಡ್ಡಿದ್ದರು. 
ಆದರೆ ಇದ್ಯಾವುದು ಫಲಕಾರಿಯಾಗದೇ ಪ್ರಜ್ವಲ್ ಕಣಕ್ಕಿಳಿಯುತ್ತಿದ್ದಂತೆ ಬಿಜೆಪಿ ಸೇರಿದ ಸಚಿವ ಎ. ಮಂಜು ಎಲ್ಲ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿ ಬಿಜೆಪಿಯಿಂದ ಲೋಕಸಭಾ ಟಿಕೇಟ್ ಪಡೆದು ಚುನಾವಣಾ ಅಖಾಡಕ್ಕೂ ಧುಮುಕಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. 
ಇನ್ನು ಮಾಜಿ ಸಚಿವ ಎ.ಮಂಜು ಆಗಮನದಿಂದ ಬಿಜೆಪಿಯಲ್ಲೂ ಅಸಮಧಾನಗಳು ಭುಗಿಲೆದ್ದವು. ಮಾಜಿ ಸಚಿವ ಎ. ಮಂಜು ಕಾಂಗ್ರೆಸ್ ಪಾಲಿಗೆ ಹಳಸಿದ ಅನ್ನವಿದ್ದಂತೆ ಎಂದ ಬಿಜೆಪಿ ಜಿಲ್ಲಾಧ್ಯಕ್ಷ ಯೋಗಾ ರಮೇಶ್ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿಕೊಳ್ಳುವ ಸಾಧ್ಯತೆಯೇ ಇಲ್ಲ ಎಂದಿದ್ದರು. ಆದರೆ ತಮ್ಮ ಕೈಮೀರಿದ ಪರಿಸ್ಥಿತಿಯಿಂದ ನೊಂದ ಯೋಗಾ ರಮೇಶ್ ಈಗ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. 
ಕೆಲದಿನಗಳ ಹಿಂದೆಯಷ್ಟೇ, ಯೋಗಾ ರಮೇಶ್ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಇಂದು ಅಧಿಕೃತವಾಗಿ ಅವರನ್ನು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸಿದ್ಧರಾಮಯ್ಯ ಕಾಂಗ್ರೆಸ್‍ಗೆ ಬರಮಾಡಿಕೊಂಡಿದ್ದಾರೆ. ಒಂದು ರೀತಿ ಹಾಸನದ ರಾಜಕೀಯ ಕಲಸು ಮೇಲೋಗರವಾದಂತಾಗಿದೆ. ಬಿಜೆಪಿ,ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಎಕ್ಸಚೆಂಜ್ ಪೊಲಿಟಿಕ್ಸ್ ಲೋಕಸಭಾ ಚುನಾವಣೆಯ ಮೇಲೆ ಯಾವ ಪರಿಣಾಮ ಬೀರಲಿದೆ ಕಾದು ನೋಡಬೇಕಿದೆ. 


ಸಂಬಂಧಿತ ಟ್ಯಾಗ್ಗಳು

#Loksabha 2019 #Yoga Ramesh #Hasan #Congress


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ