ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ನಾಯಕರ ರಣತಂತ್ರ: ಖಾಸಗಿ ಹೋಟೆಲಿನಲ್ಲಿ ಮಹತ್ವದ ಸಭೆ

 A Major Meeting at a Private Hotel

20-03-2019

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳ ನಾಯಕರು ಇಂದು ಖಾಸಗಿ ಹೋಟೆಲಿನಲ್ಲಿ  ಮಹತ್ವದ ಸಭೆ ನಡೆಸಿದರು.ಪ್ರಮುಖ ನಾಯಕರ ಸಭೆಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗೈರಾಗುವ ಮೂಲಕ ತುಮಕೂರು ಕೈತಪ್ಪಿದ ಅಸಮಾಧಾನವನ್ನು ಹೊರಹಾಕಿದ್ದಾರೆ.

ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ,ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್,ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಚಿವ ಡಿ.ಕೆ.ಶಿವಕುಮಾರ್,ರಾಜ್ಯ ಸಭಾ ಸದಸ್ಯ ಕುಪೇಂದ್ರ ರೆಡ್ಡಿ ಭಾಗವಹಿಸಿದ್ದರು.

ಸಭೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳ ಪರ ಒಟ್ಟಾಗಿ ಪ್ರಚಾರ ಮಾಡುವುದು.ಅಭ್ಯರ್ಥಿಗಳ ಗೆಲುವಿಗಾಗಿ ಎಲ್ಲಾ ಹಂತದ ನಾಯಕರು ಶ್ರಮಿಸುವುದು.ಭಿನ್ನಾಭಿಪ್ರಾಯ ಬದಿಗಿರಿಸಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವುದು,ಪ್ರತೀ ಕ್ಷೇತ್ರಗಳಿಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ತಲಾ ಒಬ್ಬರು ವೀಕ್ಷಕರ ನೇಮಕ,ಮೈತ್ರಿ ಪಕ್ಷಗಳು ಒಬ್ಬರೇ ವಕ್ತಾರರು ಒಂದೆ ಅಭಿಪ್ರಾಯ ವ್ಯಕ್ತಪಡಿಸುವುದು.ಬಿಜೆಪಿ ಅಭ್ಯರ್ಥಿಗಳ ಸಂಖ್ಯೆಯನ್ನು ಒಂದಂಕಿಗೆ ಇಳಿಸುವುದು. ಮಹಾ ಘಟಬಂದನ್ ಬಗ್ಗೆ ಇರುವ ಆರೋಪಗಳನ್ನು ತೊಡೆದುಹಾಕವುದು ಪ್ರಮುಖ ನಿರ್ಣಯಗಳಾಗಿವೆ.

ಗೊಂದಲಗಳಿರುವ ಮಂಡ್ಯ, ತುಮಕೂರು, ಮೈಸೂರು, ಹಾಸನ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ,ಚಿಕ್ಕಮಗಳೂರು-ಉಡುಪಿ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಪ್ರಮುಖವಾಗಿ ಉಳಿದಂತೆ ಎಲ್ಲಾ 28 ಕ್ಷೇತ್ರಗಳಲ್ಲಿ ಪರಿಣಾಮಕಾರಿ ಪ್ರಚಾರ ಕೈಗೊಳ್ಳುವುದಕ್ಕು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ.

ರಾಜ್ಯಾದ್ಯಂತ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಜೆಡಿಎಸ್ ವರಿಷ್ಟ ಎಚ್.ಡಿ.ದೇವೇ ಗೌಡರು ಜಂಟಿಯಾಗಿ ಪ್ರಚಾರ ಕಾರ್ಯ ಕೈಗೊಳ್ಳುವ ಮೂಲಕ ಮೈತ್ರಿ ಪಕ್ಷದಲ್ಲಿನ ಗೊಂದಗಳಿಗೆ ತೆರೆ ಎಳೆಯಲು ನಿರ್ಣಯಿಸಲಾಗಿದೆ.

ಬಿಜೆಪಿ ಅಲೆಯಿರುವ ಕ್ಷೇತ್ರಗಳಲ್ಲಿ ಹೆಚ್ಚಿನ ಒತ್ತು ನೀಡುವ ಮೂಲಕ ಬಿಜೆಪಿ ಸಂಖ್ಯಾಬಲವನ್ನು ಕುಗ್ಗಿಸುವುದು ಪ್ರಮುಖ ಅಜೆಂಡಾದಲ್ಲಿನ ಅಂಶವಾಗಿದೆ.ಅದಕ್ಕಾಗಿ ತಂತ್ರಗಾರಿಕೆ ನಡೆಸಲು ಪ್ರಮುಖ ನಾಯಕರು ತಂಡವನ್ನು ರಚಿಸಲೂ ಸಮಿತಿಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ. 

ಜೆಡಿಎಸ್ ಅಭ್ಯರ್ಥಿ ಇರುವೆಡೆ ಕಾಂಗ್ರೆಸ್ ನಾಯಕರು ಬೆಂಬಲ ನೀಡದಿದ್ದಲ್ಲಿ,ಕಾಂಗ್ರೆಸ್ ಅಭ್ಯರ್ಥಿ ಇರುವ ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲು ಸಾಧ್ಯವಿಲ್ಲವೆಂಬ ಚರ್ಚೆ ನಡೆದಿದೆ.ಮಂಡ್ಯದಲ್ಲಿ ನಿಖಿಲ್ ವಿರುದ್ದ ಸುಮಲತಾ ಪರ ಕಾಂಗ್ರೆಸ್ ನಾಯಕರು ಪ್ರಚಾರ ನಡೆಸುತ್ತಿರುವುದು ಮೈತ್ರಿ ಧರ್ಮಕ್ಕೆ ವಿರುದ್ದವಾಗಿದೆ.ಅವರಿಗೆ ಸ್ಪಷ್ಟ ಸೂಚನೆ ನೀಡಿ.ಜೆಡಿಎಸ್ ಅಭ್ಯರ್ಥಿ ಬೆಂಬಲಿಸಿ ಅಥವಾ ತಟಸ್ಥವಾಗಿರಿ ಎಂಬ ಸಂದೇಶ ನೀಡುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ಸಭೆಯಲ್ಲಿ ನಿರ್ಣಯಿಸಲಾಗಿದೆ. 

ಇಂದಿನ ಸಭೆಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗೈರಾಗುವ ಮೂಲಕ ತುಮಕೂರು ಕೈತಪ್ಪಿದ್ದಕ್ಕೆ ಪರೋಕ್ಷ ಅಸಮಾಧಾನ ವ್ಯೆಕ್ತಪಡಿಸಿದ್ದಾರೆ.ಇಂದಿನ ಸಭೆಯ ಮಾಹಿತಿ ಇದ್ದರೂ ಖಾಸಗಿ ಕಾರ್ಯಕ್ರಮದ ನೆಪದಲ್ಲಿ ಸಭೆಯಿಂದ ಹಾಗೂ ಪತ್ರಿಕಾಗೋಷ್ಟಿಯಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.ಮತ್ತೊಂದೆಡ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಇಬ್ಬರಿಗೂ ತಮ್ಮ ಅಸಮಾಧಾನ ಬಹಿರಂಗಗೊಳಿಸಲು ಈ ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.
 


ಸಂಬಂಧಿತ ಟ್ಯಾಗ್ಗಳು

#Loksabha 2019 #Meeting # Alliance Leader #Bangalore


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ