ಮೈತ್ರಿ ಸರ್ಕಾರದ ಸಮಸ್ಯೆ ಬಗೆಹರಿಸಲು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಮಧ್ಯೆ ಪ್ರವೇಶ

 AICC president Rahul Gandhi intervened to resolve alliance government issues

19-03-2019

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಸೋಲಿಗೆ ಕಾಂಗ್ರೆಸ್‍ನ ಸ್ಥಳೀಯ ನಾಯಕರೇ ಬಿಜೆಪಿ ಜತೆ ಕೈಜೋಡಿಸುತ್ತಿದ್ದು ಇದರ ಪರಿಣಾಮವಾಗಿ ಮೈತ್ರಿ ಸರ್ಕಾರ ಜೂನ್ ತಿಂಗಳಲ್ಲಿ ಪತನವಾಗಬಹುದು ಎಂದು ಮಾಜಿ ಪ್ರಧಾನಿ ದೇವೇಗೌಡ ಕೈ ಪಾಳೆಯದ ವರಿಷ್ಟರಿಗೆ ವಿವರಿಸಿದ್ದು ಈ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಬಗೆಹರಿಸಲು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರೇ ಮಧ್ಯೆ ಪ್ರವೇಶಿಸಿದ್ದಾರೆ.

ಇದೇ ಕಾರಣಕ್ಕಾಗಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ಜತೆ ಸಮಾಲೋಚನೆ ನಡೆಸಿದ್ದು,ಉಭಯ ಪಕ್ಷಗಳ ನಡುವಣ ಗೊಂದಲವನ್ನು ಪರಿಹರಿಸುವ ಹೊಣೆಗಾರಿಕೆ ನಿಮ್ಮದು ಎಂದು ಹೇಳಿದ್ದಾರೆ.ರಾಹುಲ್‍ಗಾಂಧಿ ಅವರ ಸೂಚನೆಯ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ ಅವರು ಇಂದು ಹಾಸನ ಜಿಲ್ಲೆಯ ಕಾಂಗ್ರೆಸ್ ನಾಯಕರ ಜತೆ ಚರ್ಚೆ ನಡೆಸಿದ್ದಲ್ಲದೆ,ಬೇರೆ ಕ್ಷೇತ್ರಗಳ ಪ್ರಮುಖರ ಜತೆಗೂ ಚರ್ಚೆ ನಡೆಸಿದ್ದಾರೆ.

ಈ ಮಹಾಸಮರದ ನಂತರ ರಾಹುಲ್‍ಗಾಂಧಿ ಅವರು ಪ್ರಧಾನಿಯಾಗಬೇಕು ಎಂಬ ಬಯಕೆ ನಮ್ಮದು.ಈ ಬಯಕೆಗೆ ಹೊಡೆತ ಕೊಡಬೇಡಿ.ಜೆಡಿಎಸ್‍ನ ಕ್ಯಾಂಡಿಡೇಟುಗಳಿಗೆ ಸಂಪೂರ್ಣ ಬೆಂಬಲ ನೀಡಿ ಎಂದು ಸಿದ್ಧರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.

ಇಷ್ಟಾದರೂ ಹಾಸನ,ಮಂಡ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ವಿಷಯದಲ್ಲಿ ಸ್ಥಳೀಯ ನಾಯಕರ ಅಸಮಾಧಾನ ಮುಂದುವರಿದಿದ್ದು ಪರಿಸ್ಥಿತಿ ತಮ್ಮ ಕೈ ಮೀರಿ ಹೋಗಿರುವ ಕುರಿತು ಸಿದ್ದರಾಮಯ್ಯ ಚಿಂತಿತರಾಗಿದ್ದಾರೆ.

ಅಂದ ಹಾಗೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ 20 ಹಾಗೂ ಜೆಡಿಎಸ್‍ನ 8 ಮಂದಿ ಕಣಕ್ಕಿಳಿಯಬೇಕು ಎಂದು ಉಭಯ ಪಕ್ಷಗಳ ವರಿಷ್ಟರು ನಿರ್ಧರಿಸಿದ್ದರು.ಆದರೆ ಈ ನಿರ್ಧಾರದ ಬೆನ್ನಲ್ಲೇ ಸ್ಥಳೀಯ ಮಟ್ಟದಲ್ಲಿ ಗೊಂದಲ ಶುರುವಾಗಿದ್ದು ದಿನ ಕಳೆದಂತೆ ಅದು ಹೆಚ್ಚಾಗುತ್ತಲೇ ನಡೆದಿದೆ.

ಹೀಗಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಪರಿಸ್ಥಿತಿಯನ್ನು ತಹಬಂದಿಗೆ ತರಲು ನಿರಂತರ ಸರ್ಕಸ್ ನಡೆಸಿದ್ದು ಇಷ್ಟರ ನಡುವೆಯೂ ಹಾಸನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೈ ಪಕ್ಷದ ನಾಯಕರು ಕೈ ಕೊಟ್ಟು ಬಿಜೆಪಿ ಕಡೆ ಹೋಗತೊಡಗಿದ್ದಾರೆ.

ಇದೇ ಕಾರಣಕ್ಕಾಗಿ ಅಸಮಾಧಾನಗೊಂಡಿರುವ ದೇವೇಗೌಡ, ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಕನಿಷ್ಟ ಹದಿನೈದು ಸೀಟುಗಳನ್ನಾದರೂ ಗೆಲ್ಲುವ ನಿರೀಕ್ಷೆ ಇರಿಸಿಕೊಳ್ಳಲಾಗಿತ್ತು. ಆದರೆ ಸಧ್ಯದ ಪರಿಸ್ಥಿತಿ ನೋಡಿದರೆ ಗೆಲುವಿನ ಸಂಖ್ಯೆ ಕುಸಿತ ಕಾಣುವುದು ನಿಶ್ಚಿತವಾಗಿದೆ.

ಕಾಂಗ್ರೆಸ್ ಅಭ್ಯರ್ಥಿಗಳು ಸ್ಫರ್ಧಿಸಿದಲ್ಲಿ ಮುಕ್ತ ಮನಸ್ಸಿನಿಂದ ಬೆಂಬಲ ನೀಡಲು ಜೆಡಿಎಸ್ ತಯಾರಿದ್ದರೂ,ಜೆಡಿಎಸ್ ಕ್ಯಾಂಡಿಡೇಟುಗಳು ಸ್ಪರ್ಧಿಸಿದ ಕಡೆಗಳಲ್ಲೆಲ್ಲ ಮುಕ್ತ ಬೆಂಬಲ ನೀಡಲು ಕಾಂಗ್ರೆಸ್‍ನ ಸ್ಥಳೀಯ ನಾಯಕರು ತಯಾರಿಲ್ಲ.ಇದಕ್ಕೆ ಮೇಲು ಹಂತದ ಕೆಲ ನಾಯಕರೇ ಕಾರಣ ಎಂದು ದೇವೇಗೌಡರು ಕೈ ಹೈಕಮಾಂಡ್‍ಗೆ ಹೆಸರುಗಳನ್ನು ನೀಡಿದ್ದಾರೆ.

ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷದ ಹಲವು ಶಾಸಕರನ್ನು ಬಿಜೆಪಿ ಕಡೆ ಕಳಿಸಿ ಮೈತ್ರಿಕೂಟ ಸರ್ಕಾರವನ್ನು ಉರುಳಿಸಲು ಸನ್ನಾಹ ನಡೆದಿದೆ.ಆ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ವಿರೋಧ ಪಕ್ಷದಲ್ಲಿ ಕೂತರೂ ಪರವಾಗಿಲ್ಲ ಎಂಬ ಹಠಮಾರಿ ಧೋರಣೆಯನ್ನು ಕೆಲವರು ತಳೆದಿದ್ದಾರೆ.

ಆದರೆ ಒಂದು ಸಲ ಬಿಜೆಪಿ ಅಧಿಕಾರಕ್ಕೆ ಬಂದು ಕುಳಿತರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಸಂಕಷ್ಟ ಎದುರಿಸಬೇಕಾಗುತ್ತದೆ.ಹೀಗಾಗಿ ನಿಮ್ಮ ರಾಜ್ಯ ನಾಯಕರಿಗೆ ಹೇಳಿ ಪರಿಸ್ಥಿತಿ ತಿಳಿಗೊಳ್ಳುವಂತೆ ಮಾಡಿ.

ಇಲ್ಲದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಾಣುವುದರ ಜತೆಗೆ ಜೂನ್ ವೇಳೆಗೆ ಮೈತ್ರಿ ಸರ್ಕಾರವೂ ಪತನವಾಗಲಿದೆ.ಹಾಗೇನಾದರೂ ಆದರೆ ದೊಡ್ಡ ಮಟ್ಟದ ನಷ್ಟವಾಗುವುದು ಕಾಂಗ್ರೆಸ್ ಪಕ್ಷಕ್ಕೆ ಎಂಬುದನ್ನು ಮರೆಯಬಾರದು.

ಹಾಸನ,ಮಂಡ್ಯ ಹಾಗೂ ಹಲ ಕ್ಷೇತ್ರಗಳಲ್ಲಿ ಸ್ಥಳೀಯ ನಾಯಕರನ್ನು ಎತ್ತಿ ಕಟ್ಟಿ ಬಿಜೆಪಿಯ ಕಡೆ ಹೋಗುವಂತೆ ನಿಮ್ಮ ಪಕ್ಷದ ನಾಯಕರೇ ನೋಡಿಕೊಳ್ಳುತ್ತಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿದ್ದರೂ ನೇರವಾಗಿ ದೂರುವ ಸ್ಥಿತಿಯಲ್ಲಿ ನಾವಿಲ್ಲ.

ಹೀಗಾಗಿ ನೀವೇ ಮಧ್ಯೆ ಪ್ರವೇಶಿಸಿ ಉಭಯ ಪಕ್ಷಗಳ ನಡುವೆ ಉತ್ತಮ ಸಂಬಂಧ ಏರ್ಪಡುವಂತೆ ಮಾಡಬೇಕು.ಉಭಯ ಪಕ್ಷಗಳ ಪೈಕಿ ಯಾವುದೇ ಪಕ್ಷದ ಕ್ಯಾಂಡಿಡೇಟು ಕಣಕ್ಕಿಳಿದಿದ್ದರೂ ಅವರಿಗೆ ಮತ್ತೊಂದು ಪಕ್ಷ ಸಂಪೂರ್ಣ ಬೆಂಬಲ ನೀಡಬೇಕು.

ಇಲ್ಲದೆ ಹೋದರೆ ಜನ ನಿರೀಕ್ಷಿಸುವ ಬೆಳವಣಿಗೆಯನ್ನು ನಾವು ನಿರೀಕ್ಷಿಸಲು ಸಾಧ್ಯವಿಲ್ಲ. ಬಡ, ಕೆಳ ಮಧ್ಯಮ ವರ್ಗದ ಜನರಿಗೆ ನರೇಂದ್ರಮೋದಿ ನೇತೃತ್ವದ ಸರ್ಕಾರದ ವಿರುದ್ಧ ಆಕ್ರೋಶವಿದೆ.

ಅದನ್ನು ಎನ್‍ಕ್ಯಾಶ್ ಮಾಡಿಕೊಳ್ಳುವ ಮೂಲಕ ಮುಂದಿನ ಲೋಕಸಭಾ ಚುನಾವಣೆಯ ನಂತರ ಕೇಂದ್ರದ ಅಧಿಕಾರ ಗದ್ದುಗೆಯನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಹಿಡಿಯುವಂತಾಗಬೇಕು.

ಆದರೆ ಸ್ಥಳೀಯ ನಾಯಕರ ವರ್ತನೆ ನೋಡಿದರೆ ಕರ್ನಾಟಕದ ಮೈತ್ರಿ ಸರ್ಕಾರವೂ ಅವರಿಗೆ ಬೇಕಿಲ್ಲ.ಹಾಗೆಯೇ ದಿಲ್ಲಿ ಗದ್ದುಗೆಯ ಮೇಲೆ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಕೂರುವುದೂ ಬೇಕಿಲ್ಲ ಎಂದು ದೇವೇಗೌಡರು ವಿವರಿಸಿದ್ದಾರೆ.

ಅವರ ಮಾತಿನ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ರಾಜ್ಯ ನಾಯಕರೊಂದಿಗೆ ಮಾತುಕತೆ ನಡೆಸಿದ್ದು,ಅದಕ್ಕೆ ಪೂರಕವಾಗಿ ಉಭಯ ಪಕ್ಷಗಳ ಸ್ಥಳೀಯ ನಾಯಕರ ಮಧ್ಯೆ ಸಾಮರಸ್ಯ ತರಲು ಸಿದ್ಧರಾಮಯ್ಯ ಹರಸಾಹಸ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#Karnataka #Rahul Gandhi # Alliance government # Intervened


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ