ಫೋನ್ ಕದ್ದಾಲಿಕೆ: ಸರ್ಕಾರದ ಆಡಳಿತ ನಿಷ್ಕ್ರಿಯತೆಯನ್ನು ತೋರಿಸುತ್ತದೆ !

Kannada News

07-06-2017

ಬೆಂಗಳೂರು:- ಪೊಲೀಸ್ ಅಧಿಕಾರಿಯ ಫೋನ್ ಕದ್ದಾಲಿಕೆ ಪ್ರಕರಣ ವಿಧಾನ ಸಭೆಯಲ್ಲಿಂದು ಪ್ರತಿಧ್ವನಿಸಿತು. ಶೂನ್ಯ ವೇಳೆಯಲ್ಲಿ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಪೊಲೀಸ್ ಅಧಿಕಾರಿ ಚರಣ್ ರೆಡ್ಡಿ ಅವರ ಫೋನ್ ಕದ್ದಾಲಿಸಿರುವ ಪ್ರಕರಣವನ್ನು ಪ್ರಸ್ತಾಪಿಸಿ ಒಬ್ಬ ಹಿರಿಯ ಪೊಲೀಸ್ ಅಧಿಕಾರಿಯ ಫೋನ್ ಕದ್ದಾಲಿಕೆ ಮಾಡಿ ಸಂಭಾಷಣೆಯನ್ನು ಸೋರಿಕೆ ಮಾಡಲಾಗಿದೆ. ಇದೊಂದು ಗಂಭೀರ ಪ್ರಕರಣ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು. ಪೊಲೀಸ್ ಮಹಾನಿರೀಕ್ಷಕ ದರ್ಜೆಯ ಅಧಿಕಾರಿಯಾದ ಚರಣ್ ರೆಡ್ಡಿ ಹಾಗೂ ರಕ್ಷಣಾ ವೇದಿಕೆಯ ಕಾರ್ಯಕರ್ತರ ನಡುವಿನ ಫೋನ್ ಸಂಭಾಷಣೆಯನ್ನು ಡಿಸಿಪಿ ಮಟ್ಟದ ಅಧಿಕಾರಿಯೊಬ್ಬರು ಕದ್ದಾಲಿಕೆ ಮಾಡಿರುವುದನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು. ಈ ಫೋನ್ ಸಂಭಾಷಣೆ ಸೋರಿಕೆಯಾಗಿರುವ ಬಗ್ಗೆ ಈ ಹಿಂದೆಯೇ ಚರಣ್ ರೆಡ್ಡಿಯವರು ಹಿಂದಿನ ಡಿಜಿಪಿ ಓಂಪ್ರಕಾಶ್ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರೂ ಯಾವುದೇ ತನಿಖೆಯಾಗಿರಲಿಲ್ಲ. ಈಗಿನ ಡಿಜಿಪಿ ಆರ್.ಕೆ. ದತ್ತಾ ಅವರು ತನಿಖೆಗೆ ಆದೇಶಿಸಿದ್ದಾರೆ ಎಂದರು. ಈ ಫೋನ್ ಕದ್ದಾಲಿಕೆ ಪ್ರಕರಣ ಸರ್ಕಾರದ ಆಡಳಿತ ನಿಷ್ಕ್ರಿಯವಾಗಿರುವುದನ್ನು ತೋರಿಸುತ್ತದೆ. ಅಷ್ಟೇ ಅಲ್ಲದೆ ಅಧಿಕಾರಿ ವಲಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅನುಮತಿ ಪಡೆಯದೆ ಫೋನ್ ಕದ್ದಾಲಿಸುವುದು ಅಪರಾಧವಾಗುತ್ತದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು. ಈ ಹಿಂದೆ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಿಲುಕಿ ಅಧಿಕಾರವನ್ನು ಬಿಡಬೇಕಾದ ಪರಿಸ್ಥಿತಿ ಬಂದಿತ್ತು ಎಂಬುದನ್ನು ಉದಾಹರಿಸಿದರು. ಈ ವಿಚಾರದ ಬಗ್ಗೆ ಗೃಹ ಸಚಿವರು ಹೇಳಿಕೆ ನೀಡಲಿದ್ದಾರೆ. ವಿಪಕ್ಷ ನಾಯಕರು ಹೇಳುವಂತೆ ಆಡಳಿತ ವ್ಯವಸ್ಥೆ ಕುಸಿದಿಲ್ಲ. ಎಲ್ಲವೂ ಸರಿಯಿದೆ ಎಂದು ಸಚಿವ ಆರ್.ವಿ. ದೇಶಪಾಂಡೆ ಹೇಳಿದರು, ಗೃಹ ಸಚಿವರು ಸದನದಲ್ಲಿ ಇಲ್ಲ, ಅವರು ಬಂದ ನಂತರ ಈ ಪ್ರಸ್ತಾಪಕ್ಕೆ ಉತ್ತರ ನೀಡುತ್ತಾರೆ ಎಂದರು.

 


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ