ಹೇಮಂತ್ ಕಶ್ಯಪ್ ಬಳಿಕ ಇನ್ನೂ 12 ಪತ್ರಕರ್ತರಿಗೆ ಪೊಲೀಸ್ ಬಲೆ 

After Hemanth Kashyap, Yet 12 journalists have a police net

21-03-2019

ಕಳೆದ ಎರಡು ದಿನಗಳ ಹಿಂದೆ ಖಾಸಗಿ ಸುದ್ದಿವಾಹಿನಿ ಪಬ್ಲಿಕ್ ಟಿವಿಯ ಪತ್ರಕರ್ತ ಹೇಮಂತ್ ಕಶ್ಯಪ್ ಬ್ಲಾಕ್‍ಮೇಲ್ ಪ್ರಕರಣವೊಂದರಲ್ಲಿ ಸಿಕ್ಕಿ ಬೀಳುತ್ತಿದ್ದಂತೆ ಪತ್ರಿಕೋದ್ಯಮದ ಕರಾಳಮುಖವೊಂದು ಬಟಾಬಯಲಾದಂತಾಗಿದೆ. ಈ ಪ್ರಕರಣ ಇದೀಗ ರಾಜಕೀಯದ ಬಿಸಿಯನ್ನು ದಾಟಿ ರಾಜ್ಯದಾದ್ಯಂತ ತೀವ್ರ ಚರ್ಚೆಗೆ ಗುರಿಯಾಗಿದೆ.  ಈ ಬ್ಲಾಕ್‍ಮೇಲ್ ಪ್ರಕರಣ ಬಗೆದಷ್ಟು ಆಳಕ್ಕೆ ಇಳಿಯತೊಡಗಿದೆ. ಈ ಪ್ರಕರಣದ ಬೆನ್ನುಬಿದ್ದ ಪೊಲೀಸರಿಗೆ ಇಂತಹುದೇ ಕೃತ್ಯದಲ್ಲಿ ತೊಡಗಿರುವ ರಾಜ್ಯದ ಪ್ರತಿಷ್ಠಿತವಾಹಿನಿ ಹಾಗೂ ಪತ್ರಿಕೆಗಳ 12 ಪತ್ರಕರ್ತರ ಲಿಸ್ಟ್ ಲಭ್ಯವಾಗಿದ್ದು, ಅವರನ್ನು ಖೆಡ್ಡಾಕ್ಕೆ ಕೆಡವಲು ಇಲಾಖೆ ಸಿದ್ಧವಾಗುತ್ತಿದೆ. 

ಪದ್ಮಶ್ರೀ ಪ್ರಶಸ್ತಿ ವಿಜೇತ್ ಡಾ.ರಮಣರಾವ್ ಅವರನ್ನು ಬ್ಲಾಕ್‍ಮೇಲ್ ಮಾಡಿದ್ದ ಪಬ್ಲಿಕ್ ಟಿವಿಯ ಇನ್‍ಪುಟ್ ಹೆಡ್ ಹಾಗೂ ಮಾಜಿ ಕ್ರೈಂ ವರದಿಗಾರ ಹೇಮಂತ್ ಕಶ್ಯಪ್  ಬರೋಬ್ಬರಿ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಇದಕ್ಕೆ ಒಪ್ಪಿಕೊಂಡಿದ್ದ ಡಾ.ರಮಣರಾವ್, 5 ಲಕ್ಷ ರೂಪಾಯಿ ನೀಡಿದ್ದರು. ಆದರೆ ಇದಕ್ಕೆ ತೃಪ್ತಿಗೊಳ್ಳದ ಹೇಮಂತ್ ಕಶ್ಯಪ್ , 50 ಲಕ್ಷ ರೂಪಾಯಿ ನೀಡದಿದ್ದರೇ, ರಮಣರಾವ್ ಅವರ ಖಾಸಗಿ ವಿಡಿಯೋವನ್ನು ಟಿವಿಯಲ್ಲಿ ಪ್ಲೇ ಮಾಡುವ ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ. 

ಕೇವಲ ಹೇಮಂತ್ ಕಶ್ಯಪ್ ಮಾತ್ರವಲ್ಲದೇ, ಸಮಯ್ ನ್ಯೂಸ್‍ನ ವರದಿಗಾರ ಮಂಜುನಾಥ ಬೂಕನಕೆರೆ ಹಾಗೂ ಕ್ಯಾಮರಾಮನ್ ಮುರುಳಿ ಕೂಡ ಇದೆ ವೈದ್ಯರನ್ನು ಬ್ಲಾಕ್ ಮೇಲ್ ಮಾಡಿ ಹಣ ಪಡೆದುಕೊಂಡಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಮಂತ್ ಕಶ್ಯಪ್‍ನನ್ನು ವಶಕ್ಕೆ ಪಡೆಯಲಾಗಿದ್ದು, ಕೋರ್ಟ್‍ಗೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಮುರುಳಿ ಹಾಗೂ ಮಂಜುನಾಥ್‍ಗಾಗಿ ಹುಡುಕಾಟ ಆರಂಭವಾಗಿದೆ. 
ಇನ್ನು ಬಂಧಿತ ಹೇಮಂತ್ ಕಶ್ಯಪ್, ಹಲವು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆಪ್ತನಾಗಿದ್ದ ಹಾಗೂ ಹಲವು ಐಪಿಎಸ್ ಅಧಿಕಾರಿಗಳೇ ಈತನ ಸುದ್ದಿಮೂಲವಾಗಿದ್ದರು. ಆದರೆ ಹೇಮಂತ್ ಕಶ್ಯಪ್ ಬ್ಲಾಕ್‍ಮೇಲ್ ಕೇಸ್‍ನಲ್ಲಿ ಸಿಕ್ಕಿಬೀಳುತ್ತಿದ್ದಂತೆ ಯಾವುದೆ ಪೊಲೀಸ್ ಅಧಿಕಾರಿಗಳು ಈತನ ಸಹಾಯಕ್ಕೆ ಬಂದಿಲ್ಲ. ಬದಲಾಗಿ ಆತ ಈ ರೀತಿಯ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ತಿಳಿದು ಬೇಸರವಾಗಿದೆ. ನಾವು ಆತನನ್ನು ಯಾವುದೇ ಕಾರಣಕ್ಕೂ ಬೆಂಬಲಿಸಲು ಸಾಧ್ಯವಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. 

ಆದರೆ ರಾಜ್ಯದಲ್ಲಿ ಇದೇ ಮೊದಲಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಪಬ್ಲಿಕ್ ಟಿವಿಯ ಸಿಬ್ಬಂದಿ ಹೆಸರು ಈ ರೀತಿಯ ಬ್ಲಾಕ್‍ಮೇಲ್ ಪ್ರಕರಣದಲ್ಲಿ ಕೇಳಿಬಂದಿತ್ತು. ಮೇಟಿ ಸಿಡಿ ಪ್ರಕರಣದಲ್ಲೂ ಪಬ್ಲಿಕ್ ಟಿವಿಯ ಸಿಬ್ಬಂದಿ ಹಣ ಪಡೆದಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಈ ಬಾರಿ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಮಾತ್ರವಲ್ಲದೆ ಇದೇ ರೀತಿಯ  ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನು 12 ಪತ್ರಕರ್ತರ ಲಿಸ್ಟ್ ಸಿದ್ಧಪಡಿಸಿದ್ದು, ಅವರೆಲ್ಲರಿಗೂ ಕೂಡ ಹೇಮಂತ್ ಕಶ್ಯಪ್ ಮಾದರಿಯಲ್ಲೇ ಬಲೆ ಬೀಸಿದೆ. 

ಪೊಲೀಸ್ ಇಲಾಖೆ ಮಾತ್ರವಲ್ಲದೇ, ರಾಜಕೀಯ ನಾಯಕರು ಕೂಡ ಮಾಧ್ಯಮಗಳ ಬ್ಲಾಕ್‍ಮೇಲ್ ತಂತ್ರದಿಂದ ಬೇಸತ್ತು ಹೋಗಿದ್ದು, ಕೆಲ ನಿರ್ದಿಷ್ಟ ವಾಹಿನಿಗಳು ಹಾಗೂ ಸಿಬ್ಬಂದಿಗಳ ಹೆಸರಿನ ಜೊತೆಗೆ ಪೊಲೀಸರಿಗೆ ಮಾಹಿತಿ ನೀಡಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಧ್ಯದಲ್ಲೇ, ಇದೇ ಮಾದರಿಯ ಇನ್ನಷ್ಟು ಬ್ಲಾಕ್‍ಮೇಲ್ ಪ್ರಕರಣಗಳು ಮೀಡಿಯಾ ಅಂಗಳದಿಂದಲೇ ಹೊರಬಂದರೆ ಅಚ್ಚರಿ ಪಡಬೇಕಿಲ್ಲ.

ಡಾ.ರಮಣ್ ರಾವ್ ಪ್ರಕರಣದಲ್ಲಿ ಆರೋಪಿತನಾಗಿರುವ ಕ್ಯಾಮರಾನ್ ಮುರುಳಿ ಮೇಲೆ ಸಾಕಷ್ಟು ಪ್ರಕರಣಗಳು ಕೇಳಿಬಂದಿದ್ದು, ಕೆಲವೆ ದಿನಗಳ ಹಿಂದೆ ಇದೇ ಮುರುಳಿ ಬ್ರಿಗೇಡ್ ರೋಡ್‍ನ ಹೊಟೇಲ್‍ವೊಂದಕ್ಕೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಪಬ್ಲಿಕ್ ಟಿವಿ ತಮ್ಮ ಸಿಬ್ಬಂದಿ ಮೇಲೆ ಆರೋಪ ಕೇಳಿಬರುತ್ತಿದ್ದಂತೆ ಆತನನ್ನು ಅಮಾನತ್ತು ಮಾಡಿರುವುದಾಗಿ ಘೋಷಿಸಿದೆ. ಆದರೆ ಹೇಮಂತ್ ಕಶ್ಯಪ್ ಈ ಕೃತ್ಯದ ಹಿಂದೆ ವಾಹಿನಿಯ ಹಿರಿ ತಲೆಗಳ ಕೈವಾಡವೂ ಇದೆ ಎಂಬ ಮಾತು ಕೇಳಿಬಂದಿದೆ. 
ಇನ್ನು ಪೊಲೀಸರು ಈ ರೀತಿಯ ಪ್ರಕರಣಗಳನ್ನು ಬುಡಸಮೇತ ಕಿತ್ತುಹಾಕುವ ಪಣತೊಟ್ಟಿದ್ದು, ಸುಲಭವಾಗಿ ಮಾಧ್ಯಮವನ್ನು ಬಳಸಿಕೊಂಡು ಬ್ಲಾಕ್‍ಮೇಲ್ ಮಾಡುವವರನ್ನು ಹೆಡೆಮುರಿ ಕಟ್ಟುವುದಾಗಿ ಹೇಳಿದ್ದಾರೆ. ಕನ್ನಡದ ಹಲವು ಮೀಡಿಯಾಗಳಿಂದ ಒಟ್ಟು 12 ಜನ ಪತ್ರಕರ್ತರು ಈ ರೀತಿಯ ಫುಲ್ ಟೈಂ ಬ್ಲಾಕ್‍ಮೇಲ್ ಪತ್ರಿಕೋದ್ಯಮವನ್ನು ಆಧರಿಸಿದ್ದು, ಈ ಆರೋಪಿಗಳನ್ನು ಸಾಕ್ಷ್ಯ ಸಮೇತ ಹಿಡಿಯಲು ಪೊಲೀಸರು ಸ್ಕೆಚ್ ಹಾಕಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಸೂಪರ್ ಸುದ್ದಿಗೆ ತಿಳಿಸಿದ್ದಾರೆ. 
 


ಸಂಬಂಧಿತ ಟ್ಯಾಗ್ಗಳು

#journalist #Public Tv #Hemanth Kashyap #Arrest


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ