ಹಾಸನ ಟೂ ಲೋಕಸಭೆ ಜರ್ನಿಗೆ ಮುನ್ನುಡಿ ಬರೆದ ಪ್ರಜ್ವಲ್ ರೇವಣ್ಣ 

 Prajwal Revanna Filed  nomination

22-03-2019

ಕೊನೆಗೂ ದೇವೆಗೌಡರ ಹಾಸನ ಕ್ಷೇತ್ರಕ್ಕೆ  ಉತ್ತರಾಧಿಕಾರಿಯಾಗಿ ದೇವೆಗೌಡರ ಕುಟುಂಬದ ಮೂರನೇ ತಲೆಮಾರು ರಂಗಪ್ರವೇಶ ಮಾಡಿದೆ. ಆ ಮೂಲಕ ಗೌಡ್ರ ಕುಟುಂಬ ರಾಜಕಾರಣದ ಮತ್ತೊಂದು ಶಾಖೆ ಟಿಸಿಲೊಡೆದಂತಾಗಿದ್ದು, ರಾಜ ರಾಜಕಾರಣದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. 
ವಿಧಾನಸಭೆ ಚುನಾವಣೆ ಕಾಲದಿಂದಲೂ ಪ್ರಜ್ವಲ್ ರೇವಣ್ಣ ರಾಜಕೀಯ ಪ್ರವೇಶ, ವಿಧಾನಸಭಾ ಕ್ಷೇತ್ರದ ಆಯ್ಕೆ ಬಗ್ಗೆ ಚರ್ಚೆ ನಡೆಯುತ್ತಲೇ ಇತ್ತು.ಆದರೆ ದೇವೆಗೌಡರು ಮೊಮ್ಮಗ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ನೀಡದೆ ಸೂಕ್ತ ಸಂದರ್ಭಕ್ಕಾಗಿ ಕಾಯುತ್ತಲೇ ಇದ್ದಂತಿತ್ತು. ಇದೀಗ ಕೊಟ್ಟ ಮಾತಿನಂತೆ ದೇವೆಗೌಡ್ರು ತಮ್ಮ ಸ್ವಕ್ಷೇತ್ರ ಬಿಟ್ಟುಕೊಟ್ಟಿದ್ದು, ಇಂದು ಶುಭಮುಹೂರ್ತದಲ್ಲಿ ಸಚಿವ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಸಿದ್ದಾರೆ. 

ತಮ್ಮ ಇಬ್ಬರು ಮೊಮ್ಮಕ್ಕಳನ್ನು ಸಂಸದರಾಗಿ ನೋಡಲು ನಿರ್ಧರಿಸಿದ ದೇವೆಗೌಡರು ಎಲ್ಲ ವಿರೋಧಗಳ ನಡುವೆ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿಗೆ ಟಿಕೇಟ್ ನೀಡಿದ್ರೆ, ಇತ್ತ ಜೆಡಿಎಸ್‍ನ  ಗಂಡುಮೆಟ್ಟಿನ ನೆಲ ಹಾಸನದಿಂದ ಪ್ರಜ್ವಲ್ ರೇವಣ್ಣನಿಗೆ ಅವಕಾಶ ಕಲ್ಪಿಸಿದ್ದಾರೆ. ದೇವೆಗೌಡರ ಈ ನಿರ್ಧಾರಕ್ಕೆ ರಾಜ್ಯದಾದ್ಯಂತ ಜೆಡಿಎಸ್ ಕಾರ್ಯಕರ್ತರೇ ಆಕ್ಷೇಪ ವ್ಯಕ್ತಪಡಿಸಿದ್ದರೂ ದೇವೆಗೌಡರಾಗಲಿ, ಸಿಎಂ ಕುಮಾರಸ್ವಾಮಿಯಾಗಲಿ ತಲೆಕೆಡಿಸಿಕೊಂಡಿಲ್ಲ. 

ಹೀಗಾಗಿ ಪ್ರಜ್ವಲ್ ರೇವಣ್ಣ ಕಣಕ್ಕಿಳಿದಿದ್ದು, ಇಂದು ಹೊಳೆನರಸೀಪುರದ ರಾಘವೇಂದ್ರಸ್ವಾಮಿ, ಆಂಜನೇಯ ಸ್ವಾಮಿ, ಮಾವಿನಕೆರೆ ರಂಗನಾಥ ಸ್ವಾಮಿ ಲಕ್ಷ್ಮೀನೃಸಿಂಹ ಸೇರಿದಂತೆ ವಿವಿಧ ದೇಗುಲದಲ್ಲಿ ತಂದೆ ಹಾಗೂ ತಾಯಿ ಜೊತೆ  ಪೂಜೆ ಸಲ್ಲಿಸಿದರು. ಬಳಿಕ ಜ್ಯೋತಿಷ್ಯಿಗಳ ಸಲಹೆಯಂತೆ ಬರಿಗಾಲಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದರು. 

ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ ವೇಳೆ ದೇವೆಗೌಡರು ಉಪಸ್ಥಿತರಿದ್ದು, ಸೂಚಕರಾಗಿ ಕುಮಾರಸ್ವಾಮಿ ಸಹಿ ಮಾಡಿದರು. ಈ ವೇಳೆ ಮಾತನಾಡಿದ ಪ್ರಜ್ವಲ್ ರೇವಣ್ಣ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ರೆ, ಕುಮಾರಸ್ವಾಮಿ ಮಾತ್ರ ಈ ವೇದಿಕೆಯನ್ನೂ ಮೋದಿ ಟೀಕಿಸಲು ಬಳಸಿಕೊಂಡರು. 
ಇನ್ನು ಹಾಸನದಿಂದ ಲೋಕಸಭೆಯ ಈ ಹಾದಿ ಪ್ರಜ್ವಲ್‍ಗೆ ಅಷ್ಟು ಸುಲಭವಾಗಿಲ್ಲ. ಈಗಾಗಲೆ ಈ ಮೈತ್ರಿ ಸರ್ಕಾರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರೋದಿಸಿ ಬಿಜೆಪಿ ಸೇರ್ಪಡೆಗೊಂಡಿರುವ ಎ.ಮಂಜು ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದು, ಒಂದಷ್ಟು ಬೇಸತ್ತ ಜೆಡಿಎಸ್ ಕಾರ್ಯಕರ್ತರು ಹಾಗೂ ಕಾಂಗ್ರೆಸ್‍ನ ಕಾರ್ಯಕರ್ತರು ಅತ್ತ ಮುಖಮಾಡುವ ಸಾಧ್ಯತೆ ಕೂಡ ಇದೆ. ಒಟ್ಟಿನಲ್ಲಿ ದೌಡ್ಡಗೌಡರ ಉತ್ತರಾಧಿಕಾರಿ ಜೆಡಿಎಸ್‍ನ ತವರು ನೆಲದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಏನಾಗುತ್ತೆ ಫಲಿತಾಂಷ ಅನ್ನೋದನ್ನು ಕಾದು ನೋಡಬೇಕಿದೆ. 


ಸಂಬಂಧಿತ ಟ್ಯಾಗ್ಗಳು

#Loksabha 2019 # Prajwal Revanna #Nomination #Hasan


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ