ಮೋದಿ ಖದರ್ ಕರಗಿಸಿದ ವಿವೇಕ್ ಒಬೆರಾಯ್ 

 Vivek Oberoi Loses Modi

21-03-2019

ಲೋಕಸಭೆ ಚುನಾವಣೆಯಷ್ಟೇ ಕುತೂಹಲ ಮೂಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಿತ್ರ ಪಿಎಂ ನರೇಂದ್ರ ಮೋದಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಯೂ ಟ್ಯೂಬ್‍ನಲ್ಲಿ ದಾಖಲೆಯ ವೀಕ್ಷಕರ ಮೆಚ್ಚುಗೆ ಪಡೆದಿದೆ. ಆದರೆ ಚಿತ್ರದಲ್ಲಿ ಮೋದಿಯವರ ಬದುಕಿನ ಖಾಸಗಿ ವಿಚಾರಗಳನ್ನು ಮರೆಮಾಚಿದಂತಿದ್ದು, ಮೋದಿ ಪಾತ್ರದಲ್ಲಿ ಮಿಂಚುವಲ್ಲಿ ನಟ ವಿವೇಕ್ ಒಬೆರಾಯ್ ಬಹುತೇಕ ವಿಫಲರಾಗಿದ್ದಾರೆ ಎಂಬುದು ಅಭಿಮಾನಿಗಳ ಅಭಿಪ್ರಾಯ. 

ದೇಶಕಂಡ ದಕ್ಷ ಪ್ರಧಾನಿ ನರೇಂದ್ರ ಮೋದಿಯವರ ಜೀವನಾಧಾರಿತ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದ ಒಮಂಗ್ ಕುಮಾರ ಕೊನೆಗೂ ಚಿತ್ರ ನಿರ್ಮಿಸಿದ್ದು, ಬುಧವಾರ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಬಾಲಿವುಡ್‍ನ ನಟ ವಿವೇಕ್ ಓಬೆರಾಯ್ ನರೇಂದ್ರ ಮೋದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2 ನಿಮಿಷ 36 ಸೆಕೆಂಡ್‍ನ ಈ ಟ್ರೇಲರ್‍ನಲ್ಲಿ ಮೋದಿಯವರ ಬಾಲ್ಯ, ಬದುಕು, ಹೋರಾಟ, ತುರ್ತು ಪರಿಸ್ಥಿತಿ, ಗುಜರಾತ ಗಲಾಟೆ, ಚುನಾವಣೆ ಸೇರಿದಂತೆ ಹಲವು ಪ್ರಮುಖ ಅಂಶಗಳನ್ನು ದಾಖಲಿಸಲಾಗಿದೆ. 
ಬಿಡುಗಡೆಯಾದ ಒಂದೇ ದಿನದಲ್ಲಿ ಚಿತ್ರ ಟ್ರೇಲರ್‍ನ್ನು 22 ಲಕ್ಷ ಜನರು ವೀಕ್ಷಿಸಿದ್ದಾರೆ. ಆದರೆ  ಟ್ರೇಲರ್‍ನ ದೃಶ್ಯಾವಳಿಗಳನ್ನು  ಗಮನಿಸಿದಾಗ ವಿವೇಕ್ ಒಬೆರಾಯ್ ನರೇಂದ್ರ ಮೋದಿಯವರ ಹಾವಭಾವವನ್ನು ಅನುಕರಿಸುವಲ್ಲಿ, ಬಾಡಿ ಲ್ಯಾಂಗ್ವೇಜ್‍ನಲ್ಲಿ ನ್ಯಾಯ ಒದಗಿಸಲು ವಿಫಲರಾಗಿದ್ದಾರೆ. 
ಇನ್ನು ಈ ಚಿತ್ರ ಬಿಡುಗಡೆಗೆ ತಡೆಕೋರಿ ಕಾಂಗ್ರೆಸ್ ಅರ್ಜಿ ಸಲ್ಲಿಸಿದ ಬೆನ್ನಲ್ಲೆ, ಚಿತ್ರತಂಡ ಬುದ್ಧಿವಂತಿಕೆ  ತೋರಿದ್ದು, ಏಪ್ರಿಲ್ 12 ರ ಬದಲು ಚಿತ್ರವನ್ನು ಏಪ್ರಿಲ್ 5 ಕ್ಕೆ ಬಿಡುಗಡೆ ಮಾಡಲಿದ್ದಾರೆ. ಚುನಾವಣೆಗೆ 6 ದಿನ ಮುನ್ನವೇ ಚಿತ್ರ ತೆರೆಗೆ ಬರಲಿದ್ದು, ಚುನಾವಣೆಯ  ಮೇಲೆ ಹೇಗೆ ಪ್ರಭಾವ ಬೀರಲಿದೆ ಅನ್ನೋದನ್ನು ಕಾದುನೋಡಬೇಕಿದೆ. 

ಇನ್ನೊಂದೆಡೆ ಚಿತ್ರದ ಟ್ರೇಲರ್‍ನಲ್ಲಿ ಮೋದಿಯವರ ವೈಯಕ್ತಿಕ ಬದುಕು ಹಾಗೂ ಮದುವೆಯ ಬಗ್ಗೆ ಹೆಚ್ಚಿನ ಮಾಹಿತಿ ಇದ್ದಂತಿಲ್ಲ. ಹೀಗಾಗಿ ಅವರ  ಪತ್ನಿ ಜಶೋಧಾಬೆನ್ ಬಗ್ಗೆ ತಿಳಿದುಕೊಳ್ಳುವ ಕುತೂಹಲದಲ್ಲಿದ್ದ ಅಭಿಮಾನಿಗಳಿಗೆ ನಿರಾಸೆಯಾದಂತಿದೆ.


ಸಂಬಂಧಿತ ಟ್ಯಾಗ್ಗಳು

#Narendra Modi #Movie #Vivek Oberoi #Justice


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ