ಸುಮಲತಾಗೆ ಹೆದರಿದ್ರಾ ಸಿಎಂ ಕುಮಾರಸ್ವಾಮಿ? 

Sumalatha Scares Kumaraswamy ?

28-03-2019

ಚುನಾವಣೆ ಅನ್ನೋದು ಯಾರನ್ನಾದ್ರೂ ಹಿರೋ ಮತ್ತು ಝೀರೋ ಮಾಡುವ ಶಕ್ತಿ ಹೊಂದಿದೆ ಅನ್ನೋ ಮಾತಿದೆ. ಕರ್ನಾಟಕದ ಕುಮಾರಸ್ವಾಮಿ ವಿಚಾರದಲ್ಲಿ ಇದು ನಿಜವಾಗಿದೆ. ಹೌದು ಪುತ್ರ ವಾತ್ಸಲ್ಯದಲ್ಲಿ ಕಣ್ಣು ಕುರುಡಾದಂತೆ ವರ್ತಿಸುತ್ತಿರುವ ಕುಮಾರಸ್ವಾಮಿ ಸುಮಲತಾ ಅವರ ಸ್ಪರ್ಧೆಯಿಂದ ಮಗನಿಗೆ ಸೋಲುಂಟಾಗಬಹುದೆಂದು ಅತಿಯಾಗಿ ಹೆದರಿದಂತಿದ್ದು, ಮನಬಂದಂತೆ ಮಾತನಾಡುವ ಮೂಲಕ ಹಾಗೂ ಮಂಡ್ಯದ ಮೇಲೆ ಅತಿಯಾಗಿ ಗಮನ ಕೇಂದ್ರಿಕರಿಸುವ ಮೂಲಕ ತಮ್ಮ ಇತರ ಜವಾಬ್ದಾರಿ ಹೊಣೆಗಾರಿಕೆ ಮರೆತಿದ್ದಾರೆ. 

ಇನ್ನು ಚುನಾವಣೆ ಘೋಷಣೆಯಾದಾಗ ಸಿಎಂ ಕುಮಾರಸ್ವಾಮಿ ನಮಗೇನು ಚುನಾವಣೆ ಹೊಸದಲ್ಲ. ನನ್ನ ಮಗನನ್ನು ಸುಲಭವಾಗಿ ಗೆಲ್ಲಿಸಿಕೊಂಡು ಬರುತ್ತೇನೆ ಎಂಬಂರ್ಥದಲ್ಲಿ ಮಾತನಾಡಿದ್ದರು. ಆದರೆ ಸುಮಲತಾ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಹಿಂದೆಂದೂ ಕಂಡರಿಯದ ಜನಬೆಂಬಲ ಪಡೆಯುತ್ತಿದ್ದಂತೆ  ಕುಮಾರಸ್ವಾಮಿ ವರಸೆಯೇ ಬದಲಾಗಿ ಹೋಗಿದೆ. 
ಮೊದಲು ಸುಲಭವಾಗಿ ಮಗನನ್ನು ಗೆಲ್ಲಿಸಿಕೊಳ್ಳುವ ವಿಶ್ವಾಸದಲ್ಲಿದ್ದ ಕುಮಾರಸ್ವಾಮಿಗೆ ಈಗ ಅದ್ಯಾಕೋ ಎಲ್ಲೆಡೆಯೂ  ಸೋಲಿನ ಮುನ್ಸೂಚನೆ ಲಭ್ಯವಾದಂತಿದ್ದು, ಹೀಗಾಗಿ ಕಂಡ-ಕಂಡ ದೇವರ ಮೊರೆ ಹೋಗಿ ಮಗನನ್ನು ಗೆಲ್ಲಿಸುವಂತೆ ಪ್ರಾರ್ಥಿಸುತ್ತಿದ್ದಾರೆ. 
ಅಷ್ಟೇ ಅಲ್ಲ ಅಪಾರವಾದ ರಾಜಕೀಯ ಅನುಭವ ಹೊಂದಿರುವ  ಕುಮಾರಸ್ವಾಮಿಯವರು ತಮ್ಮ ಘನತೆಗೆ ತಕ್ಕಂತೆ ವರ್ತಿಸುವುದನ್ನು ಮರೆತಿದ್ದು, ಇದೆ ಮೊದಲ ಬಾರಿಗೆ ಸಾರ್ವಜನಿಕ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ವಿರುದ್ಧ ಕೀಳುಅಭಿರುಚಿಯ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮ ವ್ಯಕ್ತಿತ್ವವನ್ನು ಪ್ರದರ್ಶಿಸುತ್ತಿದ್ದಾರೆ. 

ಕೇವಲ ಸುಮಲತಾ ಬಗ್ಗೆ ಮಾತ್ರವಲ್ಲದೇ  ಸುಮಲತಾ ಬೆಂಬಲಕ್ಕೆ ಬಂದ ಸ್ಟಾರ್‍ಗಳಾದ ದರ್ಶನ್, ಯಶ್ ವಿರುದ್ಧವೂ ಲಘುವಾಗಿ ಮಾತನಾಡಲಾರಂಭಿಸಿದ್ದಾರೆ. ಇದೆಲ್ಲವೂ ಅವರು ಸುಮಲತಾ ರಾಜಕೀಯ ಪ್ರವೇಶದಿಂದ ಆತಂಕಕ್ಕೆ ಒಳಗಾಗಿದ್ದಾರೆ ಎಂಬುದಕ್ಕೆ ಸಾಕ್ಷಿ ಒದಗಿಸುತ್ತಿದೆ ಅಂತಾರೆ ಸಾರ್ವಜನಿಕರು. 
ಚುನಾವಣೆ ಸಂದರ್ಭದಲ್ಲಿ ಪಕ್ಷ, ಸಿದ್ಧಾಂತ,ತತ್ವ , ಅಭಿವೃದ್ಧಿ ಕಾರ್ಯಕ್ರಮಗಳ ಆಧಾರದ ಮೇಲೆ ಮತ ಕೇಳಬೇಕಾಗಿರುವ ಮುಖ್ಯಮಂತ್ರಿಗಳು, ಕರೆಂಟ್ ಕಟ್ ಮಾಡಿಸುವುದು, ಟೆಲಿಪೋನ್ ಕದ್ದಾಲಿಕೆ, ಗೂಡಾಚಾರಿಕೆ, ವೈಯಕ್ತಿಕ ಟೀಕೆಯಂತಹ ಅಂಶಗಳಿಂದ ಸುಮಲತಾರನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. 

ಮಾಜಿ ಪ್ರಧಾನಿ ದೇವೆಗೌಡರ್ ಮೂರನೇ ತಲೆಮಾರಿನ ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ಕಣಕ್ಕಿಳಿಯುವುದಕ್ಕೆ ಜೆಡಿಎಸ್‍ನ ಕಾರ್ಯಕರ್ತರು ಹಾಗೂ ನಾಯಕರ ಕಡುವಾದ ವಿರೋದವಿತ್ತು. ಆದರೆ ಇದನ್ನೆಲ್ಲ ಸುಧಾರಿಸಿ, ಎಲ್ಲರನ್ನು ಸಮಾಧಾನಿಸಿ ಸಿಎಂ ಕುಮಾರಸ್ವಾಮಿ ಹಾಗೂ ರೇವಣ್ಣ ತಮ್ಮ ಮಕ್ಕಳಿಗೆ ಟಿಕೇಟ್ ಪಡೆದುಕೊಂಡಿದ್ದಾರೆ. ಹೀಗಾಗಿ ಒಂದೊಮ್ಮೆ ನಿಖಿಲ್ ಮತ್ತು ಪ್ರಜ್ವಲ್ ಗೆಲ್ಲದೇ ಇದ್ದಲ್ಲಿ ಕಾರ್ಯಕರ್ತರ ಅಸಮಧಾನವನ್ನು ಎದುರಿಸಬೇಕಾಗಿರೋದರಿಂದ ಕುಮಾರಸ್ವಾಮಿ ಈ ಚುನಾವಣೆಯನ್ನು ತಮ್ಮ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. 

ಹೀಗಾಗಿ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ತಮ್ಮದೇ ಪಕ್ಷದ ಶಾಸಕರನ್ನು, ಸಚಿವರನ್ನು, ಸಂಸದರನ್ನು ಹೊಂದಿದ್ದರೂ ಗೆಲುವು ಸಿಗುತ್ತೋ ಇಲ್ವೋ ಅನ್ನೋ ಲೆಕ್ಕಾಚಾರದಲ್ಲೇ ಕಂಗಾಲಾಗಿದ್ದು, ಸುಮಲತಾ ಜನಪ್ರಿಯತೆ ಕಂಡು ಉರಿದುಬೀಳುತ್ತಿದ್ದಾರೆ ಅಂತಿದ್ದಾರೆ ಮಂಡ್ಯ ಜನರು. 


ಸಂಬಂಧಿತ ಟ್ಯಾಗ್ಗಳು

#Loksabha 2019 #Sumalatha #Kumaraswamy #Mandya


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ