ಬೆಂಗಳೂರು ದಕ್ಷಿಣಕ್ಕೆ ಬಿಜೆಪಿಯಿಂದ ತೇಜಸ್ವಿ ಸೂರ್ಯ

 Tejasvi Surya from  bjp  to Bangalore South

26-03-2019

ಬಿಜೆಪಿಯ ಅತ್ಯಂತ ಪ್ರತಿಷ್ಠೆಯ ಲೋಕಸಭಾ ಕ್ಷೇತ್ರವಾಗಿದ್ದ ಬೆಂಗಳೂರು ದಕ್ಷಿಣಕ್ಕೆ ಕಮಲ ಪಾಳಯ ಸೋಮವಾರ ರಾತ್ರಿ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದು, ಅಚ್ಚರಿಯ ಬೆಳವಣಿಗೆಯಲ್ಲಿ ದಿ.ಅನಂತಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್ ಬದಲು ಬಿಜೆಪಿ ಯುವನಾಯಕ ತೇಜಸ್ವಿಸೂರ್ಯಾಗೆ ಟಿಕೇಟ್ ನೀಡಲಾಗಿದೆ. ವೃತ್ತಿಯಲ್ಲಿ ವಕೀಲರಾಗಿರುವ ತೇಜಸ್ವಿ ಸೂರ್ಯ, ಪ್ರಖರ ವಾಗ್ಮಿ ಹಾಗೂ ಆರ್‍ಎಸ್‍ಎಸ್‍ನಿಂದ ಬೆಳೆದುಬಂದ ಯುವ ನೇತಾರ. 

ಬೆಂಗಳೂರಿನ ಬಸವನಗುಡಿ ಹಾಲಿ ಶಾಸಕ ರವಿ ಸುಬ್ರಹ್ಮಣ್ಯ ಸಹೋದರನ ಮಗನಾಗಿರುವ ತೇಜಸ್ವಿ ಸೂರ್ಯ ರಾಜ್ಯ ಉಚ್ಛನ್ಯಾಯಾಲಯದಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಆರ್.ಎಸ್.ಎಸ್‍ನಿಂದ ಬಂದು ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿರುವ  ತೇಜಸ್ವಿ ಸೂರ್ಯ, ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಅಲ್ಲದೆ ಬಿಜೆಪಿ ರಾಷ್ಟ್ರೀಯ ಸಾಮಾಜಿಕ ಜಾಲತಾಣಗಳ ವಿಭಾಗದಲ್ಲೂ ಜವಾಬ್ದಾರಿ ಹೊಂದಿದ್ದಾರೆ. 
 ಬೆಂಗಳೂರು ಉಳಿಸಿ ಅಭಿಯಾನ ಸೇರಿದಂತೆ ಹಲವು ಪಕ್ಷದ ಚಟುವಟಿಕೆ, ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ತೇಜಸ್ವಿ ಸೂರ್ಯ ತಮ್ಮ ಪ್ರಖರವಾದ ಹಾಗೂ ನೇರ ಮಾತುಗಳಿಂದಲೇ ಮೆಚ್ಚುಗೆ ಗಳಿಸಿದ್ದಾರೆ. ದಿ.ಅನಂತಕುಮಾರ ಕುಟುಂಬದ  ಜೊತೆ ಹಲವು ವರ್ಷಗಳಿಂದ ಆತ್ಮೀಯರಾಗಿದ್ದಾರೆ ತೇಜಸ್ವಿ ಸೂರ್ಯ.  ಬ್ರಿಟನ್ ಪಾರ್ಲಿಮೆಂಟ್‍ನಲ್ಲಿ ಭಾಗವಹಿಸಲು ಆಯ್ಕೆಯಾದವರ ಪೈಕಿ ಅತ್ಯಂತ ಕಿರಿಯ ಮುಖಂಡ ತೇಜಸ್ವಿ ಸೂರ್ಯ ಕೂಡ ಒಬ್ಬರಾಗಿದ್ದಾರೆ. 
 

ಈ ಹಿಂದೆ ಶಾಸಕ ವಿಜಯಕುಮಾರ್ ನಿಧನದಿಂದ ತೆರವಾದ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ವೇಳೆಯೂ ಅಭ್ಯರ್ಥಿ ಸ್ಥಾನಕ್ಕೆ ತೇಜಸ್ವಿ ಸೂರ್ಯ ಹೆಸರು ಕೇಳಿಬಂದಿತ್ತು. ಆದರೆ ಸಂಸದ ಸ್ಥಾನಕ್ಕೆ ತೇಜಸ್ವಿ ಸೂರ್ಯ ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.  ಅವರು ಎದುರು  ಹಿರಿಯ ಕಾಂಗ್ರೆಸ್ಸಿಗ ಬಿ.ಕೆ.ಹರಿಪ್ರಸಾದ್ ಕಣಕ್ಕಿಳಿಯುತ್ತಿದ್ದು, ಬಿಗ್ ಫೈಟ್ ನಡೆಯುವ ಸಾಧ್ಯತೆ ಇದೆ. 
ರಾಜಕೀಯ ಸ್ಥಿತಿಗತಿಯನ್ನು ನೋಡೋದಾದ್ರೆ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಬರೋಬ್ಬರಿ 6 ಬಾರಿ ಜಯಗಳಿಸಿ ದಕ್ಷಿಣ ಕ್ಷೇತ್ರವನ್ನು ಬಿಜೆಪಿಯ ಬಲಿಷ್ಠ ಕೋಟೆಯಾಗಿ ನಿರ್ಮಿಸಿದ್ದಾರೆ. ಪ್ರಸಕ್ತ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಬಿಟಿಎಂ ಹಾಗೂ ಜಯನಗರ ಹೊರತುಪಡಿಸಿ ಉಳಿದೆಲ್ಲ ಕಡೆಗಳಲ್ಲಿ ಬಿಜೆಪಿ ಎಮ್‍ಎಲ್‍ಎಗಳಿದ್ದು, ಈ ಕ್ಷೇತ್ರದಲ್ಲಿ ಬ್ರಾಹ್ಮಣ ಮತಗಳೇ ನಿರ್ಣಾಯಕವಾಗಲಿದೆ. 
ಇನ್ನು ತಮ್ಮನ್ನು ಅಭ್ಯರ್ಥಿಯಾಗಿ ಘೋಷಿಸಿದ್ದಕ್ಕೆ ತೇಜಸ್ವಿ ಸೂರ್ಯ ಟ್ವಿಟರ್ ಮೂಲಕ ಧನ್ಯವಾದ ಹೇಳಿದ್ದು, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಘನತೆವೆತ್ತ ಪ್ರಧಾನಿ ನರೇಂದ್ರ ಮೋದಿಯವರು 28 ವರ್ಷದ ನನ್ನ ಮೇಲೆ ನಂಬಿಕೆ ಇಟ್ಟು ಟಿಕೇಟ್ ಕೊಟ್ಟಿದ್ದು, ಪಕ್ಷಕ್ಕೆ ಹಾಗೂ ದೇಶಕ್ಕೆ ನಾನು ಕೊನೆಯವರೆಗೂ ಕೃತಜ್ಞಾಗಿರುತ್ತೇನೆ ಎಂದಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Loksabha 2019 #Tejaswi Surya #Bangalore South #Bjp


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ