ನಾನು ಚುನಾವಣೆಗೆ ಸ್ಪರ್ಧಿಸಲ್ಲ- ಶ್ಯಾಮನೂರು ಶಿವಶಂಕರಪ್ಪ 

 I did not contest elections - Shamanur Shivashankarappa

27-03-2019

ಒಂದೆಡೆ ಮೈತ್ರಿಯಲ್ಲಿ ಟಿಕೇಟ್ ಹಂಚಿಕೆ ಸಂಕಷ್ಟ ಎದುರಿಸಿದ ಕಾಂಗ್ರೆಸ್ ಈಗ ಮತ್ತೊಂದು ರೀತಿಯಲ್ಲಿ ಸಂಕಷ್ಟಕ್ಕಿಡಾಗಿದೆ. ಹೌದು ದಾವಣಗೆರೆಯಲ್ಲಿ ಕಾಂಗ್ರೆಸ್‍ಗೆ ಅಭ್ಯರ್ಥಿ ಕೊರತೆ ಎದುರಾಗಿದ್ದು, ಪಕ್ಷ ನೀಡಿದ ಟಿಕೇಟ್ ನಿರಾಕರಿಸಿರುವ ಹಿರಿಯ ಕಾಂಗ್ರೆಸ್ಸಿಗ ಶ್ಯಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದಾರೆ. 

ಈಗಾಗಲೇ ಎಐಸಿಸಿ ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೇಟ್‍ನ್ನು ಶ್ಯಾಮನೂರು ಶಿವಶಂಕರಪ್ಪನವರಿಗೆ ನೀಡಿ ಘೋಷಣೆ ಮಾಡಿದೆ. ಆದರೆ ಈ ಟಿಕೇಟ್‍ನ್ನು ಶಿವಶಂಕರಪ್ಪ ನಿರಾಕರಿಸಿದ್ದು, ನನಗೆ 88 ವರ್ಷ ವಯಸ್ಸಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೆ ಆಸಕ್ತಿ ಇಲ್ಲ. ಬೇಕಿದ್ದರೆ ನನ್ನ ಮಗ ಎಸ್.ಎಸ್.ಮಲ್ಲಿಕಾರ್ಜುನ್‍ಗೆ ಟಿಕೇಟ್ ನೀಡಿ ಎಂದಿದ್ದಾರೆ. 

ಇನ್ನೊಂದೆಡೆ ದಾವಣಗೆರೆ ಕಳೆದ ಮೂರು ಬಾರಿಯೂ ಬಿಜೆಪಿ ತೆಕ್ಕೆಗೆ ಜಾರಿದ್ದು, ಜಿ.ಎಂ.ಸಿದ್ದೇಶ್ವರ್ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಈ ಬಾರಿಯೂ ಜಿ.ಎಂ.ಸಿದ್ದೇಶ್ವರ್‍ಗೆ ಟಿಕೇಟ್ ನೀಡಲಾಗಿದೆ. ಹೀಗಾಗಿ ಕಾಂಗ್ರೆಸ್ ಕಾಟಾಚಾರಕ್ಕೆ ಟಿಕೇಟ್ ನೀಡಿ ಸುಮ್ಮನಾಗಿದೆ ಎಂಬ ಮಾತು ಕೇಳಿಬರುತ್ತಿದೆ.
 ಶ್ಯಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್, 2004, 2009,2014 ರ ಚುನಾವಣೆಯಲ್ಲಿ ಜಿ.ಎಂ.ಸಿದ್ದೇಶ್ವರ್ ವಿರುದ್ಧ ಸ್ಪರ್ಧಿಸಿ ಸೋತಿದ್ದಾರೆ. ಅಷ್ಟೇ ಅಲ್ಲ, 2018 ವಿಧಾನಸಭೆ ಚುನಾವಣೆಯಲ್ಲೂ ಎಸ್.ಎಸ್.ಮಲ್ಲಿಕಾರ್ಜುನ್ ದಾವಣಗೆರೆ ಉತ್ತರ  ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದಾರೆ. ಹೀಗಾಗಿ ಅವರು ಚುನಾವಣೆಯಲ್ಲಿ ಆಸಕ್ತಿ ಕಳೆದುಕೊಂಡು, ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದಾರೆ. 
ಆದರೆ ರಾಹುಲ್ ಗಾಂಧಿ ಶಿವಶಂಕರಪ್ಪ ಕುಟುಂಬಕ್ಕೆ ಟಿಕೇಟ್ ನೀಡಬೇಕೆಂದು ಸೂಚಿಸಿರೋದರಿಂದ ರಾಜ್ಯ ಕಾಂಗ್ರೆಸ್ ಶ್ಯಾಮನೂರು ಶಿವಶಂಕರಪ್ಪನವರಿಗೆ ಟಿಕೇಟ್ ನೀಡಿದೆ. ಆದರೆ ಶಿವಶಂಕರಪ್ಪನವರು ಇನ್ನು ಚುನಾವಣೆಗೆ ಸ್ಪರ್ಧಿಸಲು ಸಿದ್ಧವಾಗಿಲ್ಲ. ದಾವಣಗೆರೆಗೆ ಏಪ್ರಿಲ್ 23 ರಂದು ಮತದಾನ ನಡೆಯಲಿರೋದರಿಂದ ನಾಮಿನೇಶನ್ ಫೈಲ್ ಮಾಡಲು ಇನ್ನು ಸಮಯವಿದೆ. 
ಮೂಲಗಳ ಪ್ರಕಾರ ಶ್ಯಾಮನೂರು ಶಿವಶಂಕರಪ್ಪ ರಾಜ್ಯ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಸಚಿವ ಸಂಪುಟ ವಿಸ್ತರಣೆ ವೇಳೆ ವಯಸ್ಸಿನ ಕಾರಣ ನೀಡಿ ಶ್ಯಾಮನೂರಿಗೆ ಸಚಿವ ಸ್ಥಾನ ನೀಡಲು ನಿರಾಕರಿಸಲಾಗಿತ್ತು. ಆದರೆ ಈಗ ಅಭ್ಯರ್ಥಿ ಕೊರತೆಯಿರೋದರಿಂದ ಶಿವಶಂಕರಪ್ಪನವರಿಗೆ ಟಿಕೇಟ್ ನೀಡಿ ಕೈತೊಳೆದುಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಇದಕ್ಕೆ ಶ್ಯಾಮನೂರು ಎಂಪಿ ಟಿಕೇಟೂ ಬೇಡ, ಚುನಾವಣೆಯ ಸಹವಾಸವೂ ಬೇಡ ಅಂತಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಎಸ್.ಎಸ್.ಮಲ್ಲಿಕಾರ್ಜುನ್ ಪತ್ನಿಯನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ ಎನ್ನಲಾಗಿದ್ದು, ದಾವಗೆರೆಯ ಅಭ್ಯರ್ಥಿ ಯಾರಾಗ್ತಾರೆ ಅನ್ನೋ ಕುತೂಹಲಕ್ಕೆ ಇನ್ನಷ್ಟೇ ಉತ್ತರ ಲಭ್ಯವಾಗಬೇಕಿದೆ. 


ಸಂಬಂಧಿತ ಟ್ಯಾಗ್ಗಳು

#Loksabha 2019 #Davangere #Shamnur Shivashankarppa #Contest


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ