ಕಬ್ಬನ್ ಪಾರ್ಕ್‍ನಲ್ಲಿ ಅಂತರ್ಜಲ ಹೆಚ್ಚಿಸಲು ಇಂಗುಗುಂಡಿ ನಿರ್ಮಾಣ

 Construction of the Ingugundi to increase groundwater at Cubbon Park

18-03-2019

 ನಗರದ  ಕಬ್ಬನ್‍ಪಾರ್ಕ್‍ನಲ್ಲಿ ಗಿಡಗಳಿಗೆ ನೀರುಣಿಸಿ ಅಂತರ್‍ಜಲವನ್ನು ಹೆಚ್ಚಿಸಲು ಇಂಗು ಗುಂಡಿಗಳನ್ನು ನಿರ್ಮಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ.ಕಬ್ಬನ್‍ಪಾರ್ಕ್‍ನಲ್ಲಿ ಅಳವಡಿಸಿರುವ ಎಸ್‍ಟಿಪಿ ಘಟಕದಿಂದ ಪಾರ್ಕಿಗೆ ನೀರು ಉಣಿಸಲು ಜಲಮಂಡಳಿಗೆ ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ಬಿಲ್ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಇಂಗು ಗುಂಡಿಗಳನ್ನು ನಿರ್ಮಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಬ್ಬನ್‍ಪಾರ್ಕ್‍ನ ಸುಮಾರು 198 ಎಕರೆ ವಿಸ್ತೀರ್ಣದಲ್ಲಿ 50 ಮಳೆನೀರು ಇಂಗು ಗುಂಡಿಗಳನ್ನು ತೆಗೆಯಲು ನಿರ್ಧರಿಸಲಾಗಿದೆ. ಜತೆಗೆ ಇಲ್ಲಿ ಎರಡು ಕೊಳವೆ ಬಾವಿಗಳಿದ್ದು, 7 ಕಲ್ಯಾಣಿಗಳಿವೆ. ಇವುಗಳ ಪುನರುಜ್ಜೀವನ ಕಾರ್ಯವನ್ನೂ ಕೈಗೊಳ್ಳಲಾಗಿದೆ

ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ಪಾರ್ಕ್‍ಗಳು ನೀರಿನ ಮೂಲಕ್ಕಾಗಿ ಎಸ್‍ಟಿಪಿ ಘಟಕಗಳನ್ನು ಅವಲಂಬಿಸಿದ್ದು, ವಾರ್ಷಿಕ 90 ಲಕ್ಷದಿಂದ ಒಂದು ಕೋಟಿ ರೂ.ವರೆಗೂ ನೀರಿನ ಬಿಲ್ ಅನ್ನು ಜಲಮಂಡಳಿಗೆ ಪಾವತಿಸಬೇಕಿದೆ. ಮಳೆಗಾಲದಲ್ಲಿ ನೀರಿನ ಕೊರತೆ ಇರುವುದಿಲ್ಲ. ಆಗ ಪ್ರತಿ ತಿಂಗಳಿಗೆ 3-4 ಲಕ್ಷ ರೂ. ಬಿಲ್ ಬಂದರೆ, ಬೇಸಿಗೆಯಲ್ಲಿ ಮಾಸಿಕ 6-8 ಲಕ್ಷ ರೂ. ಪಾವತಿಸಬೇಕಾಗಿದೆ. ಹಾಗಾಗಿ ನೀರು ಗುಂಡಿಗಳನ್ನು ತೆಗೆಯಲು ಉದ್ದೇಶಿಸಲಾಗಿದೆ.

240 ಎಕರೆ ವಿಸ್ತೀರ್ಣದ ಲಾಲ್‍ಬಾಗ್‍ನಲ್ಲೂ ನೀರಿನ ಸಮಸ್ಯೆ ಇದೆ. ಕೆರೆ ಇರುವುದರಿಂದ ಅಂತರ್ಜಲ ತೀರಾ ಕೆಳಕ್ಕೆ ಹೋಗಿಲ್ಲ. ಮೂರು ಬೋರ್‍ವೆಲ್‍ಗಳು ಮಾತ್ರ ಇದ್ದು, ಉಳಿದಂತೆ 1.5 ಎಂಎಲ್‍ಡಿ ನೀರಿನ ಅಗತ್ಯತೆಯನ್ನು ನೀಗಿಸಲು ಎಸ್‍ಟಿಪಿ ಘಟಕದ ಮೊರೆ ಹೋಗಿದ್ದಾರೆ. ಇಲ್ಲಿಯೂ ಮಳೆ ನೀರು ಗುಂಡಿಗಳನ್ನು ನಿರ್ಮಿಸಬೇಕಿದೆ.

ಎರಡೂ ಉದ್ಯಾನಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಿಲ್ಲ. ಅದರಲ್ಲೂ ಕಬ್ಬನ್‍ಪಾರ್ಕ್‍ನಲ್ಲಿ ಬೃಹತ್ ಆರ್‍ಒ ಘಟಕವನ್ನು ಅಳವಡಿಸಲಾಗಿದೆ. ಹೀಗಾಗಿ ಉದ್ಯಾನಕ್ಕೆ ಬರುವ ಪ್ರವಾಸಿಗರಿಗೆ ಕುಡಿಯುವ ನೀರಿಗೆ ಸಮಸ್ಯೆಯಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#Cubban Park #Ingugundi #Groundwater #Government


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ