ದೇಶ ಕಂಡ ಸರಳ ಸಿಎಂ ಮನೋಹರ್ ಪರಿಕ್ಕರ್ ಇನ್ನಿಲ್ಲ 

Simple CM Manohar Parikkar No More

18-03-2019

ಸರಳತೆ ಹಾಗೂ ಕರ್ತವ್ಯ ನಿಷ್ಠೆಗೆ ಹೆಸರಾಗಿದ್ದ ಗೋವಾ ಸಿಎಂ  ಹಾಗೂ ಮಾಜಿ ರಕ್ಷಣಾ ಸಚಿವ  ಮನೋಹರ್ ಪರಿಕ್ಕರ್, ಧೀರ್ಘಕಾಲದ ಅನಾರೋಗ್ಯದ ಬಳಿಕ ನಿನ್ನೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ಕಳೆದ ಒಂದು ವರ್ಷದಿಂದ ಹೊಟ್ಟೆಯ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಪರಿಕ್ಕರ್,  ಅನಾರೋಗ್ಯದ ಸ್ಥಿತಿಯಲ್ಲೂ ಮೂಗಿಗೆ ಆಕ್ಸಿಜನ್ ನಳಿಕೆ ಹಾಕಿಕೊಂಡೆ ಬಜೆಟ್ ಮಂಡಿಸುವ ಮೂಲಕ ತಮ್ಮ ಕರ್ತವ್ಯನಿಷ್ಠೆ ಮೆರೆದಿದ್ದರು. 

ಕಳೆದ ಒಂದು ವಾರದಿಂದ ತೀವ್ರ ಅಸ್ವಸ್ಥರಾಗಿದ್ದ ಪರಿಕ್ಕರ್, ಮನೆಯಿಂದಲೇ ಸಿಎಂ ಹುದ್ದೆ ನಿಭಾಯಿಸುತ್ತಿದ್ದರು. ಭಾನುವಾರ  ಸಂಜೆ ವೇಳೆಗೆ ತಮ್ಮ ನಿವಾಸದಲ್ಲಿ ನಿಧನರಾದರು. ನಾಲ್ಕನೇ ಬಾರಿ ಗೋವಾ ಸಿಎಂ ಆಗಿದ್ದ ಪರಿಕ್ಕರ್, ಪ್ರಾಮಾಣಿಕ ರಾಜಕಾರಣಿ ಮಾತ್ರವಲ್ಲ ತಮ್ಮ ಸರಳ ಜೀವನ ಶೈಲಿಯಿಂದ ಮನೆಮಾತಾಗಿದ್ದರು. 

ಸಿಎಂ ಆಗಿದ್ದಾಗಲೂ, ಶಾಸಕರಾಗಿದ್ದಾಗಲೂ ತಮ್ಮ ಕೆಲಸಗಳಿಗೆ ತಾವೆ ದ್ವಿಚಕ್ರವಾಹನದಲ್ಲಿ ತೆರಳುವಷ್ಟು ಸರಳತೆ ಅವರಲ್ಲಿ ಮನೆ ಮಾಡಿತ್ತು. ಬಾಲ್ಯದಿಂದಲೂ ಆರ್‍ಎಸ್‍ಎಸ್ ಒಡನಾಟದಲ್ಲಿ ಬೆಳೆದ ಪರಿಕ್ಕರ್, ಇತ್ತೀಚಿಗೆ ನಿಧನರಾದ ಕರ್ನಾಟಕದ ಹಿರಿಯ ರಾಜಕಾರಣಿ ಹಾಗೂ ಕೇಂದ್ರ ಸಚಿವರಾಗಿದ್ದ ಅನಂತಕುಮಾರ ಅವರೊಂದಿಗೆ ಆತ್ಮೀಯವಾದ ಸ್ನೇಹ ಸಂಬಂಧ ಹೊಂದಿದ್ದರು.

ಬಿಜೆಪಿ, ಗೋವಾ ಫಾರ್ವರ್ಡ ಪಾರ್ಟಿ, ಎಂಜಿಪಿ ಹಾಗೂ ಪಕ್ಷೇತರರನ್ನು ಒಗ್ಗೂಡಿಸಿ ಸರ್ಕಾರ ರಚಿಸಿದ್ದ ಪರಿಕ್ಕರ್ ಗೋವಾ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಪೆಟ್ರೋಲ್ ಬೆಲೆಯನ್ನು ಗಣನೀಯವಾಗಿ ಇಳಿಸಿ ರಾಜ್ಯದ ವಾಹನಸವಾರರ ಮೆಚ್ಚುಗೆಗೆ ಪರಿಕ್ಕರ್ ಪಾತ್ರವಾಗಿದ್ದರು.  

ರಕ್ಷಣಾ ಮಂತ್ರಿಯಾಗಿ 28 ತಿಂಗಳುಗಳ ಕಾಲ ಕಾರ್ಯನಿರ್ವಹಿಸಿದ್ದ ಪರಿಕ್ಕರ್, ಪಾಕಿಸ್ತಾನ ಹಾಗೂ ಭಯೋತ್ಪಾದನೆಯ ವಿರುದ್ಧ ಕೆಲ ಕಠಿಣ ಕ್ರಮಗಳ ಮೂಲಕ ಮೆಚ್ಚುಗೆಗಳಿಸಿದ್ದರು. ಪರಿಕ್ಕರ್ ನಿಧನಕ್ಕೆ ಪ್ರಧಾನಿ ಮೋದಿ, ಸೇರಿದಂತೆ ರಾಷ್ಟ್ರದ ಗಣ್ಯರು ಸಂತಾಪ ಸೂಚಿಸಿದ್ದು, ಅವರ ಮಾನವೀಯ ಮೌಲ್ಯ, ದಕ್ಷತೆ ಹಾಗೂ ಸಮರ್ಥಆಡಳಿತದ ಗುಣಗಾನ ಮಾಡಿದ್ದಾರೆ.  


ಸಂಬಂಧಿತ ಟ್ಯಾಗ್ಗಳು

#Goa #Manohar Parikkar #Cm #No More


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ