ಮಾರ್ಚ್ 31 ರಂದು ರಾಹುಲ್‍ಗಾಂಧಿ ನೇತೃತ್ವದಲ್ಲಿ ಸಮಾವೇಶ 

 Meeting led by Rahul Gandhi on March 31

19-03-2019

ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೋಮುವಾದಿ ಬಿಜೆಪಿಗೆ ತಕ್ಕ ಉತ್ತರ ನೀಡಲು ಒಗ್ಗೂಡಿ ಜನತಾ ನ್ಯಾಯಾಲಯಕ್ಕೆ ಹೋಗಲು ನಿರ್ಧರಿಸಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮಾರ್ಚ್ 31 ರಂದು ರಾಹುಲ್‍ಗಾಂಧಿ ನೇತೃತ್ವದಲ್ಲಿ ಭಾರೀ ಸಮಾವೇಶ ನಡೆಸುವ ಮೂಲಕ ವಿದ್ಯುಕ್ತವಾಗಿ ರಣಕಹಳೆ ಮೊಳಗಿಸಲು ತೀರ್ಮಾನಿಸಿದ್ದಾರೆ.
ಬೆಂಗಳೂರಿನ ಅಶೋಕಾ ಹೋಟೆಲ್‍ನಲ್ಲಿಂದು ನಡೆದ ಉಭಯ ಪಕ್ಷಗಳ ನಾಯಕರ ಸಭೆಯ ನಂತರ ಈ ವಿಷಯವನ್ನು ಘೋಷಿಸಿದ ಕಾಂಗ್ರೆಸ್-ಜೆಡಿಎಸ್ ನಾಯಕರು,ಕರ್ನಾಟಕದಲ್ಲಿ ಬಿಜೆಪಿಯ ಸೀಟು ಗಳಿಕೆಯ ಸಂಖ್ಯೆ ಒಂದಂಕಿಯನ್ನು ಮೀರಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ,ಸಮನ್ವಯ ಸಮಿತಿ ಅಧ್ಯಕ್ಷ ಸಿದ್ಧರಾಮಯ್ಯ,ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತಿತರರು,ಚುನಾವಣೆಯಲ್ಲಿ ನಾವು ಒಗ್ಗೂಡಿ ಹೋಗುತ್ತೇವೆ.ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದರು.
ದೇವೇಗೌಡರು ಮಾತನಾಡಿ,ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಭಿನ್ನಾಭಿಪ್ರಾಯವಿದೆ.ಹೀಗಾಗಿ ಹಾಸನದಲ್ಲಿ ಹಾಗಾಗುತ್ತದೆ.ಮೈಸೂರಿನಲ್ಲಿ ಹೀಗಾಗುತ್ತದೆ ಎಂದೆಲ್ಲ ಊಹಾಪೋಹಗಳು ಹರಿದಾಡುತ್ತಿವೆ.ಹೀಗಾಗಿ ಇಂದು ಉಭಯ ಪಕ್ಷಗಳ ನಾಯಕರು ಸಭೆ ನಡೆಸಿ ಇಂತಹ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದೇವೆ ಎಂದರು.
ಪ್ರಧಾನಿ ನರೇಂದ್ರಮೋದಿಯವರು ಮಹಾಘಟ್‍ಬಂಧನ್ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ.ಆದರೆ ದೇಶದ ಹದಿನೈದು ರಾಜ್ಯಗಳಲ್ಲಿ ಬಿಜೆಪಿ,ಮೈತ್ರಿ ಪಕ್ಷಗಳ ಜತೆಗೂಡಿ ಅಧಿಕಾರ ನಡೆಸುತ್ತಿದೆ ಎಂದುಇದೇ ಸಂದರ್ಭದಲ್ಲಿ ಅವರು ವ್ಯಂಗ್ಯವಾಡಿದರು.
ಇಷ್ಟಾದರೂ ಅವರು ಮಹಾಘಟ್‍ಬಂಧನ್ ಕುರಿತು ಬಳಕೆ ಮಾಡಿದ ಶಬ್ದಪ್ರಯೋಗ ಸರಿಯಿಲ್ಲ ಎಂದ ಅವರು,ಇಂತಹ ಮಾತನಾಡಿದ ಮೋದಿಯವರಿಗೆ ತಕ್ಕ ಉತ್ತರ ನೀಡಬೇಕಿದೆ.ಹೀಗಾಗಿ ಕರ್ನಾಟಕದಲ್ಲಿ ಮಾರ್ಚ್ 31 ರಂದು ರಾಹುಲ್‍ಗಾಂಧಿ ಅವರ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಸುತ್ತೇವೆ.ಉಭಯ ಪಕ್ಷಗಳು ಒಗ್ಗೂಡಿ ಬಿಜೆಪಿಯನ್ನು ಎದುರಿಸುತ್ತೇವೆ ಅಂತ ವಿವರಿಸಿದರು.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಉಭಯ ಪಕ್ಷಗಳಿಂದ ನೇಮಕಗೊಂಡ ಅಧಿಕೃತ ವಕ್ತಾರರು ಮಾತ್ರ ಮಾಧ್ಯಮಗಳ ಬಳಿ ಮಾತನಾಡಬೇಕು ಎಂದು ತೀರ್ಮಾನಿಸಲಾಗಿದೆ.ಹಾಗೆಯೇ ಯಾರೂ ವೈಯಕ್ತಿಕವಾಗಿ ಮಾತನಾಡಕೂಡದು ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದರು.
ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ?ಎಂಬ ಕುರಿತು ಮಾಧ್ಯಮಗಳು ತುಂಬ ಕುತೂಹಲ ತೋರಿಸುತ್ತಿವೆ.ಆದರೆ ಎಲ್ಲಿಂದ ಸ್ಪರ್ಧಿಸಬೇಕು ಅನ್ನುವ ಕುರಿತು ಯೋಚಿಸಲು ಅವಕಾಶ ನೀಡಿ.ಯಾಕೆಂದರೆ ನಮ್ಮ ರಾಜ್ಯದಿಂದ ಸ್ಪರ್ಧಿಸಿ ಎಂದು ಬೇರೆ ರಾಜ್ಯಗಳ ನಾಯಕರೂ ಕೋರಿದ್ದಾರೆ.
ಆದರೆ ಯಾವುದೇ ತೀರ್ಮಾನಕ್ಕೆ ಬರುವ ಮುನ್ನ ಯೋಚಿಸುತ್ತೇನೆ.ಅದಕ್ಕೆ ಅವಕಾಶ ನೀಡಿ ಎಂದು ಮನವಿ ಮಾಡಿದ ಅವರು,ಇನ್ನೆರಡು ತಿಂಗಳು ಕಳೆದರೆ ನನಗೆ ಎಂಭತ್ತಾರು ವರ್ಷ ತುಂಬುತ್ತದೆ.ಹೀಗಾಗಿ ಮೂರು ವರ್ಷಗಳ ಹಿಂದೆಯೇ ನಾನು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ನಿರ್ಧರಿಸಿದ್ದೆ.
ಇದೇ ಕಾರಣಕ್ಕಾಗಿ ಹಾಸನದಿಂದ ಸ್ಪರ್ಧಿಸುವಂತೆ ಪ್ರಜ್ವಲ್‍ಗೆ ಹೇಳಿದ್ದೆ.ಅದೇ ರೀತಿ ಕಳೆದ ಚುನಾವಣೆಯ ಸಂದರ್ಭದಲ್ಲೂ ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ.ಆದರೆ ಈಗ ನಾನು ಚುನಾವಣೆಗೆ ನಿಲ್ಲಲೇಬೇಕು ಎಂಬ ಒತ್ತಡ ಹೆಚ್ಚಾಗುತ್ತಿದೆ.ಆದ್ದರಿಂದ ಆ ಕುರಿತು ಯೋಚಿಸುತ್ತೇನೆ ಎಂದು ಹೇಳಿದರು.
ಮಾರ್ಚ್ ಮೂವತ್ತೊಂದರ ನಂತರ ಉಭಯ ಪಕ್ಷಗಳ ನಾಯಕರು ರಾಜ್ಯಾದ್ಯಂತ ಚುನಾವಣಾ ಪ್ರಚಾರ ನಡೆಸಲಿದ್ದು ಯಾವ ನಾಯಕರು ಎಲ್ಲಿಗೆ ಹೋಗಬೇಕು ಎಂಬ ಕುರಿತು ಸಧ್ಯದಲ್ಲೇ ತೀರ್ಮಾನಿಸಲಾಗುವುದು ಎಂದು ಹೇಳಿದರು.
ಎಲ್ಲೇ ಹೋದರೂ ಇಂತಹ ಪಕ್ಷದ ಅಭ್ಯರ್ಥಿ ಎನ್ನುವ ಬದಲು ಮೈತ್ರಿಕೂಟದ ಅಭ್ಯರ್ಥಿ ಎಂದು ಹೇಳಲು ತೀರ್ಮಾನಿಸಲಾಗಿದೆ.ಯಾವ ಕಾರಣಕ್ಕೂ ನಮ್ಮಲ್ಲಿ ಗೊಂದಲಗಳಿಲ್ಲ ಎಂದರು.
ಸಿದ್ಧರಾಮಯ್ಯ ಅವರು ಮಾತನಾಡಿ,ಲೋಕಸಭಾ ಚುನಾವಣೆಯಲ್ಲಿ ಉಭಯ ಪಕ್ಷಗಳು ಒಗ್ಗೂಡಿ ಹೋಗಲು ನಿರ್ಧರಿಸಲಾಗಿದ್ದು ಯಾವ ವಿಷಯದಲ್ಲೂ ಗೊಂದಲಗಳಿಲ್ಲ ಎಂದು ಹೇಳಿದರು.
ಮಾರ್ಚ್ ಮೂವತ್ತೊಂದರಂದು ರಾಹುಲ್‍ಗಾಂಧಿ ಅವರ ನೇತೃತ್ವದಲ್ಲಿ ಸಮಾವೇಶ ನಡೆಸುತ್ತೇವೆ.ಪ್ರತಿಯೊಂದು ಲೋಕಸಭಾ ಕ್ಷೇತ್ರಕ್ಕೂ ಉಭಯ ಪಕ್ಷಗಳ ವತಿಯಿಂದ ತಲಾ ಇಬ್ಬರು ವೀಕ್ಷಕರನ್ನು ನೇಮಕ ಮಾಡುತ್ತೇವೆ ಎಂದರು.
ಯಾವ ಕ್ಷೇತ್ರದಲ್ಲೂ ಗೊಂದಲವಿಲ್ಲ.ಉಭಯ ಪಕ್ಷಗಳ ಸ್ಥಳೀಯ ನಾಯಕರು,ಕಾರ್ಯಕರ್ತರು ಒಗ್ಗೂಡಿ ಮೈತ್ರಿ ಕೂಟದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುತ್ತಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ,ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಗ್ಗೂಡಿ ಇಪ್ಪತ್ತೆಂಟು ಕ್ಷೇತ್ರಗಳಲ್ಲೂ ಗೆಲ್ಲುವ ಪ್ರಯತ್ನ ನಡೆಸಬೇಕೆಂದು ನಿರ್ಧರಿಸಲಾಗಿದೆ ಎಂದು ವಿವರಿಸಿದರು.
ಮೈತ್ರಿಕೂಟದಲ್ಲಿ ಯಾವ ಗೊಂದಲಗಳೂ ಇಲ್ಲ.ಇದ್ದರೆ ಅದನ್ನು ಬಗೆಹರಿಸುವ ಶಕ್ತಿ ದೇವೇಗೌಡ ಹಾಗೂ ಸಿದ್ಧರಾಮಯ್ಯ ಅವರಿಗಿದೆ.ಹೀಗಾಗಿ ಅನಗತ್ಯ ಸಂಶಯಗಳು ಬೇಕಿಲ್ಲ ಎಂದರು.
ಇಂದು ನಡೆದ ಸಭೆಯಲ್ಲಿ ಹಲವು ಅಂಶಗಳ ಕುರಿತು ಸವಿವರವಾದ ಚರ್ಚೆ ನಡೆದಿದೆ.ಈಗ ಯಾವ ವಿಷಯಗಳ ಕುರಿತೂ ಗೊಂದಲಗಳಿಲ್ಲ.ಹೀಗಾಗಿ ಮಾಧ್ಯಮಗಳೂ ಗೊಂದಲಕ್ಕೊಳಗಾಗುವ ಅಗತ್ಯವಿಲ್ಲ ಎಂದರು.
ಸುದ್ದಿಗೋಷ್ಟಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದರು.ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಉಭಯ ಪಕ್ಷಗಳ ಹಲ ನಾಯಕರು ಭಾಗವಹಿಸಿ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.


ಸಂಬಂಧಿತ ಟ್ಯಾಗ್ಗಳು

#Loksabha 2019 #JDS #Rahul Gandhi #Congress


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ