ತೇಜಸ್ವಿನಿ ಅನಂತಕುಮಾರ್ ಟಿಕೆಟ್ ತಪ್ಪಿಸಲು ಪ್ರಭಾವಿ ನಾಯಕರೊಬ್ಬರ ಹರಸಾಹಸ?

 An influential leader Trying to avoid ticket  to Tejaswini Ananthakumar ?

22-03-2019

ರಾಜ್ಯ ಬಿಜೆಪಿ ಕಂಡ ಪ್ರಮುಖ ನಾಯಕ ದಿವಂಗತ ಅನಂತಕುಮಾರ್ ಅವರ ಪತ್ನಿ ಶ್ರೀಮತಿ ತೇಜಸ್ವಿನಿ ಅವರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ತಪ್ಪಿಸಲು ಪ್ರಭಾವಿ ನಾಯಕರೊಬ್ಬರು ಹರಸಾಹಸ ನಡೆಸಿರುವ ಅಂಶ ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗುವ ಕನಸು ಹೊತ್ತಿರುವ ಈ ನಾಯಕ ಇದೀಗ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸಂಘರಿವಾರದ ಕಾರ್ಯಕರ್ತರಾದ ಸುರಾನಾ ಸೇರಿದಂತೆ ಹಲವರ ಹೆಸರುಗಳನ್ನು ತೇಲಿ ಬಿಟ್ಟಿದ್ದು ಈ ಪೈಕಿ ಯಾರಾದರೊಬ್ಬರಿಗೆ ಟಿಕೆಟ್ ನೀಡುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮೇಲೆ ಒತ್ತಡ ಹೇರಿದ್ದಾರೆ.

ಈ ಮಧ್ಯೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರಮೋದಿ ಅವರೇ ಕಣಕ್ಕಿಳಿಯಲಿದ್ದಾರೆ ಎಂಬ ಗಾಸಿಪ್ ಕೂಡಾ ಇಂದು ಹಬ್ಬಿದ್ದು ಅಂತಿಮವಾಗಿ ಇಂತಹ ಎಲ್ಲ ಕೆಲಸಗಳ ಮೂಲಕ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ತಪ್ಪಿಸುವುದು ಈ ನಾಯಕರ ಉದ್ದೇಶ.

ಕೆಲ ದಿನಗಳ ಹಿಂದೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡದಂತೆ ಸತತವಾಗಿ ಒತ್ತಡ ಹೇರಿದ್ದು,ಮತ್ತು ಇದೇ ಕಾರಣಕ್ಕಾಗಿ ಕ್ಷೇತ್ರದಲ್ಲಿ ದಂಗೆಯ ವಾತಾವರಣ ನಿರ್ಮಿಸಿದ್ದೂ ಇದೇ ನಾಯಕ ಎಂಬುದು ಬಿಜೆಪಿ ಮೂಲಗಳ ಹೇಳಿಕೆ.

ಒಂದು ಕಡೆಯಿಂದ ಯಡಿಯೂರಪ್ಪ ಮತ್ತವರ ಬೆಂಬಲಿಗರ ಶಕ್ತಿಯನ್ನು ಕಡಿಮೆ ಮಾಡಬೇಕು.ಮತ್ತೊಂದು ಕಡೆಯಿಂದ ರಾಜಧಾನಿಯ ಮೇಲೆ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರಿಗೆ ಇರುವ ಶಕ್ತಿಯನ್ನು ಕುಗ್ಗಿಸಬೇಕು ಎಂಬುದು ಈ ನಾಯಕರ ಮಾಸ್ಟರ್ ಪ್ಲಾನ್.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅನಂತಕುಮಾರ್ ಅವರ ಸತತ ಗೆಲುವಿಗೆ ಗಣನೀಯ ನೆರವು ನೀಡಿದ್ದ ಆರ್.ಅಶೋಕ್ ರಾಜಧಾನಿಯ ಮಟ್ಟಿಗೆ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದು,ಜನನಾಯಕರೆನ್ನಿಸಿಕೊಂಡ ಅಶೋಕ್,ಯಡಿಯೂರಪ್ಪ ಅವರಂತವರನ್ನು ಮೂಲೆಗುಂಪು ಮಾಡುವುದು ಈ ನಾಯಕರ ಉದ್ದೇಶ.

ಇವರೆಲ್ಲ ಮೂಲೆಗುಂಪಾದರೆ ಮುಂದಿನ ದಿನಗಳಲ್ಲಿ ಪಕ್ಷ ತಮ್ಮ ವಶಕ್ಕೆ ಬರುತ್ತದೆ.ಆ ಮೂಲಕ ಲೋಕಸಭಾ ಚುನಾವಣೆಯ ನಂತರ ತಮ್ಮ ನೇತೃತ್ವದಲ್ಲಿ ಬಿಜೆಪಿ-ಜೆಡಿಎಸ್ ಸರ್ಕಾರ ಬರುವಂತೆ ನೋಡಿಕೊಳ್ಳಬೇಕು ಎಂಬ ಹಪಹಪಿ ಈ ನಾಯಕರಿಗಿದೆ.

ಹೀಗಾಗಿ ರಾಜ್ಯದಲ್ಲಿ ಯಾರ್ಯಾರು ಬಲಿಷ್ಟ ನಾಯಕರಿದ್ದಾರೋ?ಅವರನ್ನೆಲ್ಲ ರಾಜಕೀಯವಾಗಿ ಶಕ್ತಿಗುಂದಿಸಿ ಮೇಲೆದ್ದು ನಿಲ್ಲಲು ಈ ನಾಯಕ ಹವಣಿಸತೊಡಗಿದ್ದು ಇದೀಗ ಆ ದಾರಿಯಲ್ಲಿ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರಿಗೂ ಕಾಟ ಕೊಡತೊಡಗಿದ್ದಾರೆ.

ದಿವಂಗತ ಅನಂತಕುಮಾರ್ ಅವರಿಗೆ ಒಳ್ಳೆಯ ಹೆಸರಿದ್ದುದರಿಂದ ಮತ್ತು ಅವರು ಪ್ರಭಾವಿ ನಾಯಕರಾಗಿದ್ದುದರಿಂದ ತೇಜಸ್ವಿನಿ ಅನಂತಕುಮಾರ್ ಅವರೇನಾದರೂ ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ಸಹಜವಾಗಿಯೇ ಪ್ರಬಲರಾಗಬಹುದು.

ಹೀಗಾಗಿ ಅದಕ್ಕೆ ಅವಕಾಶ ನೀಡುವ ಬದಲು ಅವರಿಗೆ ಟಿಕೆಟ್ ತಪ್ಪಿಸುವುದು ಸೂಕ್ತ.ಹಾಗಾದಾಗ ಏಕಕಾಲಕ್ಕೆ ಅಶೋಕ್,ತೇಜಸ್ವಿನಿಯವರಂತವರು ರಾಜಧಾನಿಯಲ್ಲಿ ಪಾರಮ್ಯ ಮೆರೆಯುವ ಅವಕಾಶ ತಪ್ಪುತ್ತದೆ ಎಂಬ ಈ ನಾಯಕರ ಲೆಕ್ಕಾಚಾರ ಹಲವರ ಕಣ್ಣು ಕೆಂಪಗಾಗುವಂತೆ ಮಾಡಿದೆ.


ಸಂಬಂಧಿತ ಟ್ಯಾಗ್ಗಳು

#Loksabha 2019 #Avoid ticket #Tejswini Ananthkumar #BJP Leader


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ