ಮಂಡ್ಯ ಜನ ಮುಟ್ಟಾಳರಲ್ಲ ಸುಮಲತಾ ಅಂಬರೀಷ್

Mandya Peoples Are Not Fools

27-03-2019

ಮೂರಲ್ಲ, ನೂರು ಸುಮಲತಾರನ್ನು ಹಾಕಿದರೂ ಅವರು ಗೆಲ್ಲೋಕೆ ಸಾಧ್ಯವಿಲ್ಲ. ಮಂಡ್ಯ ಜನ ಮುಟ್ಟಾಳರೂ ಅಲ್ಲ, ಮೌಢ್ಯರೂ ಅಲ್ಲ. ಸುಮಲತಾ ಅಂಬರೀಷ್ ಯಾರು ಎಂಬುವುದು ಚೆನ್ನಾಗಿ ಗೊತ್ತಿದೆ ಎಂದು ಪಕ್ಷೇತರ ಅಭ್ಯರ್ಥಿ ಹಾಗೂ ನಟಿ ಸುಮಲತಾ ಅಂಬರೀಷ್​ ತಿಳಿಸಿದರು.

ಬುಧವಾರ ಮಂಡ್ಯದ ಬೂಕನಕೆರೆಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಜೆಡಿಎಸ್​ನದ್ದು ಕುತಂತ್ರ ಹಾಗೂ ಮೋಸದ ರಾಜಕಾರಣ. ನೇರವಾಗಿ ಅವರಿಂದ ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ. ನಿನ್ನೆ ಮೂವರು ಸುಮಲತಾರಿಂದ ನಾಮಪತ್ರ ಹಾಕಿಸಿದ್ದಾರೆ. ಮೂರಲ್ಲ, ನೂರು ಜನ ಹಾಕಿದರೂ ಅವರು ಗೆಲ್ಲೋಕೆ ಸಾಧ್ಯವೇ ಇಲ್ಲ. ಮಂಡ್ಯ ಜನ ಮುಟ್ಟಾಳರೂ ಅಲ್ಲ, ಮೌಢ್ಯರೂ ಅಲ್ಲ. ಸುಮಲತಾ ಅಂಬರೀಷ್​ ಯಾರು ಎಂಬುವುದು ಚೆನ್ನಾಗಿ ಗೊತ್ತಿದೆ ಎಂದು ಜೆಡಿಎಸ್​ ವಿರುದ್ಧ ಟೀಕಾಪ್ರಹಾರ ಮಾಡಿದರು.

ನಾನು ಒಂಟಿ ಅಲ್ಲ. ನನ್ನ ಪರ ನನ್ನ ಮಕ್ಕಳು ಇದ್ದಾರೆ. ನಟ ದರ್ಶನ್​ಗೆ ಜೈಕಾರ ಹಾಕಿದ್ದಕ್ಕೆ ಲಾಠಿ ಚಾರ್ಜ್ ಮಾಡಿದ್ದಾರೆ. ಏಪ್ರಿಲ್ 18ರ ಮತದಾನದಂದು ಲಾಠಿ ನಿಮ್ಮ ಕೈಯಲ್ಲಿರುತ್ತದೆ. ಅಂದು ಅದನ್ನು ಉಪಯೋಗಿಸಿ, ಮೋಸ, ಕುತಂತ್ರ ಹಾಗೂ ಸುಳ್ಳುಗಳು ಎಷ್ಟು ದಿನ ಇರುತ್ತದೆ ನೋಡೋಣ. ನಾನು ಯಾರ‍್ಯಾರನ್ನು ಎದುರು ಹಾಕಿಕೊಳ್ಳುತ್ತಿದ್ದೇನೆ ಎಂಬುದು ನಿಮಗೆಲ್ಲಾ ಗೊತ್ತಿದೆ. ಒಬ್ಬ ಮಾಜಿ ಪ್ರಧಾನಿ, ಒಬ್ಬ ಸಿಎಂ, ಎಂಟು ಮಂದಿ ಶಾಸಕರು, ಮೂರು ಮಂತ್ರಿಗಳು, ಮೂರು ಎಂ.ಎಲ್.ಸಿ. ಹಾಗೂ ಕಾಂಗ್ರೆಸ್​ನ ಧೀಮಂತ ನಾಯಕರು ನನ್ನ ವಿರುದ್ಧ ಒಗ್ಗಟ್ಟಾಗಿದ್ದಾರೆ. ಮಂಡ್ಯ ಜನ ಮುಟ್ಟಾಳರಲ್ಲ. ಮಂಡ್ಯಕ್ಕೆ ಸ್ವಾಭಿಮಾನ ಇದೆ. ನಿಮ್ಮನ್ನು ನಂಬಿ ಸಾಹಸಕ್ಕೆ ಕೈ ಹಾಕಿದ್ದೇನೆ ಎಂದು ಹೇಳಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾರ‍್ಯಾರು ಬೈದಾಡಿಕೊಂಡರು ಅವರೆಲ್ಲ ಇಂದು ಜೋಡೆತ್ತುಗಳು ಎಂದು ಹೇಳಿಕೊಳ್ಳುತ್ತಿದ್ದಾರೆ. ಯಾವ ಜೋಡೆತ್ತು ರೇಸ್​ನಲ್ಲಿ ಗೆಲ್ಲುತ್ತದೆ ನೋಡೋಣ ಎಂದು ಹೆಸರೇಳದೇ ಕುಮಾರಸ್ವಾಮಿ ಹಾಗೂ ಡಿಕೆಶಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. 


ಸಂಬಂಧಿತ ಟ್ಯಾಗ್ಗಳು

#Loksabha 2019 #Mandya #Sumalatha Ambrish #People


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ