ಬೋಟ್ ನಾಪತ್ತೆ ಪ್ರಕರಣ- ಮೀನುಗಾರರ ಕುಟುಂಬದಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ 

Boat Missing Case - Decision to Boycott Election From Family of Fishermen

14-03-2019

ರಾಜ್ಯ ಹಾಗೂ ದೇಶದೆಲ್ಲೆಡೆ ನಿಧಾನಕ್ಕೆ ಲೋಕಸಭೆ ಚುನಾವಣೆ ಕಾವು ಏರತೊಡಗಿದ್ದರೆ ಆ ಮನೆಗಳಲ್ಲಿ ಮಾತ್ರ ಸಶ್ಮಾನ ಮೌನ ಆವರಿಸಿದೆ. ಹೌದು ಸುವರ್ಣ ತ್ರಿಭುಜ್ ಬೋಟ್ ನಾಪತ್ತೆ ಪ್ರಕರಣದ ತನಿಖೆಯಲ್ಲಿ ಯಾವುದೆ ಪ್ರಗತಿಯಾಗದ ಹಿನ್ನೆಲೆಯಲ್ಲಿ ನಾಪತ್ತೆಯಾಗಿರುವ ಮೀನುಗಾರರ ಮನೆಯಲ್ಲಿ ಮೌನ ಆವರಿಸಿದ್ದು, ಪೋಷಕರು, ಮಕ್ಕಳು, ಸಂಬಂಧಿಕರು ಇದ್ದು ಸತ್ತಂತೆ ಜೀವಿಸುತ್ತಿದ್ದಾರೆ. 

ಅಷ್ಟೇ ಅಲ್ಲ  ಮೀನುಗಾರರ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೇ ತನಿಖೆಯನ್ನು ಸೂಕ್ತವಾಗಿ ನಡೆಸಿಲ್ಲ ಎಂದು ಆರೋಪಿಸಿರುವ ಕುಟುಂಬಸ್ಥರು ಹಾಗೂ ಮೀನುಗಾರರನ್ನು ಕಳೆದುಕೊಂಡಿರುವ  ಗ್ರಾಮದ ಜನರು ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. 
ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಸಹಿತ 7 ಮಂದಿ ಮೀಮಗಾರರು ನಾಪತ್ತೆಯಾಗಿ ಇಂದಿಗೆ 89 ದಿನಗಳು ಕಳೆದಿದ್ದರೂ ಯಾವುದೇ ಸುಳಿವು ಕೂಡ ಪತ್ತೆಯಾಗಿಲ್ಲ. ಬೋಟ್ ನಾಪತ್ತೆಯಾಗಿ 7 ಮಂದಿ ಮೀನುಗಾರರು ಕಣ್ಮರೆಯಾದಾಗ ಸಾಲು-ಸಾಲು ಜನಪ್ರತಿನಿಧಿಗಳು ಮೀನುಗಾರರ ಮನೆಗೆ ತೆರಳಿ ಸಾಂತ್ವನ  ಹೇಳಿದ್ದರು. ಶೀಘ್ರ ಉನ್ನತ ಮಟ್ಟದ ತನಿಖೆ ಮಾಡಿ ಮೀನುಗಾರರನ್ನು ಹಾಗೂ ಬೋಟ್‍ನ್ನು ಪತ್ತೆ ಹಚ್ಚುವುದಾಗಿ ಭರವಸೆ ನೀಡಿದ್ದರು. ಆದರೆ ಎಲ್ಲರೂ ಈ ಪ್ರಕರಣವನ್ನು ಮರೆತೆ ಬಿಟ್ಟಿದ್ದು, ಅವರ ಕುಟುಂಬಸ್ಥರು ಮಾತ್ರ ಇವತ್ತಿಗೂ ನಾಪತ್ತೆಯಾದವರನ್ನು ನೆನೆದು ಕಣ್ಣೀರಿಡುತ್ತಿದ್ದಾರೆ. 
ನಾಪತ್ತೆಯಾದ ಬೋಟ್ ಹಾಗೂ ಮೀನುಗಾರರ ಪತ್ತೆಗೆ ಹೆಚ್ಚಿನ ಮಟ್ಟದ ತನಿಖೆ ಮಾಡಿಸುವಂತೆ ಆಗ್ರಹಿಸಿ ಮೀನುಗಾರರ ನಿಯೋಗವೊಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ಭೇಟಿ ಮಾಡಿತ್ತು. ಈ ವೇಳೆ ಮಾತನಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ ಶ್ರೀಘ್ರದಲ್ಲೆ ಮಲ್ಪೆ ಬಂದರಿಗೆ ಭೇಟಿ ನೀಡಿ ಮಾಹಿತಿ ಪಡೆದು ತನಿಖೆಗೆ ಆದೇಶಿಸುವುದಾಗಿ ಭರವಸೆ ನೀಡಿದ್ದರು. 
ಆದರೆ ಇನ್ನೂ ನಿರ್ಮಲಾ ಸೀತಾರಾಮ ಕೂಡ ಭೇಟಿ ನೀಡಿಲ್ಲ. ಹೀಗಾಗಿ ಮೀನುಗಾರರ ಕುಟುಂಬದವರು ಸಂಘಟಿತರಾಗಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಇನ್ನಾದರೂ ಸಂಬಂಧ ಪಟ್ಟ ಇಲಾಖೆಯವರು ಎಚ್ಚೆತ್ತುಕೊಂಡು ಬಡಕುಟುಂಬಗಳ ಕಣ್ಣೀರು ಒರೆಸುವ  ಕೆಲಸ ಮಾಡಲಿದ್ದಾರಾ ಕಾದು ನೋಡಬೇಕಿದೆ. 


ಸಂಬಂಧಿತ ಟ್ಯಾಗ್ಗಳು

#Election 2019 #Boat Missing Case #Boycott #Suvarna Threebuja


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ