ಬಿಜೆಪಿ ಹಾಸನ ಜಿಲ್ಲಾಧ್ಯಕ್ಷ ಯೋಗಾ ರಮೇಶ್ ಕಾಂಗ್ರೆಸ್ ಗೆ? 

BJP Hassan District President Yoga Ramesh to Congress?

20-03-2019

ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ರಾಜ್ಯದಲ್ಲಿ ಪಕ್ಷಾಂತರ ಪರ್ವ ಆರಂಭಗೊಂಡಿದೆ. ಅದರಲ್ಲೂ ದೇವೆಗೌಡ್ರ ಸ್ವಕ್ಷೇತ್ರ ಹಾಸನದಲ್ಲಂತೂ ಪ್ರತಿನಿತ್ಯ ಹೊಸ-ಹೊಸ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಕುತೂಹಲ ಮೂಡಿಸಿದೆ. ಮಾಜಿ ಸಚಿವ ಎ.ಮಂಜು ಬಿಜೆಪಿ ಸೇರ್ಪಡೆಗೊಂಡ ಬೆನ್ನಲ್ಲೇ, ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಯೋಗಾರಮೇಶ್ ಮಾಜಿ ಸಿಎಂ  ಸಿದ್ಧರಾಮಯ್ಯ ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.
 ಪ್ರಜ್ವಲ್ ರೇವಣ್ಣ ಹಾಸನದಿಂದ ಮೈತ್ರಿ ಸರ್ಕಾರದ ಅಭ್ಯರ್ಥಿಯಾಗಿ ಲೋಕಸಭಾ ಕಣಕ್ಕಿಳಿಯೋದು ಬಹುತೇಕ ಖಚಿತವಾಗಿದೆ. ಪ್ರಜ್ವಲ್ ರೇವಣ್ಣ ಲೋಕಸಭೆ ಅಭ್ಯರ್ಥಿಯಾಗುತ್ತಾರೆ ಎಂಬ ಮಾತು ಕೇಳಿ ಬಂದಾಗಿನಿಂದಲೂ ಮಾಜಿ ಸಚಿವ ಎ.ಮಂಜು ವಿರೋಧಿಸುತ್ತಲೇ ಬಂದಿದ್ದರು. ಅಷ್ಟೇ ಅಲ್ಲ ಪ್ರಜ್ವಲ್ ರೇವಣ್ಣ ಅಭ್ಯರ್ಥಿಯಾದರೆ ನಾನು ಬೆಂಬಲಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದರು. 
ಆದರೂ ಕೂಡ ಮೈತ್ರಿ ಮಾತುಕತೆಯಲ್ಲಿ  ಜೆಡಿಎಸ್, ಹಾಸನ ಕ್ಷೇತ್ರವನ್ನು ತಮಗಾಗಿ ಉಳಿಸಿಕೊಂಡು ಪ್ರಜ್ವಲ್ ರೇವಣ್ಣ ಕ್ಯಾಂಡಿಡೇಟ್ ಎಂದಿತ್ತು. ಈ ಹಿನ್ನೆಲೆಯಲ್ಲಿ ಬೇಸತ್ತ ಎ.ಮಂಜು ಕಾಂಗ್ರೆಸ್ ತೊರೆದು ಮೊನ್ನೆ ಭಾನುವಾರ ಬಿಜೆಪಿ ಸೇರ್ಪಡೆಗೊಂಡಿದ್ದರು. ಆದರೆ ಎ.ಮಂಜು, ಬಿಜೆಪಿ ಸೇರ್ಪಡೆಗೆ ಬಿಜೆಪಿ ಹಾಸನ ಜಿಲ್ಲಾಧ್ಯಕ್ಷ ಯೋಗಾರಮೇಶ್  ತೀವ್ರವಾಗಿ ವಿರೋಧಿಸಿದ್ದರು. 
ಎ.ಮಂಜು ಕಾಂಗ್ರೆಸ್ ಪಾಲಿಗೆ ಹಳಸಿದ ಅನ್ನವಾಗಿದ್ದಾರೆ. ಅಲ್ಲಿಯೇ ಬೇಡದವರನ್ನು ಬಿಜೆಪಿಯವರು ಸೇರಿಸಿಕೊಂಡು ಏನು ಮಾಡಬೇಕು ಎಂದಿದ್ದರು. ಆದರೂ ಎ.ಮಂಜು ಬಿಎಸ್‍ವೈ ಸೇರಿದಂತೆ ಹಿರಿಯ ಬಿಜೆಪಿಗರ ಬೆಂಬಲದೊಂದಿಗೆ ಬಿಜೆಪಿ ಸೇರ್ಪಡಗೊಂಡಿದ್ದಾರೆ. 
ಈ ಬೆಳವಣಿಗೆ ಯೋಗಾರಮೇಶ್‍ಗೆ ಬೇಸರ ತಂದಿದೆ. ಈ ಹಿನ್ನೆಲೆಯಲ್ಲಿ ಯೋಗಾರಮೇಶ್ ನಿನ್ನೆ ತಡರಾತ್ರಿ ಸಿದ್ಧರಾಮಯ್ಯ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದ್ದು, ಎರಡು ಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿದ್ದಾರೆ.ಈ ಮಾತುಕತೆ ಕುತೂಹಲ ಮೂಡಿಸಿದೆ. 
ಮೂಲಗಳ ಪ್ರಕಾರ ಬಿಜೆಪಿ ಯೋಗಾರಮೇಶ್ ಮಾತು ಕಡೆಗಣಿಸಿ ಎ.ಮಂಜುರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡಿದ್ದು ಹಾಗೂ  ಅವರನ್ನು ಚುನಾವಣೆಗೆ ನಿಲ್ಲಿಸಲು ನಿರ್ಧರಿಸಿದ್ದರಿಂದ ಅವರು ಬೇಸತ್ತಿದ್ದು,ಇದೇ ಕಾರಣಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್‍ನೊಂದಿಗೆ ಕೈ ಜೋಡಿಸಲು ರಮೇಶ್ ತೀರ್ಮಾನಿಸಿದಂತಿದೆ. ಒಂದೊಮ್ಮೆ ಚುನಾವಣೆ ಹೊಸ್ತಿಲಿನಲ್ಲಿ ಯೋಗಾರಮೇಶ್ ಪಕ್ಷ ತೊರದರೆ ಬಿಜೆಪಿಗೆ ಅಪಾರ ಪ್ರಮಾಣದ ನಷ್ಟವಾಗಲಿದ್ದು, ಎ.ಮಂಜು ಗೆಲುವು ಕೂಡ ಕಷ್ಟವಾಗಲಿದೆ . 


ಸಂಬಂಧಿತ ಟ್ಯಾಗ್ಗಳು

#Loksabha 2019 #Yoga Ramesh #Hasan #BJP


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ