ಎಲೆಕ್ಷನ್‍ಗೆ ಡಿಜಿಟಲ್ ಟಚ್- ಅಕ್ರಮ ನಿಯಂತ್ರಣಕ್ಕೆ ಬಂದಿದೆ ಸಿ ವಿಜಿಲ್ 

 Digital Touch for Election - Illegal Controls C Vigil

15-03-2019

ಲೋಕಸಭೆ ಚುನಾವಣೆಗೆ ಸರ್ವ ಸನ್ನದ್ಧವಾಗಿರುವ ಭಾರತೀಯ ಚುನಾವಣಾ ಆಯೋಗವು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಅನುಕೂಲ ಕಲ್ಪಿಸಿಕೊಡುವ ದೃಷ್ಟಿಯಿಂದ ಡಿಜಿಟಲ್ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದೆ. ನೀತಿ ಸಂಹಿತೆ ಉಲ್ಲಂಘನೆ ಮೇಲೆ ಕಣ್ಣಿಡಲು ಹಾಗೂ ಅಂಗವಿಕಲ ಮತದಾರರ ಸಹಾಯಕ್ಕೆ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ  ಚುನಾವಣಾ ಆಯೋಗ ಆ್ಯಪ್  ಅಭಿವೃದ್ಧಿ ಪಡಿಸಿದ್ದು,  ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ  ಅನುಮತಿ ಪಡೆಯಲು ವಿಶೇಷ ಪ್ರತ್ಯೇಕ ವೆಬ್ ಸೈಟ್ ಕೂಡ ರೂಪಿಸಿದೆ. 

ಚುನಾವಣೆಯಲ್ಲಿ ಮತ ಸೆಳೆಯಲು ಸರ್ಕಸ್ ನಡೆಸುವ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ಮೇಲೆ ನಿಗಾ ಇಡಲು ಸಿ-ವಿಜಿಲ್ ಆ್ಯಪ್ ಪರಿಚಯಿಸಿದ್ದು, ಸಾರ್ವಜನಿಕರು ಈ ಆ್ಯಪ್‍ನ್ನು  ತಮ್ಮ ಮೊಬೈಲ್‍ಗಳಲ್ಲಿ ಇನ್‍ಸ್ಟಾಲ್ ಮಾಡಿಕೊಳ್ಳುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಚುನಾವಣಾ ಅಕ್ರಮಗಳ ಬಗ್ಗೆ ಮಾಹಿತಿ ನೀಡಬಹುದಾಗಿದೆ. 

 ಸಾರ್ವಜನಿಕರು ಹಿಂದೆಲ್ಲ ಕೇವಲ ದೂರು ಸಲ್ಲಿಸಬೇಕಿತ್ತು. ಆದರೆ ಈಗ ಈ ಆ್ಯಪ್  ಮೂಲಕ  ದೂರಿಗೆ ಸಂಬಂಧಿಸಿದ  ಪೋಟೋ, ವಿಡಿಯೋವನ್ನು ಕೂಡ ಅಪ್‍ಲೋಡ್ ಮಾಡುವ ಅವಕಾಶವಿದೆ. ಇದರಿಂದ ದೂರಿನ ಬಗ್ಗೆ ಇನ್ನಷ್ಟು ಮಾಹಿತಿಗಳು ಆಯೋಗಕ್ಕೆ ಲಭ್ಯವಾಗೋದರಿಂದ ಕ್ರಮಕೈಗೊಳ್ಳಲು ನೆರವಾಗುತ್ತದೆ. 
ಇನ್ನು ಈ ಬಾರಿ ಅಂಗವಿಕಲ ಮತದಾರರಿಗಾಗಿ ಪ್ರತ್ಯೇಕ ಆ್ಯಪ್  ಸಿದ್ದಪಡಿಸಲಾಗಿದ್ದು,  ಪಿಡಬ್ಲುಡಿ ಎಂಬ ಹೆಸರಿನ ಆ್ಯಪ್  ಆ್ಯಂಡ್ರಾಯ್ಡ್ ಸ್ಮಾರ್ಟ್‍ಪೋನ್‍ನ ಪ್ಲೇ ಸ್ಟೋರ್‍ನಲ್ಲಿ ಲಭ್ಯವಿದೆ. ಅಂಗವಿಕಲರು ಈ ಆ್ಯಪ್ ಬಳಸುವ ಮೂಲಕ ಚುನಾವಣಾ ಆಯೋಗಕ್ಕೆ ತಮ್ಮ ಬಗ್ಗೆ ಮಾಹಿತಿ ನೀಡಬಹುದಾಗಿದ್ದು, ತಮಗೆ ಅಗತ್ಯವಿರುವ ಸೌಲಭ್ಯಗಳಾದ ವೀಲ್ ಚೇರ್ ಗಳಂತಹ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. 

ವೋಟರ್ ಹೆಲ್ಪ್‍ಲೈನ್ ಎಂಬ ಆ್ಯಪ್  ಕೂಡ ಇದ್ದು ಇದನ್ನು, ಮತದಾರರು  ತಮ್ಮ ಹೆಸರು ವೋಟರ್ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಲು ಬಳಸಿಕೊಳ್ಳಬಹುದಾಗಿದೆ. ಅಲ್ಲದೆ ಹೊಸದಾಗಿ ಕೂಡ ನೋಂದಣಿಗೆ ಅರ್ಜಿ ಸಲ್ಲಿಸಬಹುದಾಗಿದೆ.  ಇನ್ನು ಕೇವಲ ಮತದಾರರಿಗೆ ಮಾತ್ರವಲ್ಲದೇ, ಅಭ್ಯರ್ಥಿಗಳಿಗಾಗಿಯೂ ಸುವಿಧಾ  ಎಂಬ ಆ್ಯಪ್  ಸಿದ್ಧಪಡಿಸಲಾಗಿದ್ದು, ಇದನ್ನು ಬಳಸಿಕೊಂಡು ಅಭ್ಯರ್ಥಿಗಳು ತಮ್ಮ ನಾಮಪತ್ರದ ಸ್ಥಿತಿ-ಗತಿಯ ಕುರಿತು ಮಾಹಿತಿ ಪಡೆಯಬಹುದಾಗಿದೆ. 


ಸಂಬಂಧಿತ ಟ್ಯಾಗ್ಗಳು

#Election-2019 #C Vigil # Digital Touch # Voter Helpline


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ