ಐಟಿ ದಾಳಿಗೆ ಕಾರಣವೇನು ಗೊತ್ತೆ? 

 What caused the IT attack?

28-03-2019

ಲೋಕಸಭೆ ಚುನಾವಣೆ ಎದುರಿನಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಅತ್ಯಂತ ಕುತೂಹಲ ಮೂಡಿಸಿರೋದು ಮಾಜಿ ದೇವೆಗೌಡರು ಹಾಗೂ ಅವರ ಮೊಮ್ಮಕ್ಕಳು ಕಣಕ್ಕಿಳಿದಿರುವ ತುಮಕೂರು,ಹಾಸನ ಹಾಗೂ ಮಂಡ್ಯ ಕ್ಷೇತ್ರ. ಈ ಕ್ಷೇತ್ರಗಳನ್ನೇ ಗುರಿಯಾಗಿಸಿಕೊಂಡು ಗುರುವಾರ ನಡೆದಿರುವ ಜೆಡಿಎಸ್ ಮುಖಂಡರು, ಸಿಎಂ ಆಪ್ತರ ಮೇಲಿನ ದಾಳಿಗಳು ಹಲವು ಅನುಮಾನ ಸೃಷ್ಟಿಸಿವೆ. ಹೌದು ಮೂಲಗಳ ಪ್ರಕಾರ ಈ ಕ್ಷೇತ್ರಗಳ ಗೆಲುವಿಗೆ ಜೆಡಿಎಸ್ ಹಣದ ಹೊಳೆಯನ್ನೇ ಹರಿಸಲು ಮುಂದಾಗಿದ್ದು, ಇದೇ ಕಾರಣಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ. 

ಹೌದು ರಾಜ್ಯದಲ್ಲಿ ಲೋಕಸಭೆ ಚುನಾವಣೆ  ತುಮಕೂರು,ಹಾಸನ ಹಾಗೂ ಮಂಡ್ಯ ಕ್ಷೇತ್ರದಲ್ಲಿ ಮಾತ್ರ ನಡೆಯುತ್ತಿದೆ ಎನ್ನುವಷ್ಟರ ಮಟ್ಟಿಗೆ ಈಕ್ಷೇತ್ರಗಳು ಹವಾ ಸೃಷ್ಟಿಸಿದ್ದವು. ಇದಕ್ಕೆ ಕಾರಣ ಖುದ್ದು ದೇವೆಗೌಡರು ಹಾಗೂ ಅವರ ಇಬ್ಬರು ಮೊಮ್ಮಕ್ಕಳ ಸ್ಪರ್ಧೆ. ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದ ಮಂಡ್ಯ ಕ್ಷೇತ್ರವಂತೂ ದೇಶದಲ್ಲೇ ಹೈವೋಲ್ಟೇಜ್ ಕ್ಷೇತ್ರವಾಗಿ ಬದಲಾಗಿದ್ದು, ಸರ್ಕಾರ ಮತ್ತು ಹೆಣ್ಣುಮಗಳೊಬ್ಬಳ ನಡುವಿನ ಯುದ್ಧ ಎಂದೇ ಬಿಂಬಿತವಾಗಲಾರಂಭಿಸಿತು. 
ಈ ರಾಜಕೀಯ ಸ್ಪರ್ಧೆಗಳಿಂದ ಹೆದರಿದ ದೇವೆಗೌಡರ ಕುಟುಂಬ ಹಾಗೂ ಜೆಡಿಎಸ್ ಈ ಮೂರು ಕ್ಷೇತ್ರಗಳ ಗೆಲುವಿಗಾಗಿ ಹಣದ ಹೊಳೆ ಹರಿಸಲು ಮುಂದಾಗಿತ್ತು ಎನ್ನಲಾಗಿದೆ. ನಿಖಿಲ್ ಕುಮಾರಸ್ವಾಮಿ ನಾಮಿನೇಷನ್ ಫೈಲ್ ಮಾಡುವ ದಿನದಿಂದ ಆರಂಭಿಸಿ ಪ್ರತಿಯೊಂದು ಸಂದರ್ಭದಲ್ಲಿಯೂ ಸಾಕಷ್ಟು ಹಣ ಖರ್ಚುಮಾಡಿದೆ. ಇದಕ್ಕಾಗಿ ಹಾಸನ, ಮಂಡ್ಯ,ತುಮಕೂರು ಭಾಗದಲ್ಲಿ ಜೆಡಿಎಸ್ ಅಪಾರ ಪ್ರಮಾಣದಲ್ಲಿ ಹಣ ಸಾಗಾಟ ನಡೆಸಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಐಟಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. 
ಜೆಡಿಎಸ್‍ನ ಸಿ.ಎಸ್.ಪುಟ್ಟರಾಜು, ಅವರ ಸಂಬಂಧಿಕರು, ಎಂಎಲ್‍ಸಿ ಫಾರೂಕ್ ಅಬ್ದುಲ್ಲಾ, ಹಾಸನ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಮಂಜುನಾಥ ಹೀಗೆ ಹಲವರು ಈ ಅಕ್ರಮ ಹಣ ಸಾಗಾಟ ಹಾಗೂ ಸಂಗ್ರಹಕ್ಕೆ ಬೆಂಬಲ ನೀಡಿದ್ದರು ಎನ್ನಲಾಗಿದೆ.  ಚುನಾವಣಾ ಆಯೋಗದ ಚೆಕ್‍ಪೋಸ್ಟ್‍ಗಳು, ಗುಪ್ತಚರ ಇಲಾಖೆಯ ಮಾಹಿತಿಗಳು ಹಾಗೂ ಐಟಿ ಮೂಲಗಳಿಂದ ಮಾಹಿತಿ ಸಂಗ್ರಹಿಸಿದ ಐಟಿ ಇಲಾಖೆ ಇಂದು ದಾಳಿ ನಡೆಸಿದೆ. 
ಇದೀಗ ಚುನಾವಣೆ ಅಕ್ರಮಗಳಿಗಾಗಿ ಸಂಗ್ರಹಿಸಲಾಗಿರುವ ಹಣದ ದಾಸ್ತಾನು ಹಾಗೂ ಮೂಲಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಆರಂಭಿಸಿದೆ. ಆದರೆ ಐಟಿ ದಾಳಿ ಬಗ್ಗೆ ಇಲಾಖೆ ಗೌಪ್ಯತೆ ಕಾಪಾಡಿಕೊಂಡಿದ್ದರೂ ಸಿಎಂ ಕುಮಾರಸ್ವಾಮಿಗೆ ಈ ಬಗ್ಗೆ ನಿನ್ನೆಯೇ ಮಾಹಿತಿ ಲಭ್ಯವಾಗಿದ್ದರಿಂದ ಹಣವನ್ನು ಸೂಕ್ತಜಾಗದಲ್ಲಿ ಅಡಗಿಸಿಟ್ಟು ಸಂಬಂಧಿಸಿದ ದಾಖಲೆಗಳನ್ನು ನಿನ್ನೆಯೇ ನಾಶಮಾಡಲು ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದ್ದರೂ ಎಂಬ ಮಾತು ಕೇಳಿಬಂದಿದೆ. 
ಒಂದು ವಾರದಿಂದ ಜೆಡಿಎಸ್ ನಡೆಸಿದ ಅಕ್ರಮ ಹಣ ಸಾಗಾಟದ ಮಾಹಿತಿ ಆಧರಿಸಿ ದಾಳಿ ನಡೆಸಿದ ಐಟಿ ಅಧಿಕಾರಿಗಳು ಈಗ ಆ ಹಣದ ಪತ್ತೆಗಾಗಿ ಶೋಧ ಮುಂದುವರೆಸಿದ್ದು, ಕುಮಾರಸ್ವಾಮಿ, ರೇವಣ್ಣ, ದೇವೆಗೌಡ್, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ಸಚಿವ ಪುಟ್ಟರಾಜು, ಮಂಡ್ಯದ ಸಿಎಂ ಆಪ್ತರ ಮನೆಗಳು ಹೀಗೆ ಸಂದೇಹ ಬಂದ ಕಡೆಗಳಲ್ಲೆಲ್ಲ ಪರಿಶೀಲನೆ ಮುಂದುವರೆಸಿದ್ದಾರೆ. ಒಟ್ಟಿನಲ್ಲಿ ಕರ್ನಾಟಕದಲ್ಲಿ ಇಂದು ಐಟಿ ದಾಳಿ ಪ್ರಮುಖ ಚರ್ಚೆಯ ವಿಷಯವಾಗಿದ್ದು, ದಾಳಿಯಲ್ಲಿ ಏನೆಲ್ಲ ಪತ್ತೆಯಾಗಲಿದೆ ಎಂಬುದು ಸಧ್ಯದ ಕುತೂಹಲ. 


ಸಂಬಂಧಿತ ಟ್ಯಾಗ್ಗಳು

#Karnataka #Kumarswamy #It Shock #Jds


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ