ಇಂದಿರಾ ಕ್ಯಾಂಟೀನ್‍ನ ಆಹಾರದ ಗುಣಮಟ್ಟ ಪರಿಶೀಲನೆ ನಡೆಸಿದ ಡಾ.ಪರಮೇಶ್ವರ್

 Dr Parameshwar, Food Quality Inspection of Indira Canteen

21-03-2019

ಇಂದಿರಾ ಕ್ಯಾಂಟೀನ್‍ನಲ್ಲಿನ ಆಹಾರದ ಗುಣಮಟ್ಟದ ಬಗ್ಗೆ ಸಾರ್ವಜನಿರಲ್ಲಿನ ಆತಂಕ ಹೋಗಲಾಡಿಸಲು ಪ್ರತಿ ವಾರ 198 ವಾರ್ಡ್‍ನ ಎಲ್ಲಾ ಅಡುಗೆ ಮನೆಗಳಿಂದಲೂ ಅಧಿಕೃತವಾಗಿ ಆಹಾರದ ಸ್ಯಾಂಪಲ್ ಪಡೆದು ಪ್ರಯೋಗಾಲಯದಲ್ಲಿ ಪರೀಕ್ಷಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ತಿಳಿಸಿದ್ದಾರೆ
ನಗರದ ದೀಪಾಂಜಲಿ ನಗರ, ನಾಯಂಡನಹಳ್ಳಿ ಇಂದಿರಾ ಕ್ಯಾಂಟೀನ್ ಅಡುಗೆ ಮನೆ, ವಿಜಯನಗರ, ದಾಸಪ್ಪ ಜಂಕ್ಷನ್ ಇಂದಿರಾ ಕ್ಯಾಂಟೀನ್‍ಗೆ ತೆರಳಿ ಆಹಾರದ ರುಚಿ, ಶುಚಿ ಪರಿಶೀಲನೆ ನಡೆಸಿದ ನಗರಾಭಿವೃದ್ಧಿ ಸಚಿವರೂ ಆಗಿರುವ ಪರಮೇಶ್ವರ ಅವರು  ಆಹಾರದ ಸ್ಯಾಂಪಲ್ ಪಡೆದು ಪ್ರಯೋಗಾಲಯದಲ್ಲಿ ಪರೀಕ್ಷಿಸುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಈಗಾಗಲೇ 33 ಕಡೆ ಸ್ಯಾಂಪಲ್‍ಗಳನ್ನು ಸಂಗ್ರಹಿಸಿ ದಾಸಪ್ಪ , ಪಿಎಚ್‍ಐ, ಎನ್‍ಎಬಿಎ ಇತರೆ ಲ್ಯಾಬೋರೇಟರ್ ಗೆ ಕಳುಹಿಸಿದ್ದೇವೆ. ವರದಿ ಬಂದ ಬಳಿಕ ಆಹಾರದ ಗುಣಮಟ್ಟದ ಬಗ್ಗೆ ಇರುವ ಗೊಂದಲ ನಿವಾರಣೆಯಾಗಲಿದೆ.ಕೆಲ ಕ್ಯಾಂಟೀನ್‍ನಲ್ಲಿ ಶುಚಿತ್ವ ಇಲ್ಲದ ಕಡೆ ಶುಚಿತ್ವ ಕಾಪಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದರು.
ದೀಪಾಂಜಲಿನಗರ, ನಾಯಂಡಹಳ್ಳಿ ಅಡುಗೆ ಮನೆ ಹಾಗೂ ಇಂದಿರಾ ಕ್ಯಾಂಟೀನ್‍ಗೆ ಇಂದು ಬೆಳಗ್ಗೆಯಿಂದ ಭೇಟಿ ನೀಡಿ ಅಲ್ಲಿ ವಾಸ್ತವ ಸ್ಥಿತಿಯನ್ನು ಪರಿಶೀಲನೆ ನಡೆಸಿದೆ. ಬಡವರು, ವಿದ್ಯಾರ್ಥಿಗಳಿಗಾಗಿಯೇ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿ, ಕಡಿಮೆ ದರದಲ್ಲಿ ಆಹಾರ ಪೂರೈಸಲಾಗುತ್ತಿದೆ. ಕೆಲ ಇಂದಿರಾ ಕ್ಯಾಂಟೀನ್‍ನಲ್ಲಿ ಕಿಚನ್‍ನಲ್ಲಿ ಲೋಪ ಕಂಡು ಬಂದಿದ್ದರಿಂದ ಆಗಾಗ್ಗೇ ಸರಿಪಡಿಸುತ್ತಾ ಬಂದಿದ್ದೇವೆ. ಇಡೀ ದೇಶದಲ್ಲಿ ಈ ಯೋಜನೆ ಪ್ರಶಂಸೆಗೂ ಒಳಗಾಗಿದೆ ಎಂದರು.
ಕಳೆದ ವಾರ 127 ವಾರ್ಡ್‍ನ ಕ್ಯಾಂಟೀನ್‍ನಲ್ಲಿ ಕಳಪೆ ಆಹಾರ, ಸೇವನೆಗೆ ಯೋಗ್ಯ ಅಲ್ಲ ಎಂಬ ವರದಿ ಮಾಧ್ಯಮದಲ್ಲಿ ಪ್ರಕಟವಾಯಿತು. ಆದರೆ ಇದು ಅಧಿಕೃತವೇ ಎಂಬ ಸಂಶಯ ಮೂಡಿದೆ. ಎಲ್ಲಿಂದ, ಯಾವ ಆಹಾರ ಸಂಗ್ರಹಿಸಿ ವರದಿ ಪಡೆದಿದ್ದಾರೆ ಎಂಬ ಅಧಿಕೃತ ಮಾಹಿತಿ ಇರಬೇಕಿತ್ತು. ಅದಕ್ಕಾಗಿಯೇ ಬಿಬಿಎಂಪಿ ವತಿಯಿಂದ ಅಧಿಕೃತವಾಗಿ ಆಹಾರವನ್ನು ಕ್ಯಾಂಟೀನ್‍ಗಳಿಂದ ಪಡೆದು ಅದಕ್ಕೆ ಸ್ಥಳೀಯ ಆರೋಗ್ಯಾಧಿಕಾರಿ ಹಾಗೂ ಕ್ಯಾಂಟೀನ್‍ನ ಸೂಪ್ರವೈಸರ್ ಅವರ ಸಹಿ ಪಡೆದು ಲ್ಯಾಬೋರೇಟರ್‍ಗೆ ಕಳುಹಿಸಿಕೊಡಲಾಗಿದೆ.
ಆಹಾರ ಕಳಪೆ ಎಂಬ ವರದಿಯ ಸತ್ಯಾಸತ್ಯತೆ ತಿಳಿಯಲು ವರದಿ ಕೇಳಿದ್ದೇನೆ. ಯಾವ ಕ್ಯಾಂಟೀನ್, ಯಾವ ಆಹಾರ ಪಡೆದು ಪರೀಕ್ಷಿಸಿದ್ದಾರೆ ಎಂಬ ವರದಿ ಬಂದ ಬಳಿಕ ಅವರ ವರದಿ ಸುಳ್ಳಾಗಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಜನಸಾಮಾನ್ಯರಲ್ಲಿ ಈ ಬಗ್ಗೆ ಆತಂಕ ಕಡಿಮೆ ಮಾಡಲು ಪ್ರತಿ ವಾರ ಎಲ್ಲಾ ಇಂದಿರಾ ಕಿಚನ್‍ಗಳಿಂದ ಆಹಾರದ ಸ್ಯಾಂಪಲ್ ಪರೀಕ್ಷಿಸಲು ಸೂಚಿಸಿದ್ದೇನೆ. ಖಾಸಗಿ ವ್ಯಕ್ತಿಗಳು ಆಹಾರದ ಗುಣಮಟ್ಟ ಪರೀಕ್ಷಿಸಲು ಇಚ್ಛಿಸಿದರೆ, ಅವರು ಕ್ಯಾಂಟೀನ್‍ನ ಸೂಪ್ರವೈಸರ್ ಹಾಗೂ ಸ್ಥಳೀಯ ಆರೋಗ್ಯಾಧಿಕಾರಿಗಳ ಸಹಿ ಪಡೆದು ಆಹಾರ ತೆಗೆದುಕೊಂಡು ಪರೀಕ್ಷಿಸಬಹುದು ಎಂದು ಹೇಳಿದರು.

ಕೆಲವು ಕಡೆ ಬೋಗಸ್ ಟೋಕನ್ ನೀಡಲಾಗುತ್ತಿರುವ ಬಗ್ಗೆಯೂ ಪರಿಶೀಲಿಸಲಾಗುವುದು. ಈ ಬೋಗಸ್ ಟೋಕನ್ ತಡೆಯಲು ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಟೋಕನ್ ವ್ಯವಸ್ಥೆ ಮಾಡಲಾಗುತ್ತದೆ. ಕ್ಯಾಂಟೀನ್ ಆಹಾರದ ಬಗ್ಗೆ ಹೆಚ್ಚು ದೂರು ಕೇಳಿ ಬಂದರೆ ಈಗ ನೀಡಿರುವ ಟೆಂಡರ್ ನು ಸಹ ರದ್ದು ಪಡಿಸಿ ಹೊಸಬರಿಗೆ ಟೆಂಡರ್ ನೀಡಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇಂದಿರಾ ಕ್ಯಾಂಟೀನ್ ಪರಿಶೀಲನೆ ವೇಳೆ ಸಾರ್ವಜನಿರಿಂದಲೂ ಆಹಾರದ ರುಚಿಯ ಹಾಗೂ ಶುಚಿ ಬಗ್ಗೆ ಅಭಿಪ್ರಾಯ ಪಡೆದರು. ಜೊತೆಗೆ ಸ್ವತಃ ಅವರೇ ಕ್ಯಾಂಟೀನ್‍ನಲ್ಲಿ ಇಡ್ಲಿ ಸವಿದರು.ಪರಿಶೀಲನೆ ವೇಳೆ ಮೇಯರ್ ಗಂಗಾಂಭಿಕೆ, ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.ಪರಮೇಶ್ವರ್ ಅವರು, ಬಾವುಟ ಹಿಡಿದವರೆಲ್ಲ ನಾಯಕರಲ್ಲ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

#Bangalore # Inspection #Indira Canteen #Dr.G.Parmeshwar


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ