ಪ್ರಮೋದ್ ಸಾವಂತ್ ಗೋವಾದ ನೂತನ ಸಿಎಂ 

 Pramod Sawant is the New CM of Goa

19-03-2019

ಗೋವಾ ಸಿಎಂ ಮನೋಹರ್ ಪರಿಕ್ಕರ್ ಅಂತ್ಯಸಂಸ್ಕಾರ ನಡೆದ ಕೆಲವೆ ಗಂಟೆಗಳಲ್ಲೇ ಗೋವಾದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಪ್ರಮೋದ್ ಸಾವಂತ್ ಮಧ್ಯರಾತ್ರಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 
ಮನೋಹರ್ ಪರಿಕ್ಕರ್ ಆರೋಗ್ಯ ಬಿಗಡಾಯಿಸಿದಾಗಿನಿಂದಲೂ ಕಾಂಗ್ರೆಸ್ ಅಧಿಕಾರ ಸ್ಥಾಪನೆಗೆ ಹವಣಿಸುತ್ತ ಬಂದಿದ್ದರಿಂದ ಬಿಜೆಪಿಗೆ ತ್ವರಿತವಾಗಿ ಸಿಎಂ ಆಯ್ಕೆ ಮಾಡುವ ಹೊಣೆಗಾರಿಕೆ ಎದುರಾಗಿತ್ತು. 


ಈ ಹಿನ್ನೆಲೆಯಲ್ಲಿ ಮನೋಹರ್ ಪರಿಕ್ಕರ್ ನಿಧನದ ಬೆನ್ನಲ್ಲೇ ಸಭೆ ಸೇರಿದ ಬಿಜೆಪಿ ನಾಯಕರು ಮುಂದಿನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ನಡೆಸಿದ್ದರು.  ಈ ವೇಳೆ ಆರ್‍ಎಸ್‍ಎಸ್ ಕಾರ್ಯಕರ್ತ ಹಾಗೂ ಎಮ್‍ಎಲ್‍ಎ ಪ್ರಮೋದ್ ಸಾವಂತ್‍ರನ್ನು ಬಿಜೆಪಿ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. 

ಮಂಗಳವಾರ ಬೆಳಗಿನ ಜಾವ 2 ಗಂಟೆಗೆ ನಡೆದ ಸರಳ ಸಮಾರಂಭದಲ್ಲಿ  ರಾಜ್ಯಪಾಲೆ ಮೃದುಲಾ ಸಿನ್ಹಾ ಪ್ರಮೋದ್ ಸಾವಂತ್‍ಗೆ ಪ್ರಮಾಣವಚನ ಬೋಧಿಸಿದರು. ಇದೇ ವೇಳೆ ಮಹಾರಾಷ್ಟ್ರ ಗೋಮಂತಕ್ ಪಕ್ಷದ ಸುಧಿನ್ ಧವಳಿಕರ್ ಹಾಗೂ ಗೋವಾ ಫಾವರ್ಡ ಪಾರ್ಟಿಯ ವಿಜಯ ಸರ್ದೇಸಾಯಿ ಉಪಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದರು. 

ಪರಿಕ್ಕರ್ ನಿಧನದ ಬೆನ್ನಲ್ಲೇ ಗೋವಾದಲ್ಲಿ ರಾಜಕೀಯ ಮೇಲಾಟಗಳು ಆರಂಭಗೊಂಡಿತ್ತು. ಹಲವರು ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿದ್ದು,  ಪರಿಕ್ಕರ್‍ಗೆ ಬೆಂಬಲ ನೀಡಿದ್ದೇವು. ಬಿಜೆಪಿಗಲ್ಲ ಎಂಬ ವಾದ ಮಂಡಿಸಿದ್ದರು. ಬಳಿಕ ಬಿಜೆಪಿಯ ಹಿರಿಯ ನಾಯಕ ನಿತಿನ್ ಗಡ್ಕರಿ ಮನವೊಲಿಸಿದ ಬಳಿಕ ಅಸಮಧಾನಗಳು ಕೊನೆಯಾಗಿದ್ದು, ಎರಡು ಮಿತ್ರಪಕ್ಷಗಳು ಹಾಗೂ ಪಕ್ಷೇತರರು ಬಿಜೆಪಿ ಬೆಂಬಲಿಸಿದ್ದಾರೆ. 


ಪ್ರಸ್ತುತ ಗೋವಾ ವಿಧಾನಸಭೆಯಲ್ಲಿ 36 ಸದಸ್ಯರು ಇದ್ದು, ಈ ಸಂಖ್ಯೆಗೆ ಅನುಗುಣವಾದ ಬಹುಮತವನ್ನು ಬಿಜೆಪಿ ಹೊಂದಿದೆ. ಕಾಂಗ್ರೆಸ್ ಕೇವಲ 15 ಸದಸ್ಯರನ್ನು ಮಾತ್ರ ಹೊಂದಿದ್ದು,  ಮ್ಯಾಜಿಕ್ ಸಂಖ್ಯೆ ತಲುಪಲು ಕಾಂಗ್ರೆಸ್‍ಗೆ ಇನ್ನು 4 ಕ್ಕೂ ಅಧಿಕ ಸದಸ್ಯರ ಬೆಂಬಲ ಬೇಕಿದೆ. ಒಟ್ಟಿನಲ್ಲಿ ಸರಳ ಸಿಎಂ ಪರಿಕ್ಕರ್ ಯುಗಾಂತ್ಯದೊಂದಿಗೆ ಗೋವಾದಲ್ಲಿ ಹೊಸ ರಾಜಕೀಯ ಶಕೆ ಆರಂಭಗೊಂಡಂತಾಗಿದೆ. 
 


ಸಂಬಂಧಿತ ಟ್ಯಾಗ್ಗಳು

#Goa #Pramod Sawant #New Cm #Manohar Parikkar


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ