ಸಿಎಂ ಹಾಗೂ ರೇವಣ್ಣ ಆಪ್ತರ ಮನೆಗೆ ಐಟಿ ಶಾಕ್

 IT Shock to CM and Revannas Home

28-03-2019

ಮಹತ್ವದ ಬೆಳವಣಿಗೆಯೊಂದರಲ್ಲಿ ಸಿಎಂ ಕುಮಾರಸ್ವಾಮಿ ಆಪ್ತರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಿ.ಎಸ್.ಪುಟ್ಟರಾಜು ಮನೆ ಹಾಗೂ ಕಚೇರಿಗಳ ಮೇಲೆ ಬೆಳಗಿನ ಜಾವ್ ಐಟಿ ರೇಡ್ ನಡೆದಿದೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಚಿನಕುರುಳಿಯಲ್ಲಿರುವ ಪುಟ್ಟರಾಜು ಮನೆ, ಮೈಸೂರಿನಲ್ಲಿರುವ ಅವರ ಸಂಬಂಧಿ ಮನೆ ಮೇಲೆ ಸೇರಿದಂತೆ ಹಲವು ಸ್ಥಳಗಳಲ್ಲಿ ಐಟಿ ರೇಡ್ ನಡೆದಿದೆ. 

ಬೆಳಗಿನ ಜಾವ ದಾಳಿ ನಡೆಸಿರುವ ಐಟಿ ಅಧಿಕಾರಿಗಳು, ಮುಂಜಾಗ್ರತಾ  ಕ್ರಮವಾಗಿ ಸಿಆರ್‍ಪಿಎಫ್ ಯೋಧರ ಭದ್ರತೆಯಲ್ಲಿ ದಾಳಿ ನಡೆಸಿದ್ದಾರೆ. ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದು, ಅಪಾರ ಪ್ರಮಾಣದ ಹಣ ಹಾಗೂ ಅಮೂಲ್ಯ ದಾಖಲೆಗಳನ್ನು ವಶಪಡಿಸಿಕೊಂಡಿರುವ ಸಾಧ್ಯತೆ ಇದೆ.

ಕೇವಲ ಸಿ.ಎಸ್.ಪುಟ್ಟರಾಜು ಮಾತ್ರವಲ್ಲದೇ, ಸಿಎಂ ಕುಮಾರಸ್ವಾಮಿ ಸಹೋದರ ಹಾಗೂ ಸಚಿವ ಎಚ್.ಡಿ.ರೇವಣ್ಣ ಅವರ ಆಪ್ತರ ಮನೆ, ಕಚೇರಿ ಹಾಗೂ ಹಾಸನದ ಲೋಕೋಪಯೋಗಿ ಇಲಾಖೆ ಕಚೇರಿಯ ಮೇಲೂ ಐಟಿ ದಾಳಿ ನಡೆದಿದೆ. ಅಲ್ಲಿಯು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 200 ಕ್ಕೂ ಹೆಚ್ಚು ಅಧಿಕಾರಿಗಳು ಈ ದಾಳಿಯಲ್ಲಿ ಪಾಲ್ಗೊಂಡಿದ್ದಾರೆ. 
ಬೆಂಗಳೂರಿನ ಹಲವು ರಾಜಕಾರಣಿಗಳು ಹಾಗೂ ಉದ್ಯಮಿಗಳ ಮನೆಮೇಲೂ ಐಟಿ ದಾಳಿ ನಡೆದಿದೆ. ಬೆಂಗಳೂರಿನ ಸೌತ್‍ಎಂಡ್‍ನಲ್ಲಿರುವ ಉದ್ಯಮಿ ಸಿದ್ದಿಖ್ ಶೇಟ್ ಮನೆಮೇಲೂ ದಾಳಿ ನಡೆದಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಚುನಾವಣೆಗೆ ದಿನಗಣನೆ ನಡೆಯುತ್ತಿರುವ ವೇಳೆ ನಡೆದಿರುವ ಈ ಐಟಿ ದಾಳಿ ಹಲವು ಆಯಾಮಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಇದು ಕೇಂದ್ರ ಸರ್ಕಾರ ಪ್ರೇರಿತ ದಾಳಿ, ಬಿಜೆಪಿ ಐಟಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಸಿ.ಎಸ್.ಪುಟ್ಟರಾಜು ಕಿಡಿಕಾರಿದ್ದಾರೆ. ಐಟಿ ದಾಳಿ  ಬಗ್ಗೆ ಸಂಜೆ ವೇಳೆಗೆ ಸ್ಪಷ್ಟ     ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ. 


ಸಂಬಂಧಿತ ಟ್ಯಾಗ್ಗಳು

#Lokshabha-2019 #C.S.Puttraju #It Raid #HDK


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ