ನೀರವ್ ಮೋದಿ ಬಂಧನ ಎಲೆಕ್ಷನ್ ಗಿಮಿಕ್ ಎಂದ ಕಾಂಗ್ರೆಸ್ 

 Congress Calls   Nirava Modi Arrest Is A Gimmick

21-03-2019

ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ 13500 ಕೋಟಿ ವಂಚಿಸಿದ ವಂಚಕ ನೀರವ್ ಮೋದಿ  ಬಂಧನವಾಗಿದೆ.  ಲಂಡನ್ ಪೊಲೀಸರು ಬಂಧಿಸಿದ್ದು, ಮಾಚ್ 29 ರವರೆಗೆ ಪೊಲೀಸರ ಕಸ್ಟಡಿಗೆ ನೀಡಲಾಗಿದೆ. ಭಾರತದ ಮನವಿ ಮೇರೆಗೆ ಲಂಡನ್ ಪೊಲೀಸರು ಈ ಕ್ರಮಕೈಗೊಂಡಿದ್ದಾರೆ ಎಂಬ ಕಾರಣಕ್ಕೆ ಮೋದಿಯವರಿಗೆ ಈ ಸಾಧನೆಯ ಕ್ರೆಡಿಟ್ ನೀಡಲಾಗುತ್ತಿದ್ದರೇ, ಕಾಂಗ್ರೆಸ್ ಇಲ್ಲೂ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸಿದ್ದು, ಇದು ಮೋದಿಯ ಚುನಾವಣಾ ತಂತ್ರ ಎಂದು ಟೀಕಿಸಿದೆ. 

ಹೌದು ಲೋಕಸಭಾ ಚುನಾವಣೆಯಲ್ಲಿ ಮೋದಿ ಓಟವನ್ನು ತಡೆಯಲು ಮುಂದಾಗಿರುವ ಕಾಂಗ್ರೆಸ್ ಅದಕ್ಕಾಗಿ ಇನ್ನಿಲ್ಲದ ಕಸರತ್ತು ಆರಂಭಿಸಿದೆ. ಕೇವಲ ವಿರೋಧಕ್ಕಾಗಿ ವಿರೋಧ ಎಂಬಂತೆ ಟೀಕಿಸುತ್ತಿರುವ ಕಾಂಗ್ರೆಸ್ ನೀರವ್ ಮೋದಿ ಬಂಧನವೂ ರಾಜಕೀಯ ಗಿಮಿಕ್ ಎಂದಿದ್ದು, ಇದನ್ನು ಮೋದಿ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಬಹುದು ಎಂದು ವ್ಯಂಗ್ಯವಾಡಿದೆ. 

ನೀರವ್ ಮೋದಿ ಬಂಧನದ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್, ನೀರವ್ ಮೋದಿ ಭಾರತದಿಂದ ಓಡಿ ಹೋಗಲು ಅವಕಾಶ ಮಾಡಿಕೊಟ್ಟವರೂ ಇವರೆ. ಈಗ ಬಂಧನದ ನಾಟಕವಾಡುತ್ತಿದ್ದಾರೆ.  ಚುನಾವಣೆ ವೇಳೆಯಲ್ಲಿ  ಭಾರತಕ್ಕೆ ಹಸ್ತಾಂತರ, ವಿಚಾರಣೆ ಎಲ್ಲ ನಡೆಯಬಹುದು. ಆದರೆ ಎಲೆಕ್ಷನ್ ಬಳಿಕ ಮತ್ತೆ ನೀರವ್ ಮೋದಿ ಲಂಡನ್‍ಗೆ ತೆರಳುವ ಮೂಲಕ ಈ ನಾಟಕ ಕೊನೆಗೊಳ್ಳುತ್ತದೆ ಎಂದಿದ್ದಾರೆ. 

ಅತ್ತ ಬಿಜೆಪಿ ನೀರವ್ ಮೋದಿಯನ್ನೂ ಬಂಧಿಸಿದ್ದಾಯಿತು. ಮೋದಿ ಆಡಳಿತದ ಅವಧಿಯಲ್ಲಿ ಯಾವುದೇ ಭ್ರಷ್ಟರಿಗೆ ಉಳಿಗಾಲವಿಲ್ಲ. ಮುಂದಿನ ತಯಾರಿ ಬಹುಕೋಟಿ ಹಗರಣದ ರೂವಾರಿ ಎಐಸಿಸಿಪ್ರಧಾನ ಕಾರ್ಯದರ್ಶಿ ಪ್ರಿಯಾಂಕ್ ವಾದ್ರಾ ಪತಿ ರಾಬರ್ಟ್ ವಾದ್ರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಗಳನ್ನ ನೀಡುತ್ತಿದ್ದರೇ ಇತ್ತ ಕಾಂಗ್ರೆಸ್ ನೀರವ್ ಮೋದಿ ಬಂಧನವನ್ನು ರಾಜಕೀಯ ದೃಷ್ಟಿಕೋನದಲ್ಲೇ ನೋಡುತ್ತಿದೆ. 
ಇನ್ನು ಕಾಂಗ್ರೆಸ್‍ಮುಖಂಡರ ಈ ಟೀಕೆಗೆ ಬಿಜೆಪಿ ನಾಯಕರು ಹಾಗೂ ಮೋದಿ ಬೆಂಬಲಿಗರು ಖಡಕ್ ಆಗಿ ಉತ್ತರಗಳನ್ನು ನೀಡಲಾರಂಭಿಸಿದ್ದು, ನೀರವ್ ಮೋದಿ ಸಾಲ ಮಾಡಿದ್ದು, ಕಾಂಗ್ರೆಸ್ ಅವಧಿಯಲ್ಲಿ ಎಂಬುದನ್ನು ಮರೆಯಬೇಡಿ ಎಂದು ಕುಟುಕಿದ್ದಾರೆ. ಆದರೆ ಆರ್ಥಿಕ ಅಪರಾಧಗಳ ಅಡಿಯಲ್ಲಿ ವಿದೇಶಕ್ಕೆ ಪಲಾಯನಗೊಂಡಿದ್ದ ನೀರವ್ ಮೋದಿ ಬಂಧನ ಭಾರತದ ಇತರ ಅಪರಾಧಿಗಳಿಗೆ ಹಾಗೂ ಇಂಥ ಪಲಾಯನವಾದಿಗಳಿಗೆ ಪಾಠವಾಗುವ ಬದಲು ಅದು ರಾಜಕೀಯ ಆರೋಪ ಮತ್ತು ಪ್ರತ್ಯಾರೋಪದ  ಸರಕಾಗಿ ಪರಿಣಮಿಸಿದ್ದು ಮಾತ್ರ ಭಾರತದ ರಾಜಕೀಯ ವ್ಯವಸ್ಥೆಯ ದುರಂತ ಎಂಬ ಮಾತು ವಿಶ್ಲೇಷಕ ವಲಯದಲ್ಲಿ ಕೇಳಿಬರುತ್ತಿದೆ. 


ಸಂಬಂಧಿತ ಟ್ಯಾಗ್ಗಳು

#Nirav modi #Congress #Arrest #Gimmick


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ