ಡೈರಿ ನಕಲಿ ಎಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ

 BJP President B.S.Yeddyurappa Said that the dairywas  fake

22-03-2019

ಮುಖ್ಯಮಂತ್ರಿಯಾಗಲು ತಾವು ಬಿಜೆಪಿ ವರಿಷ್ಠರಿಗೆ 1800 ಕೋಟಿ ರೂ ಹಣ ನೀಡಿರುವುದಾಗಿ ಎಐಸಿಸಿ ವಕ್ತಾರ ರಣದೀಪ್ ಸಿಂಗ್ ಸರ್ಜೆವಾಲಾ ದೆಹಲಿಯಲ್ಲಿ ಬಿಡುಗಡೆ ಮಾಡಿರುವ ಡೈರಿ ನಕಲಿ. ತಾವೇ ಸಿದ್ದಪಡಿಸಿಕೊಂಡ ಸುಳ್ಳು ದಾಖಲೆ ಇದಾಗಿದೆ.ಅದರಲ್ಲಿರುವ  ಬರವಣಿಗೆ ಹಾಗೂ ಸಹಿ ನಕಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟೀಕರಣ ನೀಡಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಮೇಲಿನ ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ ಡೈರಿ ಹಾಗೂ ಅದರಲ್ಲಿರುವ ಮಾಹಿತಿ ನಕಲಿ ಎಂದು ದೃಢಪಡಿಸಿದ್ದಾರೆ. ಜೊತೆಗೆ ಡೈರಿಯಲ್ಲಿರುವ ಸಹಿಯೂ ತಮ್ಮದಲ್ಲ. ಈ ಬಗ್ಗೆಯೂ ತನಿಖೆ ನಡೆಸಿರುವ ವಿಧಿವಿಜ್ಞಾನ ಪ್ರಯೋಗಾಲಯ ವರದಿಯಲ್ಲಿ ತಮಗೆ ಕ್ಲೀನ್ ಚಿಟ್ ನೀಡಲಾಗಿದೆ. ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ನಾಯಕರು ಸೋಲಿನ ಭೀತಿಯಿಂದ ಹತಾಶಗೊಂಡ ಇಂಹತ ಕೃತ್ಯಕ್ಕೆ ಕೈಹಾಕಿದ್ದಾರೆ ಎಂದು ಅವರು ಆರೋಪಿಸಿದರು.


ಕಾಂಗ್ರೆಸ್ ಮತ್ತು ನಾಯಕರು ವೈಚಾರಿಕವಾಗಿ ದಿವಾಳಿ ಆಗಿದ್ದಾರೆ. ಚುನಾವಣೆ ವೇಳೆ ಸಾರ್ವಜನಿಕವಾಗಿ ಚರ್ಚೆ ನಡೆಸಲು ಅವರಿಗೆ ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹೆಚ್ಚಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಮಾಹಿತಿ ಇದೆ. ಇದರಿಂದ ಕಾಂಗ್ರೆಸ್ ನಾಯಕರು ಹತಾಶೆಗೊಂಡು,ಚುನಾವಣೆಗೂ ಮೊದಲೇ ಸೋಲು ಒಪ್ಪಿಕೊಂಡಿದ್ದಾರೆ ಎಂದರು.

ಡೈರಿ ಪ್ರಕರಣ ಸುಳ್ಳಿನ ಕಂತೆ. ಅಪ್ರಸ್ತುತ, ಅನಗತ್ಯ ವಿಚಾರವಾಗಿದೆ. ಈ ಸಂಬಂಧ
ರಣದೀಪ್ ಸುರ್ಜೆವಾಲಾ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲಿಸಲು ಕಾನೂನು ತಜ್ಞರ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.


ಬಿಜೆಪಿ ಚುನಾವಣೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಗೊ.ಮಧುಸೂಧನ್, ಶೋಭಾ ಕರಂದ್ಲಾಜೆ ಯಡಿಯೂರಪ್ಪ ಅವರ ವಿವಾಹ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕರು ಕ್ರೂರಿಗಳು(ಬ್ರೂಟ್ಸ್). ಯಡಿಯೂರಪ್ಪ ಅವರು ಶೋಭಾ ಕರಂದ್ಲಾಜೆ ಅವರನ್ನು ಯಾವಾಗಲೂ ಸಹೋದರಿ ಎಂದೇ ಸಂಬೋಧಿಸುತ್ತಾರೆ‌. ಇದು ಕಾಂಗ್ರೆಸ್ಸಿಗರ ಅಶ್ಲೀಲ ನಡವಳಿಕೆಯ ಪರಮಾವಧಿ. ಮದುವೆಯಾಗಿರುವುದನ್ನು ಯಾರೂ ಡೈರಿಯಲ್ಲಿ ಬರೆದುಕೊಳ್ಳುವುದಿಲ್ಲ ಎಂಬ ಸಾಮಾನ್ಯ ಪ್ರಜ್ಞೆಯೂ ಕಾಂಗ್ರೆಸ್ ನಾಯಕರಿಗೆ ಇಲ್ಲ ಎಂದರು.

ಅಷ್ಟಕ್ಕೂ ಯಡಿಯೂರಪ್ಪ ಅವರ ಮೇಲೆ ಇದುವರೆಗೆ ಐಟಿ ದಾಳಿ ನಡೆದಿಲ್ಲ. ಒಂದು ವೇಳೆ ಐಟಿಯವರು ದಾಖಲೆಗಳನ್ನು ವಶಪಡಿಸಿಕೊಂಡರೆ ಅದರ ಮೇಲೆ ಸೀಲ್ ಹಾಕುತ್ತಾರೆ. ಸಂಬಂಧಪಟ್ಟವರ ಹತ್ತಿರದ ಬಂಧುಗಳ ಸಹಿ ಪಡೆಯುತ್ತಾರೆ. ಆದರೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ದಾಖಲೆಗಳು ಐಟಿ ದಾಳಿಯಲ್ಲಿ ವಶಪಡಿಸಿಕೊಂಡಿರುವುದು ಎಂಬುದನ್ನು ಸಾಬೀತುಪಡಿಸುವ ಯಾವುದೇ ಸಾಕ್ಷಾಧಾರವೂ ಇಲ್ಲ. ಇದು ಕಾಂಗ್ರೆಸ್ ನಾಯಕರ ವಂಚನೆಯ ಕೃತ್ಯ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್ ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದ್ದು, ಅವರು ನೀತಿ ಸಂಹಿತೆ ಉಲ್ಲಂಘನೆ  ಮಾಡಿದ್ದಾರೆ.ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ.ಮಾನನಷ್ಟ ಮೊಕದ್ದಮೆ  ಹೂಡುವುದಾಗಿ ಯಡಿಯೂರಪ್ಪ ಕೂಡ ಹೇಳಿದ್ದಾರೆ ಎಂದು ಗೋ ಮಧುಸೂಧನ್ ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

#Loksabha 2019 #Fake #Dairy #Bsy


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ